ADVERTISEMENT

‘ಅಥಣಿಯಲ್ಲಿ ಹೈಟೆಕ್ ಡಿಜಿಟಲ್ ಗ್ರಂಥಾಲಯ ಸ್ಥಾಪನೆ’: ಶಾಸಕ ಲಕ್ಷ್ಮಣ ಸವದಿ

ಮೌಲಾನಾ ಅಜಾದ ಇಂಗ್ಲಿಷ್‌ ಮಾಧ್ಯಮ ಶಾಲೆಯ ಉದ್ಘಾಟನೆ ಸಮಾರಂಭ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 3:08 IST
Last Updated 3 ಆಗಸ್ಟ್ 2025, 3:08 IST
ಅಥಣಿ ಪಟ್ಟಣದಲ್ಲಿ ನೂತನವಾಗಿ ಮಂಜೂರಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನ ಅಜಾದ ಇಂಗ್ಲಿಷ್‌ ಮಾಧ್ಯಮ ಶಾಲೆಯನ್ನು ಶಾಸಕ ಲಕ್ಷ್ಮಣ ಸವದಿ ಉದ್ಘಾಟಿಸಿದರು
ಅಥಣಿ ಪಟ್ಟಣದಲ್ಲಿ ನೂತನವಾಗಿ ಮಂಜೂರಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನ ಅಜಾದ ಇಂಗ್ಲಿಷ್‌ ಮಾಧ್ಯಮ ಶಾಲೆಯನ್ನು ಶಾಸಕ ಲಕ್ಷ್ಮಣ ಸವದಿ ಉದ್ಘಾಟಿಸಿದರು   

ಅಥಣಿ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲಿರುವ ಮತ್ತು ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲವಾಗಲು ಅಥಣಿಯಲ್ಲಿ ಸುಮಾರು ₹1 ಕೋಟಿ ವೆಚ್ಚದಲ್ಲಿ ಹೈಟೆಕ್ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ವಿಕ್ರಂಪೂರ್ ಬಡಾವಣೆಯ ಎಚ್‌ವಿಸಿ ಕಾಲೊನಿಯಲ್ಲಿ ನೂತನವಾಗಿ ಆರಂಭಗೊಂಡ ಮೌಲಾನಾ ಅಜಾದ ಇಂಗ್ಲಿಷ್‌ ಮಾಧ್ಯಮ ಶಾಲೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಅಥಣಿ ಪುರಸಭೆಯ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸಿ ಹೈಟೆಕ್ ಗ್ರಂಥಾಲಯ ಸ್ಥಾಪಿಸಲು ಒಂದು ಕೋಟಿ ಮೀಸಲಿಡಲಾಗಿದೆ. ಈ ಗ್ರಂಥಾಲಯ ಸ್ಥಾಪನೆಯಿಂದ ಮತಕ್ಷೇತ್ರದ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಮತಕ್ಷೇತ್ರದ ಅಲ್ಪಸಂಖ್ಯಾತರ ಮಕ್ಕಳಿಗೆ ಇಂಗ್ಲಿಷ್‌ ಮಾಧ್ಯಮ ಶಾಲೆಯನ್ನು ಮಂಜೂರು ಮಾಡಲಾಗಿದೆ. ಇಲ್ಲಿ 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ADVERTISEMENT

ಜೆಡಿಎಸ್ ಮುಖಂಡ ಶಹಜಹಾನ ಡೊಂಗರಗಾಂವ ಮಾತನಾಡಿ, ಅಥಣಿ ಮತಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವ ಶಾಸಕರಾದ ಲಕ್ಷ್ಮಣ ಸವದಿಯವರ ಜನಪರ ಕಾಳಜಿ ಮೆಚ್ಚುವಂತದ್ದು, ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಮಧ್ಯೆ ಅನೇಕ ಮತಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬರುತ್ತಿಲ್ಲ ಎಂದು ಸರ್ಕಾರದ ವಿರುದ್ಧವೇ ಆಪಾದನೆ ಮಾಡುತ್ತಿರುವ ಈ ಸಂದರ್ಭದಲ್ಲಿ ಅಥಣಿ ಮತಕ್ಷೇತ್ರ ಅಪವಾದದಿಂದ ದೂರವಾಗಿದೆ ಎಂದರು.

ಶೆಟ್ಟರ ಮಠದ ಮರಳುಸಿದ್ಧ ಸ್ವಾಮೀಜಿ, ಮೌಲಾನಾ ಮುಪ್ತಿಹಬೀಬ್, ಪದ್ಮಜಿತ್ ನಾಡಗೌಡ, ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಶಾಂತಿನಾಥ ನಂದೀಶ್ವರ, ವಕೀಲ ಸಿ.ಬಿ.ಪಡನಾಡ, ಪುರಸಭೆ ಸದಸ್ಯ ಸೈಯದ್ ಆಮೀನ್ ಗದ್ಯಾಳ ಮುಖಂಡರಾದ ಬಾಬು ಖೇಮಲಾಪುರ, ಇನ್ನುಸ್ ಮುಲ್ಲಾ, ಅಸ್ಲo ನಾಲಬಂದ, ನೂರ ಅಹಮದ್ ಡೊಂಗರಗಾಂವ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಫಕೀರಪ್ಪ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುoಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಅಲ್ಪಸಂಖ್ಯಾತರ ಇಲಾಖೆಯ ವಿಸ್ತರಣಾಧಿಕಾರಿ ಪ್ರವೀಣ ನಂದಾ ಸ್ವಾಗತಿಸಿದರು, ಶಶಿಕಲಾ ಪತ್ತಾರ ನಿರೂಪಿಸಿದರು, ಜಾಫರ್ ಶರೀಫ್ ಚಬನೂರ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.