ADVERTISEMENT

ಡಿಸಿಎಂ ಹುದ್ದೆ ಸೃಷ್ಟಿಗೆ ಅವಕಾಶವಿದೆಯೇ ಎಂಬುದರ ಮಾಹಿತಿ ನೀಡದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 7:35 IST
Last Updated 28 ಡಿಸೆಂಬರ್ 2020, 7:35 IST
ವಿಧಾನಸೌಧ
ವಿಧಾನಸೌಧ   
""

ಬೆಳಗಾವಿ: ‘ಉಪ ಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಗೆ ಅವಕಾಶವಿದೆಯೇ ಎಂಬ ಯಾವುದೇ ಮಾಹಿತಿ ವಿಧಾನಸೌಧದಲ್ಲಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಸಂಸದೀಯ ವ್ಯವಹಾರ ಹಾಗೂ ಶಾಸನ ರಚನಾ ಶಾಖೆ ಮತ್ತು ಕಾನೂನು ಇಲಾಖೆಗಳಲ್ಲಿ ಲಭ್ಯವಿಲ್ಲ ಎಂಬ ವಿಷಯವು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಿಂದ ತಿಳಿದುಬಂದಿದೆ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದರು.

ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ

‘ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ. ವಿಧಾನಸೌಧದಲ್ಲೂ ಈ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಅಸಂವಿಧಾನಿಕವಾದ ಈ ಹುದ್ದೆಗಳನ್ನು ರದ್ದುಪಡಿಸಿ, ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುವುದನ್ನು ತಪ್ಪಿಸುವಂತೆ ಆಗ್ರಹಿಸಿ ರಾಜ್ಯಪಾಲರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಪಡೆದ ಮಾಹಿತಿ ಲಗತ್ತಿಸಿ ಪತ್ರ ಬರೆಯಲಾಗಿದೆ’ ಎಂದು ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

‘ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ಅವಕಾಶವಿದ್ದರೆ ನಿಯಮಾವಳಿಯ ಪ್ರತಿ ನೀಡುವಂತೆ 2019ರ ಡಿ.14ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಅರ್ಜಿ ಸಲ್ಲಿಸಿದ್ದೆ. ಆದರೆ, ವರ್ಷದಿಂದಲೂ ಉತ್ತರ ಕೊಟ್ಟಿಲ್ಲ. ಆ ಇಲಾಖೆಗೆ, ಈ ಇಲಾಖೆಗೆ ಸಂಬಂಧಿಸಿದ್ದಿದು ಎಂದು ನುಣುಚಿಕೊಳ್ಳಲಾಗುತ್ತಿದೆ. ರಾಜಕೀಯ ಒತ್ತಡಕ್ಕೆ ಸಿಲುಕಿ ಅಧಿಕಾರಿಗಳು ಒಬ್ಬರತ್ತ ಇನ್ನೊಬ್ಬರು ಬೆರಳು ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಚಿವಾಲಯದಲ್ಲೂ ಈ ಮಾಹಿತಿ ಲಭ್ಯವಿಲ್ಲ. ಸರ್ಕಾರವು ಸಂವಿಧಾನಕ್ಕೆ ವಿರುದ್ಧವಾಗಿ ಆಡಳಿತ ನಡೆಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ತಕ್ಷಣ ಈ ಹುದ್ದೆಗಳನ್ನು ರದ್ದುಪಡಿಸದೆ ಇದ್ದಲ್ಲಿ, ಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.