ಬೆಳಗಾವಿ: ನಂಗ ಎಂಟು ಮೇಜರ್ ಸರ್ಜರಿ ಆಗ್ಯಾವರಿ, ಹತ್ತು ಸಣ್ಣಪುಟ್ಟ ಸರ್ಜರಿ ಆಗ್ಯಾವ, ಅಂಥಾದ್ದು– ಇಂಥಾದ್ದು ಎಲ್ಲ ಸೇರಿ 20 ಕಾಯಿಲೆ ಬಂದ ಹೋಗ್ಯಾವ. ಅಂದಾಜು 25 ಸಾರಿ ದವಾಖಾನಿಗೆ ಅಡ್ಮಿಟ್ ಆಗಿರಬೇಕು. ಅಷ್ಟೇರಿ. ಇದರಾಚೆಗೂ ಬದುಕು ಬಹಳ ಚಂದ ಅದ. ಬಿಂದಾಸ್ ಅದೇನ್ ನೋಡರಿ...
ಡಾ.ಸುಲಕ್ಷಣಾ ಶ್ರೀಧರ ಬಾಳಿಗ ಅವರು ಪಟಪಟನೇ ಅರಳು ಹುರಿದಂತೆ ಮಾತನಾಡುತ್ತಿದ್ದರೆ ಎದುರಿಗಿದ್ದವರ ಮನಸ್ಸೂ ಚೇತೋಹಾರಿ ಆಗುತ್ತದೆ. ತಜ್ಞ ವೈದ್ಯರಾಗಿರುವ ಅವರು ಇನ್ನಿಲ್ಲದಂತೆ ಕಾಯಿಲೆಗಳನ್ನು, ರೋಗಗಳನ್ನು ಗೆದ್ದು ಬಂದಿದ್ದಾರೆ. ಅವರನ್ನು ನೋಡಿದ, ಅವರೊಂದಿಗೆ ಮಾತನಾಡಿದ ಯಾರಿಗೂ ಅವರು ಇಷ್ಟೆಲ್ಲ ಹೋರಾಟ ಮಾಡಿ ಗೆದ್ದಿದ್ದಾರೆ ಎಂದು ನಂಬುವುದಕ್ಕೇ ಸಾಧ್ಯವಿಲ್ಲ. ಯಾವಾಗಲೂ ಚೈತನ್ಯದ ಚಿಲುಮೆಯಂತೆ ಓಡಾಡಿಕೊಂಡಿರುವ ಅವರು, ಸಾವಿಗೆ ಸೆಡ್ಡು ಹೊಡೆದವರು! ಅವರ ಬದುಕಿನ ಪ್ರತಿಯೊಂದು ಪುಟವೂ ಅಚ್ಚರಿದಾಯಕ, ಅದ್ಭುತ ಮತ್ತು ಅನುಕರಣೀಯ!
ಹೆಸರಿಗೆ ತಕ್ಕಂತೆ ವ್ಯಕ್ತಿತ್ವವೂ ಸುಲಕ್ಷಣ!
ಎಂಬಿಬಿಎಸ್, ಎಂ.ಡಿ (ಕಮ್ಯುನಿಟಿ ಮೆಡಿಸಿನ್- 2011) ಮುಗಿಸಿದ ಬಳಿಕ ಅವರು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಜವಾಹರಲಾಲ್ ನೆಹರೂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕಿ ಆಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಅಪಾರ ಸಂಖ್ಯೆಯ ವೈದ್ಯರನ್ನು ತಯಾರು ಮಾಡಿದ್ದಾರೆ. ಅದೆಷ್ಟೋ ರೋಗಿಗಳಿಗೆ ಜೀವದಾನ ಮಾಡಿದ್ದಾರೆ. ತಮ್ಮ ಬದುಕಿನಲ್ಲಿ ಬಂದ ನೋವುಗಳನ್ನೇ ಅವರು ನಲಿವಾಗಿ ಪರಿವರ್ತನೆ ಮಾಡಿಕೊಂಡ ಪರಿ ಹುಬ್ಬೇರಿಸುವಂಥದ್ದು.
ಅವರ ತಪ್ಪಿಲ್ಲದೆ ಇದ್ದರೂ ಪರಿಸ್ಥಿತಿ ಹಾಗೂ ದೇಹದಲ್ಲಿನ ಕೆಲವು ಬದಲಾವಣೆಗಳ ಕಾರಣದಿಂದ ಅವರು ರೋಗಪೀಡನೆಗೆ ಒಳಗಾದರು. ಒಂದರ ಹಿಂದೊಂದು ಕಾಯಿಲೆಗಳು ಅವರನ್ನು ಹುಡುಕಿಕೊಂಡು ಬಂದವು. ಆದರೆ, ಯಾವುದಕ್ಕೂ ಅವರು ಜಗ್ಗಲಿಲ್ಲ, ಕುಗ್ಗಲಿಲ್ಲ, ತಲೆಬಾಗಲಿಲ್ಲ. ಮನೋಸ್ಥೈರ್ಯದಿಂದ ಎಲ್ಲವನ್ನೂ ಎದುರಿಸಿದರು. ಅವರೊಳಗಿನ ವೈದ್ಯೆ ಅವರಿಗೆ ತುಂಬಿದ ಆತ್ಮಸ್ಥೈರ್ಯ ಶಬ್ದಗಳಿಗೆ ನಿಲುಕದ್ದು.
‘ಇನ್ನೊಂದು ನಿಮಿಷದಲ್ಲಿ ಸಾವು ಇದೆ ಎಂದು ಗೊತ್ತಾದರೂ ಚಿಂತೆ ಮಾಡಬೇಕಿಲ್ಲ. ಆ ಒಂದು ನಿಮಿಷವನ್ನೂ ಆನಂದಿಸಿ. ಯಾರಿಗೆ ಗೊತ್ತು ನಿಮ್ಮಲ್ಲಿನ ಜೀವಚಿಲುಮೆ ಕಂಡು ಸಾವೇ ಸೋತು ಹೋಗಬಹುದು’ ಎನ್ನುವ ಅವರ ಮಾತು ರೋಗಿಗಳು ಮಾತ್ರವಲ್ಲ; ಯುವ ವೈದ್ಯರಿಗೂ ದಾರಿದೀಪ.
‘ನಾಳೆ ಬರುವುದು ನಮಗೆ ಇಂದೇ ಬರಲಿ, ಇಂದು ಬರುವುದು ನಮಗೆ ಈಗಲೇ ಬರಲಿ. ಇದಕ್ಕಾರು ಅಂಜುವರು, ಇದಕ್ಕಾರು ಅಳುಕುವರು. ಜಾತಸ್ಯ ಮರಣಂ ಧ್ರುವಂ’ ಎಂದು ಬಸವಣ್ಣ ವಚನದಲ್ಲಿ ಹೇಳಿದ್ದಾರೆ. ಡಾ.ಸಲಕ್ಷಣಾ ಅಕ್ಷಶಃ ಅದೇ ರೀತಿ ಬದುಕಿ ತೋರಿಸಿದವರು.
‘ಪ್ರಜಾವಾಣಿ’ ಜತೆಗೆ ತಮ್ಮ ಬದುಕಿನ ಕ್ಷಣಗಳನ್ನು ಹೇಳಿಕೊಂಡ ಡಾ.ಸುಲಕ್ಷಣಾ ಅವರ ಕೆಲವು ಮಾತುಗಳು ಇಲ್ಲಿವೆ...
ನಗುನಗುತಾ ನಲಿನಲಿ:
‘ನಗುನಗುತಾ ನಲಿನಲಿ, ಏನೇ ಆಗಲಿ...’ ಅಂತ ಕೇಳಿರಬಹುದು ನೀವು. ನಾನು ಚಾಚೂತಪ್ಪದೇ ಅದನ್ನು ಪಾಲಿಸಿದ್ದೇನೆ. ಇಷ್ಟೆಲ್ಲ ಕಾಯಿಲೆಗಳ ಮಧ್ಯೆಯೂ ಆನಂದದ, ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಸಾಧ್ಯ ಎಂಬುದಕ್ಕೆ ನಾನೇ ಸಾಕ್ಷಿ. ಸಣ್ಣಪುಟ್ಟ ಜ್ವರಕ್ಕೆ, ರಕ್ತದೊತ್ತಡ, ಮಧುಮೇಹ ಬಂದರೂ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವವರು ಇದ್ದಾರೆ. ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದವು ಎಂದು ಆತ್ಮಹತ್ಯೆ ಮಾಡಿಕೊಳ್ಳುವವರಿದ್ದಾರೆ. ಅವರಿಗೆ ಬದುಕಿನ ನಿಜವಾದ ಅರ್ಥವೇ ತಿಳಿದಿಲ್ಲ. ‘ಇರುವುದೊಂದೇ ಬದುಕು; ಅದನ್ನಾದರೂ ಚಂದಗೆ ಬದುಕು’ ಎನ್ನುವ ಸಿದ್ಧಾಂತದವಳು ನಾನು’ ಎಂದು ನಕ್ಕರು ಡಾ.ಸುಲಕ್ಷಣಾ.
‘ನನಗೆ ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಆಯಿತು. ಅದರ ಬಳಿಕ ಥೈರೈಡ್ ಕಾಣಿಸಿಕೊಂಡಿತು. ಥೈರೈಡ್ ಗಂಟು ದೊಡ್ಡದಾಗುತ್ತ ಹೋಯಿತು. ಅದರ ಶಸ್ತ್ರಚಿಕಿತ್ಸೆ ಬಹಳ ಗಂಭೀರವಾದದ್ದು. ಅದನ್ನೂ ಮಾಡಿಸಿಕೊಂಡೆ. ನಂತರ ಒಂದು ‘ಅಬಾರ್ಷನ್’ ಆಯಿತು. ಬಳಿಕ ಒಂದೊಂದೇ ಕಾಯಿಲೆಗಳು ಶುರುವಾದವು’ ಎಂದು ಹೇಳುವಾಗಿ ಇದೆಲ್ಲವೂ ಸಮಸ್ಯೆಯೇ ಅಲ್ಲ ಎಂಬಂತೆ ಸಹಜವಾಗಿದ್ದರು ಅವರು.
‘ಆರಂಭದಲ್ಲಿ ಪ್ರತಿ ಹದಿನೈದು ನಿಮಿಷಕ್ಕೂ ಶೌಚಾಲಯಕ್ಕೆ ಹೋಗುವ ಸ್ಥಿತಿ ಕಾಣಿಸಿಕೊಂಡಿತು. ಮೂತ್ರದಲ್ಲಿ ರಕ್ತ ಹೋಗಲು ಶುರುವಾಯಿತು. ಇದು ಇನ್ಫೆಕ್ಷನ್ (ಸೋಂಕು) ಇರಬಹುದು ಎಂದು ಆರಂಭದಲ್ಲಿ ಎಲ್ಲರೂ ಅಂದುಕೊಂಡೆವು. ಬಹಳ ದಿನಗಳ ಬಳಿಕ ‘ಎಕ್ಟ್ರಾಪಲ್ಮರಿ ಟಿಬಿ’ ಆಗಿದೆ ಎಂದು ಖಾತ್ರಿಯಾಯಿತು. ಮೂತ್ರಕೋಶದಲ್ಲಿ ದೋಷ ಕಂಡುಬಂದ ಕಾರಣ ‘ಮೂತ್ರಕೋಶ ಶಸ್ತ್ರಚಿಕಿತ್ಸೆ (ಬ್ಲ್ಯಾಡರ್‌ಗೆ ಐಲಿಯೊಸಿಸ್ಟೋ ಪ್ಲಾಸ್ಟಿ)’ ಮಾಡಿಸಿಕೊಂಡೆ. ವೈದ್ಯರು ನನ್ನೊಳಗಿನ ಕರಳನ್ನು ಕತ್ತರಿಸಿ ಅದರ ಒಂದು ಭಾಗವನ್ನು ಮೂತ್ರಕೋಶಕ್ಕೆ ಜೋಡಿಸಿದರು. ಇದು ಕೆಎಲ್‌ಇ ಆಸ್ಪತ್ರೆಯಲ್ಲಿ ಮಾಡಿದ ಎರಡನೇ ಶಸ್ತ್ರಚಿಕಿತ್ಸೆ.
ಬೆಂಬಲವಾಗಿ ನಿಂತವರೇ ದೇವರು:
ಡಾ.ಸುಲಕ್ಷಣಾ ಅವರು ಇಷ್ಟೆಲ್ಲ ಸಮಸ್ಯೆಗಳಿಂದ ಹೋರಾಡಿ ಗೆದ್ದುಬರಲು ಕಾರಣ ಅವರ ಪತಿ ನೀಡಿದ ಬೆಂಬಲ, ಕಾಲೇಜಿನ ವಾತಾವರಣ, ಅವರ ತಾಯಿ ಹಾಗೂ ಒಬ್ಬ ಮಗಳು ನೀಡುವ ಆತ್ಮಸ್ಥೈರ್ಯ.
‘ಒಳ್ಳೆಯ ಸಂದರ್ಭ ಹಾಗೂ ಕೆಟ್ಟ ಸಂದರ್ಭಗಳಲ್ಲಿ ಯಾರು ನಮಗೆ ಬೆಂಬಲವಾಗಿ ನಿಲ್ಲುತ್ತಾರೋ ಅವರೇ ನಮ್ಮ ದೇವರು’ ಎಂದು ಅಭಿಮಾನದಿಂದ ಹೇಳಿಕೊಂಡರು ಈ ವೈದ್ಯ.
ಅವರ ಪತಿ ಡಾ.ಶ್ರೀಧರ ಬಾಳಿಗ (ಎಂಡಿಎಸ್) ಕೂಡ ಕೆಎಲ್‌ಇ ಆಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಅವರ ಪುತ್ರಿ ಪಿಯುಸಿ ಓದುತ್ತಿದ್ದಾರೆ. ಈ ಪುಟ್ಟ ಕುಟುಂಬದಲ್ಲಿ ಕಾಯಿಲೆಯೂ ಕಾಯಂ ಅತಿಥಿ ಎಂಬಂತಿದೆ. ಆದರೆ, ಯಾವುದಕ್ಕೂ ಹಿಂಜರಿಯದ ಈ ವೈದ್ಯೆಗೆ ಸಹೋದ್ಯೋಗಿಗಳು ‘ವೀರವನಿತೆ’ ಎಂದೂ ಪ್ರೀತಿಯಿಂದ ಕರೆಯುತ್ತಾರೆ.
ಅವರಿಗೆ ಕಿಡ್ನಿಸ್ಟೋನ್ ಆದಾಗ ‘ಸ್ಟೋನ್ ಲೇಡಿ’ ಎಂದು ಹೆಸರಿಟ್ಟು ಪ್ರೀತಿಯಿಂದ ಕಾಲೆಳೆದರು. ಪದೇಪದೇ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮತ್ತೆ ಕೆಲಸಕ್ಕೆ ಬಂದು ಹಾಜರಾಗುವ ಅವರನ್ನು ಕಂಡು ವಿದ್ಯಾರ್ಥಿಗಳು ‘ಐರನ್ ಲೇಡಿ’ ಎಂದು ಕರೆದರು. ಐಲೋಸಿಸ್ಟೋ ಪ್ಲಾಸ್ಟರಿ ಸರ್ಜರಿ ಮಾಡಿದಾಗ ನನಗೆ ಎಂಟು ’ಡ್ರೇನ್’ಗಳನ್ನು ಹಚ್ಚಿದ್ದರು. ಅವುಗಳನ್ನು ಹಿಡಿದುಕೊಂಡೇ ನಾನು ಕಾಲೇಜಿಗೆ ಬರುತ್ತಿದ್ದೆ. ಅದನ್ನು ಕಂಡು ಹಿರಿಯರು ‘ಆಕ್ಟೋಪಸ್’ ಎಂದು ಕಾಲೆಳೆದರು. ಕೆಲಸದ ಪರಿಸರ ಇಷ್ಟೊಂದು ಸಕಾರಾತ್ಮಕ ಆಗಿದ್ದರಿಂದಲೇ ನಾನು ಯಾವಾಗಲೂ ಖುಷಿಯಿಂದ ಇರುತ್ತೇನೆ. ಪ್ರತಿ ಎರಡು– ಮೂರು ತಿಂಗಳಿಗೊಮ್ಮೆ ನಾನು ಆಸ್ಪತ್ರೆ ಸೇರುತ್ತೇನೆ. ಎರಡೇ ದಿನದಲ್ಲಿ ಮತ್ತೆ ಕೆಲಸಕ್ಕೆ ಬರುತ್ತೇನೆ. ಇದೇ ಹೋರಾಟ. ನಾನು ಯಾವತ್ತೂ ‘ನೆಗೆಟಿವ್’ ಮಾತನಾಡುವುದಿಲ್ಲ ‘ನೆಗೆಟಿವ್’ ಕೇಳಿಸಿಕೊಳ್ಳುವುದಿಲ್ಲ ‘ನೆಗೆಟಿವ್’ ಯೋಚನೆ ಮಾಡುವುದಿಲ್ಲ. ಇದೇ ನನ್ನ ಸಂತೋಷದ ಗುಟ್ಟು. ಮೈ ನೋವು ಮಾಡಿಕೊಂಡ ಕುಸ್ತಿ ಹಿಡಿಯುವ ಪೈನ್ವಾನ ಗೆದ್ದಾಗ ಖುಷಿಯಿಂದ ಕುಣಿಯುತ್ತಾನೆ. ನಾನೂ ಅಷ್ಟೇ. ನನ್ನ ದೇಹದೊಳಗೆ ನೋವು ಇದ್ದೇ ಇರುತ್ತದೆ. ಆದರೆ, ಗೆಲುವನ್ನು ಯಾವಾಗಲೂ ಸಂಭ್ರಮಿಸುತ್ತೇನೆ ಎನ್ನುತ್ತಾರೆ ಅವರು.
ಸ್ಟೋನ್ ಲೇಡಿ:
‘ಕಿಡ್ನಿಯಲ್ಲಿ ಪದೇಪದೇ ಹರಳುಗಳು ಆಗಲು ಆರಂಭವಾಯಿತು. ದೇಹದ ಯಾವುದೋ ಭಾಗದಲ್ಲಿ ತಾನಾಗಿಯೇ ಹರಳುಗಳು ಹುಟ್ಟಿಕೊಳ್ಳುತ್ತಿದ್ದವು. ಒಂದೆರಡಲ್ಲ; ಡಜನ್ ಗಟ್ಟಲೇ ಹರಳುಗಳು ಹುಟ್ಟುಕೊಳ್ಳುತ್ತಿದ್ದವು. ಇದರೊಂದಿಗೆ ‘ಚಾಕ್ಲೊಸಿಸ್ಟ್’ ಎಂಬ ಕಾಯಿಲೆ ಕಾಣಿಸಿಕೊಂಡಿತು. ‘ಎಂಡೊ ಮೆಟ್ರಿಯಾಸಿಸ್ (ಋತು ಚಕ್ರವು ಯೋನಿಯ ಬದಲು ಬೇರೆ ಭಾಗಗಳಲ್ಲೂ ಹುಟ್ಟುವ ಕಾಯಿಲೆ) ಆಗಿದೆ ಎಂದು ಗೊತ್ತಾಯಿತು. ಪುಣೆಯ ಆಸ್ಪತ್ರೆಯಲ್ಲಿ ‘ಹಿಸ್ಟರಕ್ಟಮಿ’ (ಯೋನಿ ಶಸ್ತ್ರಚಿಕಿತ್ಸೆ)’ ಸರ್ಜರಿ ಮಾಡಿಸಿಕೊಂಡೆ’ ಎನ್ನುತ್ತ ಅದರ ಜಟಿಲತೆಯನ್ನು ನಗುತ್ತಲೇ ಬಿಚ್ಚಿಟ್ಟರು ಈ ಸಾಹಸಿ.
‘2014ರಲ್ಲಿ ನಾನು ‘ಹಿಸ್ಟರಕ್ಟಮಿ’ ಮಾಡಿಸಿಕೊಂಡಿದ್ದೆ. ಇದೀಗ ಎರಡು ವರ್ಷಗಳ ಹಿಂದೆ ‘ಹರ್ನಿಯಾ (ಅಂಡವಾಯು)’ ಕಾಣಿಸಿಕೊಂಡಿತು. ಇದರ ಶಸ್ತ್ರಚಿಕಿತ್ಸೆ ಮಾಡಿಸಿದೆ. ಬಳಿಕವೂ ಮೂತ್ರದಲ್ಲಿ ರಕ್ತ ಹೋಗಲು ಆರಂಭವಾಯಿತು. ಕಳೆದ ತಿಂಗಳು (ಮೇ 2025) ಕ್ಯಾನ್ಸರ್ ಆಗಿರಬಹುದು ಎಂದು ವೈದ್ಯರು ಸಂದೇಹ ಪಟ್ಟರು. ತಪಾಸಣೆ ಮಾಡಿಸಿಕೊಂಡೆ. ಆದರೆ, ಕ್ಯಾನ್ಸರ್ ಆಗಿಲ್ಲ ಎಂದು ಖಾತ್ರಿಯಾಯಿತು. ಮಾರನೇ ದಿನವೇ ಮತ್ತೆ ನನ್ನ ಕೆಲಸಕ್ಕೆ ಸೇರಿದೆ’ ಎಂದು ಹೇಳುವಾಗ ಈ ವೈದ್ಯಯ ಮುಖದಲ್ಲಿ ಆತ್ಮವಿಶ್ವಾಸ ಇಮ್ಮಡಿಸಿತು.
ಪಿಎಚ್.ಡಿಗೂ ಸೈ
ಇಷ್ಟೆಲ್ಲ ಸವಾಲುಗಳ ಮಧ್ಯೆಯೂ ಡಾ.ಸುಲಕ್ಷಣಾ ಅವರು ಚೈತನ್ಯ ಸುಮ್ಮನೇ ಕುಳಿತಿಲ್ಲ. ಈಗ ಮತ್ತೆ ಪಿಎಚ್.ಡಿ ಮಾಡಲು ಮುಂದಾಗಿದ್ದಾರೆ. ಮತ್ತೆ ಸಂಶೋಧನಾ ವಿದ್ಯಾರ್ಥಿನಿ ಆಗಿದ್ದಾರೆ. ಅವರ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಇದು ಕನ್ನಡಿ.
‘25ನೇ ವರ್ಷದಿಂದ ನಾನು ರೋಗಗಳನ್ನು ಎದುರಿಸುತ್ತಿದ್ದೇನೆ. ಈಗ 42 ವರ್ಷ ವಯಸ್ಸು. 17 ವರ್ಷಗಳಿಂದ ಏನೆಲ್ಲವನ್ನೂ ಎದುರಿಸಿ ಆನಂದವಾಗಿಯೇ ಬದುಕಿದ್ದೇನೆ. ಏನೇ ಆದರೂ ನನ್ನ ಕೆಲಸಕ್ಕೆ ನಾನು ಎಂದೂ ರಜೆ ಹಾಕಿ ಉಳಿದಿಲ್ಲ. ಮನೆಯಲ್ಲಿ ಕೂಡುವುದು, ಚಿಂತೆ ಮಾಡಿವುದು, ಅಳುವುದು ಎಂದೂ ಗೊತ್ತಿಲ್ಲ. ನಾನೊಬ್ಬ ವೈದ್ಯೆ, ಮೇಲಾಗಿ ವೈದ್ಯಕೀಯ ಶಿಕ್ಷಕಿ. ನನ್ನ ಬದುಕೇ ನನ್ನ ವಿದ್ಯಾರ್ಥಿಗಳಿಗೆ ಕೈದೀಪವಾಗಬೇಕು ಎಂಬುದು ನನ್ನ ಉದ್ದೇಶ. ಯಾವುದೇ ಹಿಂಜರಿಕೆ ಇಲ್ಲದೇ ನಾನು ಭಾವನೆಗಳನ್ನು ಹಂಚಿಕೊಳ್ಳುತ್ತೇನೆ. ಯಾವಾಗಲೂ ಕ್ರಿಯಾಶೀಲವಾಗಿ ಇರುವುದನ್ನು ಕಂಡು ಕಾಲೇಜಿನಲ್ಲಿ ಎಲ್ಲರೂ ಖುಷಿ ಪಡುತ್ತಾರೆ. ಇದಷ್ಟೇ ನಾನು ಬಯಸುವುದು’ ಎಂದರು.
ಜೆಎನ್‌ಎಂಸಿ ಪ್ರಾಂಶುಪಾಲರಾದ ಡಾ.ಎನ್.ಎಸ್. ಮಹಾಂತಶೆಟ್ಟಿ ಸಾಕಷ್ಟು ಅವಕಾಶಗಳನ್ನು ನೀಡಿದರು. ತಮಗೆ ಬೆನ್ನೆಲುಬಾಗಿ ನಿಂತ ತಾಯಿ ಮಾಲತಿ ಪ್ರಭು, ಹಿರಿಯರಾದ ಅನಂತ ದೇಶಪಾಂಡೆ, ವೈದ್ಯೆ ಡಾ.ಅಮೃತ ಸಿಂಧು, ಜೆಎನ್‌ಎಂಸಿ ಕಾಲೇಜಿನ ಸಮುದಾಯ ವಿಭಾಗದ ಸಹೋದ್ಯೋಗಿಗಳನ್ನೂ ನೆನೆಯುತ್ತಾರೆ ಅವರು.
‘ಭರವಸೆ ಕಳೆದುಕೊಳ್ಳಬೇಡಿ’ ಎನ್ನುವುದೊಂದೇ ನಾನು ಕಲಿತ ಪಾಠ ಎನ್ನುವುದು ಈ ವೈದ್ಯೆಯ ಮನದಾಳ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.