ADVERTISEMENT

ಮಿಡತೆ: ಎಚ್ಚರ ವಹಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 28 ಮೇ 2020, 14:09 IST
Last Updated 28 ಮೇ 2020, 14:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ‘ಬಹುಭಕ್ಷಕ ಮಿಡತೆಗಳು (ಡೆಸರ್ಟ್‌ ಲೋಕಸ್ಟ್‌) ಗಡಿ ರಾಜ್ಯವಾದ ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಕಂಡುಬಂದಿವೆ. ಹೀಗಾಗಿ, ಜಿಲ್ಲೆಯ ರೈತರು ನಿಗಾ ವಹಿಸಬೇಕು ಹಾಗೂ ಜಮೀನುಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸಲಹೆ ನೀಡಿದ್ದಾರೆ.

‘ಈ ಕೀಟಗಳು ಕಂಡುಬಂದರೆ ತಕ್ಷಣ ಅಧಿಕಾರಿಗಳ ಗಮನಕ್ಕೆ ತರಬೇಕು. ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ತಿಳಿಸಿದ್ದಾರೆ.

‘ರೈತರು ಈ ಕೀಟಗಳು ಕಾಣಿಸಿಕೊಂಡಾಗ ತಗಡಿನ ಡಬ್ಬಿ, ಡ್ರಮ್ಮು ಅಥವಾ ತಟ್ಟೆಗಳಿಂದ ಜೋರಾಗಿ ಶಬ್ದ ಉಂಟು ಮಾಡಬೇಕು. ಇದರಿಂದ ಅವುಗಳು ಬೆಳೆಗಳತ್ತ ಬರುವುದಿಲ್ಲ. ಬೇವು ಆಧಾರಿತ ಕೀಟನಾಶಕವನ್ನು ಬೆಳೆಗಳು ಹಾಗೂ ಸುತ್ತಮುತ್ತಲಿನ ಗಿಡಗಳಿಗೆ ಸಿಂಪಡಿಸಬೇಕು. ಬೆಂಕಿ ಹಾಗೂ ಹೊಗೆ ಹಾಕುವುದರಿಂದ ಅವುಗಳನ್ನು ಓಡಿಸಬಹುದಾಗಿದೆ. ಮಿಡತೆಗಳು ಹಗಲಿನಲ್ಲಿ ಸಂಚರಿಸಿ ರಾತ್ರಿ ವೇಳೆ ಮರ–ಗಿಡಗಳ ಮೇಲೆ ವಿಶ್ರಾಂತಿ ಪಡೆಯುವುದರಿಂದಾಗಿ ಟ್ರಾಕ್ಟರ್‌ ಮೌಂಟೆಡ್‌ ಜೆಟ್ ಸ್ಪ್ರೇಯರ್ ಬಳಸಿ ಕೀಟನಾಶವನ್ನು ಸಂಜೆ ಅಥವಾ ರಾತ್ರಿ ವೇಳೆ ಸಿಂಪಡಿಸಬೇಕು’ ಎಂದು ತಿಳಿಸಿದ್ದಾರೆ.

ADVERTISEMENT

ರೈತರು ಹೆಚ್ಚಿನ ಮಾಹಿತಿಗೆ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.