ADVERTISEMENT

ಉದ್ಯಮ: ಹಣಕ್ಕಿಂತ ಛಲ ಅಗತ್ಯ- ಸಚಿವ ಮುರುಗೇಶ ನಿರಾಣಿ

‘ಉದ್ಯಮಿಯಾಗು– ಉದ್ಯೋಗ ನೀಡು’ ಕಾರ್ಯಾಗಾರದಲ್ಲಿ ನಿರಾಣಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 12:20 IST
Last Updated 8 ಏಪ್ರಿಲ್ 2022, 12:20 IST
ಬೆಳಗಾವಿಯ ವಿಟಿಯುನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಉದ್ಯಮಿಯಾಗು–ಉದ್ಯೋಗ ನೀಡು’ ಕಾರ್ಯಾಗಾರವನ್ನು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಉದ್ಘಾಟಿಸಿದರು
ಬೆಳಗಾವಿಯ ವಿಟಿಯುನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಉದ್ಯಮಿಯಾಗು–ಉದ್ಯೋಗ ನೀಡು’ ಕಾರ್ಯಾಗಾರವನ್ನು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಉದ್ಘಾಟಿಸಿದರು   

ಬೆಳಗಾವಿ: ‘ಯುವಜನರು ಸ್ವಂತ ಉದ್ಯಮ ಆರಂಭಿಸಲು ಹಣಕ್ಕಿಂತಲೂ ಮುಖ್ಯವಾಗಿ ಇಚ್ಛಾಶಕ್ತಿ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳು ಕೂಡ ಕೈಹಿಡಿಯಲಿವೆ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ‘ಕರ್ನಾಟಕ ಉದ್ಯೋಗ ಮಿತ್ರ’ ಸಹಯೋಗದಲ್ಲಿ ಇಲ್ಲಿನ ವಿಟಿಯು ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಉದ್ಯಮಿಯಾಗು–ಉದ್ಯೋಗ ನೀಡು’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಉದ್ಯಮ ಆರಂಭಿಸಲು ಬಯಸುವ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಭೂಮಿ ಖರೀದಿಗೆ ಶೇ 75ರಷ್ಟು ಸಹಾಯಧನವನ್ನು (2 ಎಕರೆವರೆಗೆ) ನೀಡಲಾಗುವುದು. ಶೇ 25ರಷ್ಟನ್ನು ಕಂತಿನಲ್ಲಿ ಪಾವತಿಸಲು ಅವಕಾಶ ಕೊಡಲಾಗುವುದು. ಆರ್ಥಿಕವಾಗಿ ‌ಹಿಂದುಳಿದ ಇತರ ಸಮಾಜದವರಿಗೂ ಈ ಸೌಲಭ್ಯ ದೊರೆಯಲಿದೆ. ಕೇಂದ್ರ ಸರ್ಕಾರವೂ ಹಲವು ರೀತಿಯಲ್ಲಿ ನೆರವಾಗುತ್ತಿದೆ. ಛಲವಷ್ಟೆ ಅತ್ಯಗತ್ಯ’ ಎಂದರು.

ADVERTISEMENT

ತರಬೇತಿಯನ್ನೂ ನೀಡಲಾಗುವುದು:

‘ಪದವಿ ಪಡೆದವರು ಬೇರೊಬ್ಬರ ಬಳಿ ಕೆಲಸಕ್ಕೆ ಅಲೆಯುವುದಕ್ಕಿಂತ ಅವರೇ ಕೆಲಸ ಕೊಡುವಂತಹ ಸ್ಥಾನಕ್ಕೆ ಬೆಳೆಯಬೇಕು ಎನ್ನುವುದು ನಮ್ಮ ಆಶಯ. ಇದಕ್ಕಾಗಿ ಅವಕಾಶಗಳು ಹಾಗೂ ಲಭ್ಯ ಸೌಲಭ್ಯಗಳ ಬಗ್ಗೆ ವಿಭಾಗವಾರು ಕಾರ್ಯಾಗಾರ ನಡೆಸಿ ಜಾಗೃತಿ ಮೂಡಿಸುತ್ತಿದ್ದೇವೆ. ಆಸಕ್ತ ಕ್ಷೇತ್ರದಲ್ಲಿ ಕೈಗಾರಿಕೆ ಮಾಡಲು ಬಯಸುವವರಿಗೆ ವಾರದಿಂದ ತಿಂಗಳವರೆಗೆ ತರಬೇತಿ ನೀಡಿ ಮಾರ್ಗದರ್ಶನ ಕೊಡಲಾಗುವುದು. ಸಮಗ್ರ ಯೋಜನಾ ವರದಿ ಸಲ್ಲಿಕೆಯಿಂದ ಹಿಡಿದು ಸಾಲ ಸೌಲಭ್ಯ ಪಡೆಯುವವರೆಗೂ ಇಲಾಖೆಯು ಬೆಂಬಲವಾಗಿ ನಿಲ್ಲಲಿದೆ’ ಎಂದು ಹೇಳಿದರು.

‘25 ವರ್ಷಗಳ ಹಿಂದೆ ಬ್ಯಾಂಕ್‌ನ ವ್ಯವಸ್ಥಾಪಕರ ಭೇಟಿಗೆ ಕಾಯಬೇಕಾಗುತ್ತಿತ್ತು. ಈಗ, ಪರಿಸ್ಥಿತಿ ಬದಲಾಗಿದೆ. ಸರ್ಕಾರವೇ ಜನರ ಮನೆ ಬಾಗಿಲಿಗೆ ಬರುತ್ತಿದೆ. ಪದವೀಧರರು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮುಂದೆ ಬರಬೇಕು. ಸರ್ಕಾರಿ, ಅರೆಸರ್ಕಾರಿ ಕೆಲಸಗಳಿಗೆ ಕಾಯುವ ಬದಲಿಗೆ ಉದ್ಯಮಿಯಾಗಿ ರೂಪಗೊಳ್ಳಲು ಬಹಳಷ್ಟು ಅವಕಾಶಗಳಿವೆ’ ಎಂದು ತಿಳಿಸಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ, ‘ಯುವಜನರು ಕೆಲಸಕ್ಕಾಗಿ ವಲಸೆ ಹೋಗುವುದನ್ನು ‌ತಪ್ಪಿಸುವುದು ನಮ್ಮ‌ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಮಾರ್ಗದರ್ಶನ ಹಾಗೂ ಸಹಾಯವನ್ನು ಮಾಡುತ್ತಿದ್ದೇವೆ’ ಎಂದು ಹೇಳಿದರು.

ಕಾರ್ಯಕ್ರಮ ಸಹಕಾರಿಯಾಗಿದೆ:

ಏಕಸ್‌ ಕಂಪನಿಯ ಅಧ್ಯಕ್ಷ ಹಾಗೂ ಸಿಇಒ ಅರವಿಂದ ಮೆಳ್ಳಿಗೇರಿ, ‘ಪ್ರತಿ ವರ್ಷ 1 ಕೋಟಿ ಉದ್ಯೋಗ ನೀಡಬೇಕಾಗಿದೆ. ಇದಕ್ಕೆ ಪೂರಕವಾಗಿ ಉದ್ಯಮಿಗಳನ್ನು ರೂಪಿಸುವುದು ಮುಖ್ಯವಾಗುತ್ತದೆ. ಇದಕ್ಕೆ ಕೈಗಾರಿಕಾ ಇಲಾಖೆಯು ರೂಪಿಸಿರುವ ಉದ್ಯಮಿಯಾಗು– ಉದ್ಯೋಗ ನೀಡು ಕಾರ್ಯಕ್ರಮ ಸಹಕಾರಿಯಾಗಿದೆ. ಸ್ವಂತ ಉದ್ಯೋಗ ಹೊಂದುವ ಮೂಲಕ‌ ನಿರುದ್ಯೋಗ ಸಮಸ್ಯೆ ನಿವಾರಿಸಬಹುದು’ ಎಂದು ಅಭಿಪ್ರಾಯಪಟ್ಟರು.

ಆರ್‌ಎಸ್‌ಎಸ್ ಮುಖಂಡ ರಾಘವೇಂದ್ರ ಕಾಗವಾಡ, ‘ದೇಶದ ಮುಂದಿನ 25 ವರ್ಷದ ಭವಿಷ್ಯವು ಈಗಿನ‌ ಯುವಕರು ಏನು ಮಾಡುತ್ತಾರೆ ಎನ್ನುವುದನ್ನು ಅವಲಂಬಿಸಿದೆ. ಹೀಗಾಗಿ, ಸಮಾಜ ಮತ್ತು ಸರ್ಕಾರದಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬರಬೇಕು. ಪಡೆದಿದ್ದಕ್ಕೆ ಪ್ರತಿಯಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದು ತಿಳಿಸಿದರು.

ರೇಣುಕಾ ಶುಗರ್ಸ್‌ ವ್ಯವಸ್ಥಾಪಕ ನಿರ್ದೇಶಕಿ ವಿದ್ಯಾ ಮರಕುಂಬಿ ಮಾತನಾಡಿ, ‘ಚೀನಾ ಉತ್ಪನ್ನಗಳ ಬಳಕೆಗೆ ಕಡಿವಾಣ ಹಾಕುವ ಮಟ್ಟಕ್ಕೆ ಭಾರತ ಬೆಳೆಯಬೇಕು’ ಎಂದು ಆಶಿಸಿದರು.

‘ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು’

ಅಧ್ಯಕ್ಷತೆ ವಹಿಸಿದ್ದ ಶಾಸಕ ಅಭಯ ಪಾಟೀಲ, ‘ಉದ್ಯಮಿಯಾಗಿ ಉದ್ಯೋಗ ನೀಡು ಕಾರ್ಯಕ್ರಮದ ಯಶಸ್ಸಿಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ಇದು ಪ್ರಚಾರದ ಯೋಜನೆಯಷ್ಟೆ ಆಗುತ್ತದೆ’ ಎಂದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ್‌ಹುಸೇನ್‌ ಪಠಾಣ್, ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ, ಕೈಗಾರಿಕಾ ಇಲಾಖೆ ಆಯುಕ್ತ ಗುಂಜನ್‌ ಕೃಷ್ಣ, ಕೆಐಎಡಿಬಿ ಸಿಇಒ ಎನ್. ಶಿವಶಂಕರ್, ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ ಆರ್.ಎಚ್. ಇದ್ದರು.

ಕಾರ್ಯಕ್ರಮದಲ್ಲಿ ನೇರವಾಗಿ 1,500 ವಿದ್ಯಾರ್ಥಿಗಳು ಹಾಗೂ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ 9 ಸಾವಿರ ವಿದ್ಯಾರ್ಥಿಗಳು ವರ್ಚುವಲ್‌ ವೇದಿಕೆಯಲ್ಲಿ ಪಾಲ್ಗೊಂಡಿದ್ದರು. ಇಲಾಖೆ ಯೋಜನೆಗಳ ಬಗ್ಗೆ ತಿಳಿಸಲಾಯಿತು. ಯಶಸ್ವಿ ಉದ್ಯಮಿಗಳು ಅನುಭವ ಹಂಚಿಕೊಂಡರು.

ಸೋಲುಗಳ ಬಗ್ಗೆ ತಿಳಿದುಕೊಳ್ಳಿ

ಯಶಸ್ವಿ ಉದ್ಯಮಿಯು ಬಹಳ ಸೋಲುಗಳನ್ನು ಕಂಡಿರುತ್ತಾನೆ. ಅವರ ಸೋಲುಗಳ ಬಗ್ಗೆ ತಿಳಿದುಕೊಂಡು, ಯಶಸ್ಸಿನ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು.

– ಅರವಿಂದ ಮೆಳ್ಳಿಗೇರಿ, ಸಿಇಒ, ಏಕಸ್ ಕಂಪನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.