ADVERTISEMENT

ಬಸವೇಶ್ವರ ಏತ ನೀರಾವರಿ ಯೋಜನೆಗೆ ಅನುದಾನ: ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 16:36 IST
Last Updated 17 ಜನವರಿ 2022, 16:36 IST
ಖಿಳೇಗಾಂವದ ಬಸವೇಶ್ವರ ಏತ ನೀರಾವರಿ ಯೋಜನೆಗೆ ಅನುದಾನ ಬಿಡುಗಡೆಗೆ ಆಗ್ರಹಿಸಿ ಮುಖಂಡರು ಪ್ರತಿಭಟನೆ ನಡೆಸಿದರು
ಖಿಳೇಗಾಂವದ ಬಸವೇಶ್ವರ ಏತ ನೀರಾವರಿ ಯೋಜನೆಗೆ ಅನುದಾನ ಬಿಡುಗಡೆಗೆ ಆಗ್ರಹಿಸಿ ಮುಖಂಡರು ಪ್ರತಿಭಟನೆ ನಡೆಸಿದರು   

ಅಥಣಿ: ‘ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಗೆ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು’ ಎಂದು ವಕೀಲ ಎಸ್.ಎಸ್. ಪಾಟೀಲ ಒತ್ತಾಯಿಸಿದರು.

ಖಿಳೇಗಾಂವ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಹಮ್ಮಿಕೊಂಡಿರುವ ಪಾದಯಾತ್ರೆ– ಹೋರಾಟಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ. ಸರ್ಕಾರ ಶೀಘ್ರವೇ ಅನುದಾನ ಬಿಡುಗಡೆ ಮಾಡಿ, ಕಾಮಗಾರಿ ಪ್ರಾರಂಭಿಸಬೇಕು. ಇಲ್ಲವಾದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡುವಂತೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ, ‘ಯೋಜನೆಯಲ್ಲಿ ಅರಳಿಹಟ್ಟಿ ಹಾಗೂ ಬೊಮನಾಳ ಗ್ರಾಮದಲ್ಲಿ ಉಪಕಾಲುವೆಗಳನ್ನು ನಿರ್ಮಿಸಬೇಕು. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವಾದರೆ ಮುಂದೆ ಆಗುವ ಅನಾಹುತಕ್ಕೆ ಸರ್ಕಾರ ಹಾಗೂ ಅಧಿಕಾರಿಗಳು ಜವಾಬ್ದಾರಿ ಆಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಅಥಣಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ಎಸ್. ಹುಚ್ಚಗೌಡರ ಮಾತನಾಡಿದರು. ವಕೀಲರಾದ ಬಿ.ಎಸ್. ಅಂಬಿ, ಸಂಜೀವ ಚಟ್ಟರಗಿ, ಕರವೇ ಮುಖಂಡ ಶಬ್ಬಿರ ಸಾತಬಚ್ಚೆ, ಅನಂತಪೂರ ಗ್ರಾಮ ಪಂಚಾಯ್ತಿ ಅಧ್ಯಕ್ಷ ರುದ್ರಗೌಡ ಪಾಟೀಲ, ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಮಡಿವಾಳ, ಮುಖಂಡರಾದ ರಮೇಶ ಪಾಟೀಲ, ರವೀಂದ್ರ ರಜಪೂತ, ಕಿರಣ ಮಿಸಾಳ, ಮಲಗೌಡ ಪಾಟೀಲ, ಸಿದರಾಯ ಕರೋಲಿ, ಅಣ್ಣಾಸಾಹೇಬ ಪಾಟೀಲ, ಕಾಡಗೌಡ ಪಾಟೀಲ, ಗುರುಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.