ADVERTISEMENT

ಬೆಳಗಾವಿ | ಲಾಕ್‌ಡೌನ್‌ ಪರಿಣಾಮ, ಪೆಟ್ರೋಲ್‌ ಬೇಡಿಕೆ ಶೇ 90 ಕುಸಿತ!

ಬಂಕ್‌ ಮಾಲೀಕರಿಗೆ ನಷ್ಟ

ಎಂ.ಮಹೇಶ
Published 22 ಏಪ್ರಿಲ್ 2020, 19:30 IST
Last Updated 22 ಏಪ್ರಿಲ್ 2020, 19:30 IST
ಬೆಳಗಾವಿಯ ಸದಾಶಿವನಗರ ಲಕ್ಷ್ಮಿ ಕಾಂಪ್ಲೆಕ್ಸ್‌ ಎದುರಿನ ಪೆಟ್ರೋಲ್‌ ಬಂಕ್‌ನಲ್ಲಿ ಬುಧವಾರ ಸಂಜೆ ಒಬ್ಬ ಗ್ರಾಹಕರಷ್ಟೇ ಇದ್ದರುಪ್ರಜಾವಾಣಿ ಚಿತ್ರ
ಬೆಳಗಾವಿಯ ಸದಾಶಿವನಗರ ಲಕ್ಷ್ಮಿ ಕಾಂಪ್ಲೆಕ್ಸ್‌ ಎದುರಿನ ಪೆಟ್ರೋಲ್‌ ಬಂಕ್‌ನಲ್ಲಿ ಬುಧವಾರ ಸಂಜೆ ಒಬ್ಬ ಗ್ರಾಹಕರಷ್ಟೇ ಇದ್ದರುಪ್ರಜಾವಾಣಿ ಚಿತ್ರ   

ಬೆಳಗಾವಿ: ಲಾಕ್‌ಡೌನ್‌ನಿಂದಾಗಿ ವಾಹನಗಳು ರಸ್ತೆಗಿಳಿಯುವುದು ಕಡಿಮೆಯಾದ ಪರಿಣಾಮ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಪೆಟ್ರೋಲ್‌ ಹಾಗೂ ಡೀಸೆಲ್‌ಗೆ ಬೇಡಿಕೆ ಕುಸಿದಿದೆ.

ಮಾರಾಟ ಪ್ರಮಾಣ ನಿತ್ಯ ಸರಾಸರಿ ಶೇ 10ರಿಂದ ಶೇ 15ರಷ್ಟು ಮಾತ್ರವೇ ಇದೆ. ಇದರಿಂದಾಗಿ ಬಂಕ್‌ಗಳ ಮಾಲೀಕರಿಗೆ ಸಾಮಾನ್ಯ ದಿನಗಳಂತೆ ‘ವರಮಾನ’ ದೊರೆಯದೆ ನಷ್ಟ ಅನುಭವಿಸುತ್ತಿದ್ದಾರೆ.

ದ್ವಿಚಕ್ರವಾಹನಗಳು, ಕಾರುಗಳು, ಗೂಡ್ಸ್ ಟೆಂಪೊಗಳು ಸೇರಿದಂತೆ ವಿವಿಧ ವಾಹನಗಳಿಂದ ತುಂಬಿ ತುಳುಕುತ್ತಿದ್ದ ಬಂಕ್‌ಗಳು ಈ ಬಹುತೇಕ ಬಿಕೋ ಎನ್ನುತ್ತಿವೆ. ವಾಹನಗಳ ಸಾಲು ಸಾಲು ಕಂಡುಬರುತ್ತಿಲ್ಲ. ಆಗೊಂದಷ್ಟು, ಈಗೊಂದಿಷ್ಟು ವಾಹನಗಳಷ್ಟೆ ಕಾಣಿಸುತ್ತಿವೆ.

ADVERTISEMENT

ಡೀಸೆಲ್‌ಗಿಂತಲೂ ಪೆಟ್ರೋಲ್‌ಗೆ ಬೇಡಿಕೆ ಬಹಳ ಕುಸಿದಿದೆ. ಅಗತ್ಯ ಸೇವೆಗಳನ್ನು ಒದಗಿಸುತ್ತಿರುವ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ಡೀಸೆಲ್‌ಗೆ ಕೊಂಚ ಬೇಡಿಕೆ ಇದೆ. ಸಾವಿರಾರು ಲೀಟರ್‌ ತೈಲ ಮಾರಾಟ ಮಾಡುತ್ತಿದ್ದ ಬಂಕ್‌ಗಳಲ್ಲಿ ಈಗ ನೂರಾರು ಲೀಟರ್‌ಗಳಷ್ಟೇ ಮಾರಾಟ ಆಗುತ್ತಿದೆ.

ಕೆಲವೆಡೆ ಬಂದ್:ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪೆನಿಗಳ (ಹಿಂದೂಸ್ತಾನ್‌ ಪೆಟ್ರೋಲಿಯಂ, ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಭಾರತ್‌ ಪೆಟ್ರೋಲಿಯಂ) 250ಕ್ಕೂ ಹೆಚ್ಚು ಪೆಟ್ರೋಲ್‌ ಬಂಕ್‌ಗಳಿವೆ. ಇದಲ್ಲದೇ, ಖಾಸಗಿ ರಿಲಯನ್ಸ್‌ ಹಾಗೂ ಎಸ್ಸಾರ್‌ ಕಂಪೆನಿಯ 12 ಬಂಕ್‌ಗಳಿವೆ. ಬೇಡಿಕೆ ಕುಸಿದಿರುವುದರಿಂದಾಗಿ, ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಲ್ಲಿ ಹಲವು ದಿನಗಳಿಂದಲೂ ಏರಿಳಿತ ಕಂಡುಬಂದಿಲ್ಲ! ಕೆಲವೆಡೆ ಪೆಟ್ರೋಲ್‌ ಬಂಕ್‌ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿರುವ ನಿದರ್ಶನವೂ ಇದೆ.

ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಲಾಕ್‌ಡೌನ್‌ ಉಲ್ಲಂಘಿಸಿ ರಸ್ತೆಗಿಳಿದಿದ್ದ ಸಾವಿರಾರು ದ್ವಿಚಕ್ರವಾಹನಗಳು, ಆಟೊಗಳು ಹಾಗೂ ಕಾರುಗಳನ್ನು ವಶಕ್ಕೆ ಪಡೆದು ಬಿಸಿ ಮುಟ್ಟಿಸಿದ್ದರು. ಹೀಗಾಗಿ, ಜನರು ಅನವಶ್ಯವಾಗಿ ವಾಹನಗಳನ್ನು ಬಳಸುವುದಕ್ಕೆ ಮುಂದಾಗುತ್ತಿಲ್ಲ. ಇದರಿಂದಾಗಿ ತೈಲಕ್ಕೆ ಬೇಡಿಕೆ ಕಂಡುಬರುತ್ತಿಲ್ಲ.

ಸೇವೆ ನೀಡುತ್ತಿದ್ದೇವೆ:‘ಲಾಕ್‌ಡೌನ್‌ನಿಂದಾಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಪರಿಣಾಮ ತೈಲ ಬೇಡಿಕೆಯು ಶೇ 85ರಿಂದ 90ರಷ್ಟು ಕುಸಿದಿದೆ. ಆದರೆ, ನಾವು ಅವಶ್ಯ ಸೇವೆಗಳ ವಾಹನಗಳಿಗೆ ಪೂರಕವಾಗಲೆಂದು ನಿತ್ಯವೂ ಕಾರ್ಯನಿರ್ವಹಿಸುತ್ತಿದ್ದೇವೆ. ಸರ್ಕಾರದ ವಿವಿಧ ಇಲಾಖೆಗಳ ವಾಹನಗಳು, ಆಂಬ್ಯುಲೆನ್ಸ್‌ಗಳು, ಸರಕು ಸಾಗಣೆ ವಾಹನಗಳು, ನಗರಪಾಲಿಕೆ ಕಸ ಸಂಗ್ರಹಿಸುವ ವಾಹನಗಳು, ಬ್ಯಾಂಕ್‌ ಸಿಬ್ಬಂದಿ, ಹೆಸ್ಕಾಂ, ‌ಕೊರೊನಾ ಯೋಧರು ಹಾಗೂ ಮಾಧ್ಯಮದವರ ವಾಹನಗಳಷ್ಟೇ ಓಡಾಡುತ್ತಿವೆ. ಅವುಗಳಿಗೆ ತೈಲ ಪೂರೈಸುತ್ತಿದ್ದೇವೆ. ಬೇಡಿಕೆ ಕುಸಿದಿರುವುದರಿಂದ ಅಗತ್ಯಕ್ಕಿಂತಲೂ ಹೆಚ್ಚು ತೈಲ ಲಭ್ಯವಿದೆ’ ಎಂದು ಜಿಲ್ಲಾ ಪೆಟ್ರೋಲ್‌ ಬಂಕ್‌ ಮಾಲೀಕರ ಸಂಘದ ಅಧ್ಯಕ್ಷ ರಾಜದೀಪ ಕೌಜಲಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ನಮ್ಮ ಐಒಸಿ ಬಂಕ್‌ನಲ್ಲಿ ಇತರ ದಿನಗಳಲ್ಲಿ ನಿತ್ಯ ಸರಾಸರಿ 10ಸಾವಿರದಿಂದ 15ಸಾವಿರ ಲೀಟರ್‌ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟ ಆಗುತ್ತಿತ್ತು. ಈಗ ಎರಡೂವರೆ ಸಾವಿರ ಲೀಟರ್‌ ಮಾರಾಟವಾದರದೇ ಜಾಸ್ತಿ ಎನ್ನುವಂತಾಗಿದೆ. ಈ ಪೈಕಿ ಡೀಸೆಲ್‌ ಪ್ರಮಾಣ ಹೆಚ್ಚಿದೆ’ ಎನ್ನುತ್ತಾರೆ ಅವರು.

*
ಮುಂಜಾಗ್ರತಾ ಕ್ರಮವಾಗಿ ಬಂಕ್‌ಗಳ ಸಿಬ್ಬಂದಿಗೆ ಮಾಸ್ಕ್‌, ಸ್ಯಾನಿಟೈಸರ್‌ ಕೊಟ್ಟಿದ್ದೇವೆ. ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.
-ರಾಜದೀಪ ಕೌಜಲಗಿ,ಅಧ್ಯಕ್ಷರು, ಜಿಲ್ಲಾ ಪೆಟ್ರೋಲ್‌ ಬಂಕ್‌ ಮಾಲೀಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.