ADVERTISEMENT

ಸಮರ್ಪಕ ವೇತನ, ಭದ್ರತಾ ಸೌಲಭ್ಯಕ್ಕೆ ಆಗ್ರಹ

ಅಂಗನವಾಡಿ ನೌಕರರಿಂದ ‘ಬೇಡಿಕೆ ದಿನ ಆಚರಣೆ’

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 12:29 IST
Last Updated 12 ಜುಲೈ 2021, 12:29 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲ್ಲೂಕು ಸಮಿತಿಯವರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲ್ಲೂಕು ಸಮಿತಿಯವರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು   

ಬೆಳಗಾವಿ: ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಬಲಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ (ಸಿಐಟಿಯು) ಸಂಘ ತಾಲ್ಲೂಕು ಸಮಿತಿಯವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒಕ್ಕೂಟ ದೇಶದಾದ್ಯಂತ ಕರೆ ನೀಡಿದ್ದ ‘ಬೇಡಿಕೆಯ ದಿನ ಆಚರಣೆ’ ಅಂಗವಾಗಿ ‍ಪ್ರತಿಭಟಿಸಿ ಹಕ್ಕೊತ್ತಾಯಗಳನ್ನು ಮಂಡಿಸಿದರು.

‘ಕೋವಿಡ್‌ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿದ್ದೇವೆ. ಲಾಕ್‌ಡೌನ್ ಸಮಯದಲ್ಲಿ ಹಸಿವು ಮತ್ತು ಅಪೌಷ್ಟಿಕತೆ ವಿರುದ್ಧ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಾದ ನಾವು ನಿರ್ಣಾಯಕ ರೀತಿಯಲ್ಲಿ ಕೆಲಸ ಮಾಡಿದ್ದೇವೆ. ಜಾಗೃತಿಗೆ, ಸಮೀಕ್ಷೆಗಳಿಗೆ ಮತ್ತು ವಾರ್ಡ್ ಮಟ್ಟದಲ್ಲಿ ಸಮಿತಿಗಳ ಕಾರ್ಯಕ್ಕೆ ನಮ್ಮನ್ನು ಬಳಸಿಕೊಳ್ಳಲಾಗಿದೆ. ಆದ್ದರಿಂದ ಅಪಾಯ ಭತ್ಯೆ ಮತ್ತು ವಿಮಾ ರಕ್ಷಣೆ ಒದಗಿಸಬೇಕು. ಸುರಕ್ಷಾ ಸಾಮಗ್ರಿಗಳನ್ನು ಒದಗಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಮತ್ತು ಆಹಾರ ಧಾನ್ಯದ ಅನುದಾನದ ಮಾಹಿತಿಯನ್ನು ‘ಪೋಷಣ್ ಟ್ರ್ಯಾಕರ್’ ಮೊಬೈಲ್‌ ಫೋನ್ ಆ್ಯಪ್‌ನೊಂದಿಗೆ ತಕ್ಷಣವೇ ಜೋಡಿಸಬೇಕು. ವೇತನ ಕಡಿತ ಆದೇಶ ಹಿಂಪಡೆಯಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಪ್ರಮಾಣದ ಅಂಗನವಾಡಿ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು. ಕಾರ್ಯಕರ್ತೆಯರಿಗೆ ಪೂರ್ಣ ಪ್ರಮಾಣದಲ್ಲಿ ಗೌರವಧನ ಪಾವತಿಸಬೇಕು’ ಎಂದು ಒತ್ತಾಯಿಸಿದರು.

‘ನಮ್ಮನ್ನು ಐಸಿಡಿಎಸ್ ಹೊರತುಪಡಿಸಿ ಬೇರಾವ ಕೆಲಸಕ್ಕೂ ನಿಯೋಜಿಸಬಾರದು. ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ ನೀಡಬೇಕು ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಅಧ್ಯಕ್ಷೆ ಮಂದಾ ನೇವಗಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.