ಸಿದ್ದರಾಮಯ್ಯ , ಮುಖ್ಯಮಂತ್ರಿ
ಬೆಳಗಾವಿ: 'ಪ್ರಕೃತಿ ವಿಕೋಪ ಪರಿಹಾರ (ಎನ್.ಡಿ.ಆರ್.ಎಫ್) ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿಲ್ಲ. ಬಿಜೆಪಿಯವರಿಗೆ ಕಾಮಾಲೆ ರೋಗ ಅಂಟಿಕೊಂಡಿದೆ. ವಿನಾಕಾರಣ ಆರೋಪ ಮಾಡುತ್ತಿದ್ದಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ವಿಪಕ್ಷದ ನಾಯಕ ಆರ್.ಅಶೋಕ ಅವರ ಮಾತಿಗೆ ಅರ್ಥವಿಲ್ಲ. ಗ್ಯಾರಂಟಿ ಯೋಜನೆಗಳು ಯಶಸ್ವಿ ಆಗಿದ್ದರಿಂದ ಅವರಿಗೆ ತಳಮಳ ಶುರುವಾಗಿದೆ' ಎಂದರು.
'ಪ್ರಧಾನಿ ಮೋದಿ ಆದಿಯಾಗಿ ಎಲ್ಲ ಬಿಜೆಪಿಗರೂ ಗ್ಯಾರಂಟಿಗಳ ಅನುಷ್ಠಾನ ಸಾಧ್ಯವೇ ಇಲ್ಲ ಎಂದಿದ್ದರು. ಈಗ ನಮ್ಮದೇ ಗ್ಯಾರಂಟಿ ಯೋಜನೆಗಳ ಉಪಾಯವನ್ನು ಬಿಜೆಪಿ ಸರ್ಕಾರಗಳು ಕಾಪಿ ಮಾಡುತ್ತಿವೆ. ಹರಿಯಾಣ, ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ಅನುಕರಣೆ ಮಾಡುತ್ತಿದ್ದಾರೆ' ಎಂದರು.
'ಮುಂದೆಯೂ ನಾನೇ ಸಿ.ಎಂ ಎನ್ನುವ ಮೂಲಕ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್‌ಗೆ ಸೆಡ್ಡು ಹೊಡೆದಿದ್ದಾರೆ' ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 'ನಮ್ಮ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಿ.ಟಿ.ರವಿ ಯಾರು? ಅವರೇನು ನಮ್ಮ ಹೈಕಮಾಂಡೇ' ಎಂದು ಮರುಪ್ರಶ್ನಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, 'ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಹಣೆಯನ್ನು ಖಾಸಗಿಯವರಿಗೆ ಕೊಟ್ಟಿಲ್ಲ. ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯರು ಉಚಿತವಾಗಿ ಸೇವೆ ನೀಡಲಿದ್ದಾರೆ. ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದೆವು. ಈ ವೇಳೆ 11 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇನ್ನುಳಿದ ಖಾಲಿ ಇರುವ ಹುದ್ದೆಗಳು ತುಂಬುವವರೆಗೆ ಕೆಎಲ್ಒ ಸಂಸ್ಥೆಯವರು ತಾತ್ಕಾಲಿಕವಾಗಿ ಸಹಾಯ ಮಾಡುತ್ತಿದ್ದಾರೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.