ಬೆಳಗಾವಿ: ‘ಡಿಸಿಸಿ ಬ್ಯಾಂಕಿನ 16 ನಿರ್ದೇಶಕರ ಹುದ್ದೆಗೆ ಅಕ್ಟೋಬರ್ 19ರಂದು ಚುನಾವಣೆ ನಡೆಯಲಿದೆ. ಇದಕ್ಕೆ ನಮ್ಮ ಪೆನಲ್‌ನಿಂದ 13 ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೇವೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿನ ಡಿಸಿಸಿ ಬ್ಯಾಂಕಿನಲ್ಲಿ ಏಳು ಕ್ಷೇತ್ರಗಳಿಗೆ ತಮ್ಮ ಪೆನಲ್‌ನ ಅಭ್ಯರ್ಥಿಗಳು ಗುರುವಾರ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ವಿವಿಧ ಕ್ಷೇತ್ರಗಳಿಗೆ ನಾವು ಅವಿರೋಧವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ರಯತ್ನ ನಡೆಸಿದ್ದೆವು. ಆದರೆ, ಚುನಾವಣೆ ನಡೆಯುವ ಸಾಧ್ಯತೆ ಇದೆ. ಅಥಣಿ, ಕಾಗವಾಡ ಮತ್ತು ಚಿಕ್ಕೋಡಿ ಕ್ಷೇತ್ರಗಳಿಂದ ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ’ ಎಂದರು.
‘ನಿಪ್ಪಾಣಿಯಿಂದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಯಬಾಗದಿಂದ ಅಪ್ಪಾಸಾಹೇಬ ಕುಲಗುಡೆ, ಯರಗಟ್ಟಿಯಿಂದ ಶಾಸಕ ವಿಶ್ವಾಸ ವೈದ್ಯ, ಸವದತ್ತಿಯಿಂದ ವಿರೂಪಾಕ್ಷಿ ಮಾಮನಿ, ಬೈಲಹೊಂಗಲದಿಂದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಚನ್ನಮ್ಮನ ಕಿತ್ತೂರಿನಿಂದ ವಿಕ್ರಮ ಇನಾಮದಾರ ಮತ್ತು ಖಾನಾಪುರದಿಂದ ಮಾಜಿ ಶಾಸಕ ಅರವಿಂದ ಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ. ಉಳಿದ ಆರು ಕ್ಷೇತ್ರಗಳ ಅಭ್ಯರ್ಥಿಗಳು ಅಕ್ಟೋಬರ್ 11ರಂದು ನಾಮಪತ್ರ ಸಲ್ಲಿಸಲಿದ್ದಾರೆ’ ಎಂದು ತಿಳಿಸಿದರು.
‘ಬೆಳಗಾವಿ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡಿದ್ದೀರಾ’ ಎಂಬ ಪ್ರಶ್ನೆಗೆ, ‘ನಾಮಪತ್ರ ಸಲ್ಲಿಕೆ ಸಮಯದಲ್ಲೇ ಬೆಳಗಾವಿ ಕ್ಷೇತ್ರದ ಅಭ್ಯರ್ಥಿ ಬಗ್ಗೆ ತಿಳಿಸಲಾಗುವುದು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮತ್ತು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು, ಚಿಕ್ಕೋಡಿ ಮತ್ತು ಸಹಕಾರಿ ಸಂಸ್ಥೆಗಳ ವ್ಯಾಪ್ತಿಗೆ ಬರುವ ಇತರೆ ಕ್ಷೇತ್ರದಿಂದ ಸ್ಪರ್ಧಿಸಲು ಅಭ್ಯರ್ಥಿ ನಿರ್ಧರಿಸಲಿದ್ದಾರೆ’ ಎಂದು ಹೇಳಿದರು.
‘ಡಿಸಿಸಿ ಬ್ಯಾಂಕಿನ ಹಲವು ಕ್ಷೇತ್ರಗಳಿಗೆ ಕಳೆದ 20 ವರ್ಷಗಳಿಂದ ಚುನಾವಣೆ ನಡೆದಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ನಾವು ಜಿಲ್ಲೆಯಾದ್ಯಂತ ಪ್ರಚಾರ ನಡೆಸುತ್ತಿದ್ದೇವೆ. ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಲು ಅನೇಕರು ಉತ್ಸಾಹದಿಂದ ನಾಮಪತ್ರ ಸಲ್ಲಿಸುತ್ತಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ಚುನಾವಣೆ ಕಠಿಣವಾಗಿದೆ. ಇನ್ನೂ ಕೆಲ ಕ್ಷೇತ್ರಗಳಲ್ಲಿ ಹೆಸರಿಗೆ ಮಾತ್ರ ನಡೆಯಲಿದೆ ಎಂಬ ಲಕ್ಷಣ ಕಾಣುತ್ತಿದೆ’ ಎಂದರು.
‘ಅನೇಕ ಹಾಲಿ ಮತ್ತು ಮಾಜಿ ಶಾಸಕರು ತಮ್ಮ ಕ್ಷೇತ್ರಗಳನ್ನು ಸಂಘಟಿಸಲು ಮತ್ತು ತಳಮಟ್ಟದಿಂದ ಮತದಾರರೊಂದಿಗೆ ಸಂಪರ್ಕದಲ್ಲಿ ಇರಲು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
**
‘ಎಲ್ಲ ಅಭ್ಯರ್ಥಿಗಳೂ ಬ್ಯಾಂಕಿಂಗ್ ತಜ್ಞರೇ’
‘ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ರಮೇಶ ಕತ್ತಿ ತಮ್ಮನ್ನು ಬ್ಯಾಂಕಿಂಗ್ ತಜ್ಞರೆಂದು ಪರಿಗಣಿಸುತ್ತಿರಬಹುದು. ಆದರೆ, ಕಣದಲ್ಲಿರುವ ಎಲ್ಲ ನಿರ್ದೇಶಕರು ಮತ್ತು ಅಭ್ಯರ್ಥಿಗಳು ಬ್ಯಾಂಕಿಂಗ್ ತಜ್ಞರೇ ಆಗಿದ್ದಾರೆ’ ಎಂದು ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
‘ಕಳೆದ ಒಂಬತ್ತು ತಿಂಗಳಲ್ಲಿ ನಾವು ಬ್ಯಾಂಕಿನ ಠೇವಣಿಯನ್ನು ₹200 ಕೋಟಿ ಹೆಚ್ಚಿಸಿದ್ದೇವೆ. ಬ್ಯಾಂಕ್ ಲಾಭ ಗಳಿಸಿದ್ದು, ಸಾಲಗಳನ್ನು ಸಹ ವಿತರಿಸಿದೆ’ ಎಂದರು.
**
‘ಜಾರಕಿಹೊಳಿ ಸಹೋದರರು–ಕತ್ತಿ ಕುಟುಂಬದ ನಡುವಿನ ಕದನವಲ್ಲ’
‘ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘಕ್ಕಿಂತ ಡಿಸಿಸಿ ಬ್ಯಾಂಕಿನ ಚುನಾವಣೆ ಭಿನ್ನವಾಗಿದೆ. ಅದು ತಾಲ್ಲೂಕು ಮಟ್ಟದಲ್ಲಿ ನಡೆದರೆ, ಇದು ಜಿಲ್ಲಾ ಮಟ್ಟದಲ್ಲಿ ನಡೆಯುತ್ತದೆ. ಇದು ಜಾರಕಿಹೊಳಿ ಸಹೋದರರು ಮತ್ತು ಕತ್ತಿ ಕುಟುಂಬದ ನಡುವಿನ ಕದನವಲ್ಲ’ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
‘ಇದು ರಾಜಕೀಯೇತರ ಚುನಾವಣೆ. ಇದರಲ್ಲಿ ಯಾವುದೇ ರಾಜಕೀಯ ಪಕ್ಷ ಭಾಗಿಯಾಗಿಲ್ಲ. ನಮ್ಮ ಸಮಿತಿಯಿಂದ ಕಣಕ್ಕಿಳಿಸಲಾದ ಅಭ್ಯರ್ಥಿಗಳು ಒಗ್ಗಟ್ಟಿನಿಂದ ಸ್ಪರ್ಧಿಸಿದ್ದಾರೆ. ಲಿಂಗಾಯತ ಸಮುದಾಯದ ನಿರ್ದೇಶಕರನ್ನೇ ಬ್ಯಾಂಕಿನ ಮುಂದಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
29 ನಾಮಪತ್ರ ಸಲ್ಲಿಕೆ
ಬೆಳಗಾವಿ: ಡಿಸಿಸಿ ಬ್ಯಾಂಕ್‌ನಲ್ಲಿ ವಿವಿಧ ಕ್ಷೇತ್ರಗಳಿಂದ ಸ್ಪರ್ಧೆ ಬಯಸಿ ಅಭ್ಯರ್ಥಿಗಳಿಂದ 29 ನಾಮಪತ್ರಗಳು ಗುರುವಾರ ಸಲ್ಲಿಕೆಯಾಗಿವೆ.
ರಾಮದುರ್ಗ ಕ್ಷೇತ್ರದಿಂದ ವಿಧಾನಸಭೆ ಮುಖ್ಯಸಚೇತಕ ಅಶೋಕ ಪಟ್ಟಣ, ನಿಪ್ಪಾಣಿ ಕ್ಷೇತ್ರದಿಂದ ಮುಖಂಡ ಉತ್ತಮ ಪಾಟೀಲ, ರಾಮದುರ್ಗ ಕ್ಷೇತ್ರದಿಂದ ಮುಖಂಡ ಮಲ್ಲಪ್ಪ ಯಾದವಾಡ ನಾಮಪತ್ರ ಸಲ್ಲಿಸಿದರು.
ವಿವಿಧ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ್ದರಿಂದ ಬ್ಯಾಂಕಿನ ಆವರಣ ಜನರಿಂದ ಕಿಕ್ಕಿರಿದು ತುಂಬಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.