ADVERTISEMENT

ಎಸ್‌ಒಸಿಎ ಹುದ್ದೆ: ಅಪರಾಧಶಾಸ್ತ್ರ ಪದವೀಧರಿರನ್ನು ಪರಿಗಣಿಸಲು ಆಗ್ರಹಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 15:24 IST
Last Updated 26 ಸೆಪ್ಟೆಂಬರ್ 2021, 15:24 IST

ಬೆಳಗಾವಿ: ‘ಅಪರಾಧ ಸ್ಥಳ ಪರಿಶೀಲನಾಧಿಕಾರಿ (ಎಸ್‌ಒಸಿಎ) ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಅಪರಾಧಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ವಿಷಯದ ಪದವೀಧರರನ್ನು ಮೀಸಲಾತಿ ಒದಗಿಸಿ ಪರಿಗಣಿಸಬೇಕು’ ಎಂದು ಆಗ್ರಹಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಮನವಿ ಸಲ್ಲಿಸಿದರು.

‘ವಿಶ್ವವಿದ್ಯಾಲಯದಲ್ಲಿ 10 ವರ್ಷಗಳಿಂದ ಈ ವಿಷಯು ಬೋಧನೆ ಮಾಡುತ್ತಿದ್ದೇವೆ. ಸ್ನಾತಕ ಹಾಗೂ ಸ್ನಾತಕೋತ್ತರ ಪದವೀಧರರು ಆಳವಾದ ಜ್ಞಾನ ಪಡೆದಿದ್ದಾರೆ. ಕ್ಷೇತ್ರ ಅಧ್ಯಯನ ಮತ್ತು ಪ್ರಾಯೋಗಿಕ ಕೌಶಲವನ್ನೂ ಹೊಂದಿದ್ದಾರೆ. ಅವರ ಜ್ಞಾನ ಮತ್ತು ಕೌಶಲ ಸದ್ಬಳಕೆ ಆಗಬೇಕಾದ ಅವಶ್ಯವಿದೆ. ಹೀಗಾಗಿ, ಅಪರಾಧ ಸ್ಥಳ ಪರಿಶೀಲನಾಧಿಕಾರಿ ನೇರ ನೇಮಕಾತಿ ವೇಳೆ ಅವರಿಗೆ ವಿಶೇಷ ಆದ್ಯತೆ ಕೊಡಬೇಕು’ ಎಂದು ಒತ್ತಾಯಿಸಿದರು.

‘1971–72ರಲ್ಲಿ ಘೋರೆ ಸಮಿತಿ ವರದಿಯಲ್ಲಿ, ಅಪರಾಧಶಾಸ್ತ್ರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯಲ್ಲಿ ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದ್ದಾರೆ. ಜೊತೆಗೆ ಕೆಎಸ್‌ಆರ್‌ಟಿಸಿಯಲ್ಲಿ ಅಪರಾಧಶಾಸ್ತ್ರ ಪದವಿ ಪಡೆದವರಿಗೆ ಭದ್ರತೆ ಹಾಗೂ ಜಾಗೃತಿ ಅಧಿಕಾರಿ ಹುದ್ದೆಯಲ್ಲಿ ಮೀಸಲು ನೀಡಿದ್ದಾರೆ. ಹೀಗಾಗಿ, ಗೃಹ ಇಲಾಖೆಯಿಂದ ಮಂಜೂರಾಗಿರುವ ಅಪರಾಧ ಸ್ಥಳ ಪರಿಶೀಲನಾಧಿಕಾರಿ ಹುದ್ದೆಗೆ ಅರ್ಹರು ಎಂದು ಅಧಿಸೂಚನೆಯಲ್ಲಿ ತಿದ್ದುಪಡಿ ಮಾಡಬೇಕು’ ಎಂದು ಕೋರಿದರು.

ADVERTISEMENT

ಅಪರಾಧಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ವಿಭಾಗದ ಮುಖ್ಯಸ್ಥ ಪ್ರೊ.ಆರ್.ಎನ್. ಮನಗೂಳಿ, ಸಂಶೋಧನಾ ವಿದ್ಯಾರ್ಥಿಗಳಾದ ಚಿದಾನಂದ ಹಾರೂಗೇರಿ, ಮುರಳೀಧರ ಬೆಳಗಲಿ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಯೋಗೇಶ ಕಾಂಬಳೆ, ಸದಸ್ಯ ಸೋಮೇಶ ಪರಳಾದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.