ADVERTISEMENT

ಡಿಕೆಶಿಗೆ ಎನ್‌ಪಿಎಸ್ ನೌಕರರ ‘ಬಿಸಿ’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 14:43 IST
Last Updated 12 ಡಿಸೆಂಬರ್ 2018, 14:43 IST
   

ಬೆಳಗಾವಿ: ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸುವಂತೆ ಆಗ್ರಹಿಸಿ ಕೊಂಡಸಕೊಪ್ಪದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರಾಜ್ಯ ಸರ್ಕಾರಿ ಎನ್‌‍ಪಿಎಸ್ ನೌಕರರು ಅಹವಾಲು ಆಲಿಸಲು ಬಂದಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಘೋಷಣೆ ಕೂಗಿ ಬಿಸಿ ಮುಟ್ಟಿಸಿದರು. ಇದರಿಂದ ಗರಂ ಆದ ಸಚಿವರು, ನೌಕರರನ್ನು ತರಾಟೆಗೆ ತೆಗೆದುಕೊಂಡರು.

‘ಸರ್ಕಾರವನ್ನೇ ಎದುರಿಸಲು ನೀವು ಮುಂದಾಗಿದ್ದೀರಿ. ವಿವಿಧೆಡೆಯಿಂದ ಬಂದಿರುವ ನಿಮ್ಮನ್ನು ನೋಡಿದರೆ ಭಯವಾಗುತ್ತಿದೆ. ನಿಮ್ಮ ನೋವುಗಳ ಅರಿವಿದೆ. ಮುಖಂಡರು ಬಂದರೆ ಮುಖ್ಯಮಂತ್ರಿಯೊಂದಿಗೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ನೌಕರರು, ಮುಖ್ಯಮಂತ್ರಿಯೇ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ಕುಪಿತರಾದ ಸಚಿವರು, ‘ನಿಮ್ಮಿಂದ ಹೇಳಿಸಿಕೊಳ್ಳಲು ಬಂದಿಲ್ಲ. ಅದೇನ್ ಮಾಡ್ಕೊತಿರೊ ಮಾಡ್ಕೊಳಿ. ಸರ್ಕಾರದ ಮಟ್ಟದಲ್ಲಿ ನಿರ್ಧಾರ ಮಾಡುವಾಗ ಸಾಧಕ– ಬಾಧಕಗಳ ಕುರಿತು ಚರ್ಚಿಸಬೇಕಾಗುತ್ತದೆ. ಎಲ್ಲವನ್ನೂ ಇಲ್ಲಿಯೇ ಮಾಡಲಾಗುವುದಿಲ್ಲ. ಮುಖ್ಯಮಂತ್ರಿಯೇ ಬರಬೆಕು ಎನ್ನುವುದೂ ಸರಿಯಲ್ಲ’ ಎಂದು ತಿಳಿಸಿದರು. ‘ನಾವು ಬಂದದ್ದು ತಪ್ಪಾಯಿತು; ಕ್ಷಮಿಸಿ’ ಎಂದು ಮಾತು ಮುಗಿಸಿ ಹೊರಡಲು ಮುಂದಾದರು.

ADVERTISEMENT

ನೌಕರರನ್ನು ಸಮಾಧಾನಪಡಿಸಿದ ಮುಖಂಡರು, ‘ಸಚಿವರು ಪ್ರಭಾವಶಾಲಿ ಇದ್ದಾರೆ. ಮುಖ್ಯಮಂತ್ರಿ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಶಾಂತಿಯಿಂದ ಇರಬೇಕು’ ಎಂದು ಕೋರಿದರು. ಬಳಿಕ ಸಂಘದ ಪ್ರಮುಖರ ನಿಯೋಗ ಸಚಿವರೊಂದಿಗೆ ಮುಖ್ಯಮಂತ್ರಿ ಬಳಿಗೆ ತೆರಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.