ADVERTISEMENT

ಡೊಂಬಾರಿ ಸಮುದಾಯಕ್ಕೆ ಪುನರ್ವಸತಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭರವಸೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 2:36 IST
Last Updated 25 ಡಿಸೆಂಬರ್ 2025, 2:36 IST
ಬೆಳಗಾವಿಯಲ್ಲಿ ಬುಧವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಭೇಟಿ ಮಾಡಲು ಬಂದ ಡೊಂಬಾರಿ ಸಮಯುದಾಯದ ಮಹಿಳೆಯರೊಂದಿಗೆ ಸಚಿವೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು
ಬೆಳಗಾವಿಯಲ್ಲಿ ಬುಧವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಭೇಟಿ ಮಾಡಲು ಬಂದ ಡೊಂಬಾರಿ ಸಮಯುದಾಯದ ಮಹಿಳೆಯರೊಂದಿಗೆ ಸಚಿವೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು   

ಬೆಳಗಾವಿ: ‘ಜ್ಯೋತಿ ನಗರದ ಸಮಗ್ರ ಅಭಿವೃದ್ಧಿಗೆ ನಿರ್ಧರಿಸಿದ್ದೇನೆ. ಜನರ ಬೇಡಿಕೆಯಂತೆ ಡಿಜಿಟಲ್ ಲೈಬ್ರರಿ, ಸಮುದಾಯ ಭವನ, ಅಂಗನವಾಡಿ ಕೇಂದ್ರ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಿ ಕೊಡಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭರವಸೆ ನೀಡಿದರು.

ಗಣೇಶಪುರ ಜ್ಯೋತಿ ನಗರದ ಹಿಂದೂ ಡೊಂಬಾರಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ಲಕ್ಷ್ಮಿ ಹೆಬ್ಬಾಳಕರ್ ಅವರ ಕೊಡುಗೆ ಸ್ಮರಿಸಿ ಸನ್ಮಾನಿಸಲು, ಬುಧವಾರ ಅವರ ಗೃಹಕಚೇರಿಗೆ ಬಂದ ಹಲವಾರು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು.

‘ಆ ಜನರಿಗೆ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಜನರು ಒಪ್ಪುವುದಾದರೆ ಅಲ್ಲ ಕೆಲವು ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಿ, ಎಲ್ಲ ನಿವಾಸಿಗಳಿಗೂ ವಸತಿ ಸೌಲಭ್ಯ ದೊರಕಿ ಸಿಕೊಡುವ ಬೃಹತ್ ಯೋಜನೆ ರೂಪಿಸುವುದಾಗಿ’ ಭರವಸೆ ನೀಡಿದರು. 

ADVERTISEMENT

‘ಅಪಾರ್ಟ್‌ಮೆಂಟ್ ನಿರ್ಮಾಣ ಮಾಡುವುದಾದರೆ 3 ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೆ ನಿವಾಸಿಗಳು ಸ್ಥಳ ಬಿಟ್ಟುಕೊಟ್ಟು ಸಹಕರಿಸಬೇಕು. ಸಂಪೂರ್ಣ ಸ್ಲಮ್ ಪ್ರದೇಶ ನಿರ್ನಾಮವಾಗಿ ಆ ಪ್ರದೇಶ ಅತ್ಯಂತ ಅಭಿವೃದ್ಧಿ ಹೊಂದುವಂತೆ ಮಾಡಲಾಗುವುದು. ನೀವೆಲ್ಲ ಯೋಚಿಸಿ, ನಿರ್ಧಾರಕ್ಕೆ ಬನ್ನಿ. ನಿಮ್ಮೊಂದಿಗೆ ನಾನಿದ್ದೇನೆ’ ಎಂದೂ ಸಚಿವೆ ಹೇಳಿದರು.

‘ಡೊಂಬಾರಿ ಸಮಾಜದವರು ನೀಡಿದ ಆಶೀರ್ವಾದ ಮತ್ತು ಬೆಂಬಲ ನನಗೆ ಜನಸೇವೆ ಮಾಡಲು ಮತ್ತಷ್ಟು ಶಕ್ತಿ ತುಂಬಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನಮ್ಮ ಸರ್ಕಾರದ ಸೌಲಭ್ಯಗಳು ತಲುಪುತ್ತಿರುವುದಕ್ಕೆ ಈ ಸ್ಪಂದನೆಯೇ ಸಾಕ್ಷಿ’ ಎಂದೂ ಹೇಳಿದರು.

ಮುಖಂಡರಾದ ಮಹೇಶ ಕೋಲಕಾರ್, ಮಲ್ಲೇಶ್ ಚೌಗುಲೆ, ಬಾಳು ದೇಸೂರಕರ, ಸಾಗರ ಲಾಖೆ, ಭೋಸಲೆ, ಶಂಕರ ಲಾಖೆ, ಬಾಳು ಲಾಖೆ, ಪಪ್ಪು ಭೋಸಲೆ, ಸಂದೀಪ ಡವಳೆ, ಸುಂದರ್ ಲಾಖೆ ಇತರರು ಇದ್ದರು.

ಬಳಿಕ ಮಹಿಳೆಯೊಂದಿಗೆ ಮಾತನಾಡಿದ ಸಚಿವೆ ಅವರ ಸಮಸ್ಯೆಗಳನ್ನು ಆಲಿಸಿದರು. ಸಚಿವೆ ಸ್ಪಂದನೆಗೆ ಹಲವು ಮಹಿಳೆಯರು ಕೃತಜ್ಞತೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.