ತೆಲಸಂಗ (ಬೆಳಗಾವಿ ಜಿಲ್ಲೆ): ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ಹೆಚ್ಚಿಸಬೇಕು ಮತ್ತು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು.
ಮುಖಂಡ ಸುರೇಶ ಖೊಳಂಬಿ ಮಾತನಾಡಿ, ‘ತೆಲಸಂಗ ಹೋಬಳಿ ಕೇಂದ್ರ ಮಾತ್ರವಲ್ಲದೆ 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಹೀಗಾಗಿ, ಇಲ್ಲಿನ ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆ ಸುಧಾರಿಸಬೇಕು. ದಿನದ 24 ಗಂಟೆಯೂ ಎಲ್ಲ ಸೇವೆಯೂ ದೊರೆಯಬೇಕು. ಬಡವರು ಹೆಚ್ಚಿನ ಚಿಕಿತ್ಸೆಗಾಗಿ ಪಟ್ಟಣಗಳಿಗೆ ಅಲಿಯುವುದು ತಪ್ಪಬೇಕು. ಚಿಕಿತ್ಸೆಗೆ ಬೇಕಿರುವ ಸಲಕರಣೆ ಮತ್ತು ಮೂಲಸೌಕರ್ಯವನ್ನು ಕೂಡಲೇ ಒದಗಿಸಬೇಕು’ ಎಂದು ಒತ್ತಾಯಿಸಿದರು.
‘ಬೇಡಿಕೆ ಈಡೇರಿಕೆಗೆ ಜನಪ್ರತಿನಿಧಿಗಳು ಗಮನಹರಿಸಬೇಕು. ಇಲ್ಲದಿದ್ದರೆ ಜೇವರ್ಗಿ–ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಲಾಗುವುದು’ ಎಂದು ಮುಖಂಡ ಅಪ್ಪು ಜಮಾದರ ಎಚ್ಚರಿಕೆ ನೀಡಿದರು.
ಧರೆಪ್ಪ ಮಾಳಿ, ಅಪ್ಪು ಹೆಗಡ್ಯಾಳ, ರಾಜು ಮಾದರ, ಸಂತೋಷ ಹತ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.