ADVERTISEMENT

ಪರಿಸರ ಸ್ನೇಹಿ ಗುರ್ಲಾಪುರ ಶಾಲೆ

ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್‌; ವಿಜ್ಞಾನ ಕಲಿಕೆಗೆ ಆದ್ಯತೆ

ಬಾಲಶೇಖರ ಬಂದಿ
Published 30 ಆಗಸ್ಟ್ 2019, 19:30 IST
Last Updated 30 ಆಗಸ್ಟ್ 2019, 19:30 IST
ಗುರ್ಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರು ವಿಜ್ಞಾನ ಪ್ರಯೋಗ ಪ್ರಾತ್ಯಕ್ಷಿಕೆ ನೀಡಿದ ದೃಶ್ಯ
ಗುರ್ಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರು ವಿಜ್ಞಾನ ಪ್ರಯೋಗ ಪ್ರಾತ್ಯಕ್ಷಿಕೆ ನೀಡಿದ ದೃಶ್ಯ   

ಮೂಡಲಗಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಗುರ್ಲಾಪುರ ಸರ್ಕಾರಿ ಪ್ರೌಢಶಾಲೆಯು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರತಿ ವರ್ಷ ಶಾಲೆ ಪ್ರಾರಂಭದಲ್ಲಿಯೇ ಇಲ್ಲಿಯ ಮಕ್ಕಳು ಹಾಗೂ ಅವರೊಂದಿಗೆ ಶಿಕ್ಷಕರು ಸಹ ‘ಯಾವುದೇ ರೀತಿಯ ಪ್ಲಾಸ್ಟಿಕ್ ಬಳಸುವುದಿಲ್ಲ’ ಎನ್ನುವ ಪ್ರತಿಜ್ಞೆ ಮಾಡಿ ಕಟ್ಟುನಿಟ್ಟಿನಿಂದ ಅದನ್ನು ಪಾಲಿಸುತ್ತಿರುವುದರಿಂದ ಕ್ಯಾಂಪಸ್‌ನ ಎಲ್ಲಿಯೂ ಪ್ಲಾಸ್ಟಿಕ್‌ ಕಾಣುವುದಿಲ್ಲ.

ಆವರಣದಲ್ಲಿ ಪ್ರತಿ ವರ್ಷವೂ ಮಕ್ಕಳೇ ಗಿಡಗಳನ್ನು ನೆಟ್ಟು, ಮನೆಯಿಂದ ಕೊಟ್ಟಿಗೆ ಗೊಬ್ಬರ ತಂದು ಪೋಷಿಸುತ್ತಿದ್ದಾರೆ. ಗಿಡಗಳಿಗೆ ಸರಾಗವಾಗಿ ನೀರು ಹೋಗಲು ಪೈಪ್‌ಲೈನ್‌ ವ್ಯವಸ್ಥೆ ಮತ್ತು ಬೇಸಿಗೆಯಲ್ಲಿ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದರಿಂದ ಆವರಣವು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ‘ಇಕೊ ಕ್ಲಬ್’ ಮೂಲಕ ಪರಿಸರ ಸ್ನೇಹಿ ವಾತಾವರಣವನ್ನು ಅವರು ನಿರ್ಮಾಣ ಮಾಡಿ ಗಮನಸೆಳೆದಿದ್ದಾರೆ.

ADVERTISEMENT

1994ರಲ್ಲಿ ಪ್ರಾರಂಭಗೊಂಡಿರುವ ಈ ಶಾಲೆಯು ಬೆಳ್ಳಿ ಮಹೋತ್ಸವದ ಅಂಚಿನಲ್ಲಿದೆ. ಪ್ರಸಕ್ತ ಎರಡೆರಡು ವಿಭಾಗಗಳ 3 ತರಗತಿಗಳಿವೆ. ಈ ವರ್ಷ 374 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇಲ್ಲಿರುವ 11 ಶಿಕ್ಷಕರ ಪೈಕಿ 9 ಮಂದಿ ಎಂ.ಎ. ಮತ್ತು ಎಂ.ಎಸ್ಸಿ. ಸ್ನಾತಕೋತ್ತರ‌‌ ಪದವಿಧರರು. ಅವರಲ್ಲಿ ಶಿವಲಿಂಗ ಅರಗಿ ಎಂ.ಎಸ್ಸಿ, ಪಿಎಚ್.ಡಿ. ಪಡೆದಿದ್ದಾರೆ. ಇವರೆಲ್ಲರೂ ತಮ್ಮ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆ.

ಜ್ಞಾನ ಲೋಕ:

ಪ್ರತಿ ಶನಿವಾರ ವಿಜ್ಞಾನ ಪ್ರಯೋಗ,ಪವಾಡ ರಹಸ್ಯ ಬಯಲು, ಮೂಢ ನಂಬಿಕೆಗಳಿಂದ ದೂರ ಮಾಡುವ ಬಗ್ಗೆ ಪ್ರಯೋಗಾತ್ಮವಾಗಿ ತಿಳಿಸಿ ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳೆಸುವ ಪ್ರಯತ್ನ ಇಲ್ಲಿ ನಡೆಯುತ್ತಿರುವುದು ವಿಶೇಷ.

ಇಲ್ಲಿಯ ಮಕ್ಕಳು ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ 2 ಬಾರಿ ರಾಜ್ಯಕ್ಕೆ ಅಯ್ಕೆಯಾಗಿದ್ದರೆ, ರೂರಲ್ ಐಟಿ ಕ್ವಿಜ್‌ನಲ್ಲಿ ಪ್ರತಿ ವರ್ಷವೂ ಇಲ್ಲಿಯ ಮಕ್ಕಳು ಪ್ರಶಸ್ತಿಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ.

ನಿರುಪಯುಕ್ತ ವಸ್ತಗಳಿಂದ ವಿಜ್ಞಾನ ಮಾದರಿಗಳನ್ನು ಮಾಡುವುದರಲ್ಲಿ ಈ ಶಾಲೆಯ ಮಕ್ಕಳದು ಎತ್ತಿದ ಕೈ. ಈಚೆಗೆ ‘ಮೈ ಗವರ್ನಮೆಂಟ್ ಚಂದ್ರಯಾನ್-2’ ರಸಪ್ರಶ್ನೆಯಲ್ಲಿ ಭಾಗವಹಿಸಿರುವ 40 ವಿದ್ಯಾರ್ಥಿಗಳು ಪ್ರಧಾನಿ ಮೋದಿಯವರೊಂದಿಗೆ ಚಂದ್ರಯಾನ ವೀಕ್ಷಿಸುವ ಅವಕಾಶದ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

‘ಕೃಷಿ ವಿಜ್ಞಾನ ಜಾತ್ರೆ’ ಮೂಲಕ ಸಾಂಪ್ರದಾಯಿಕ ಕೃಷಿ ಬಗ್ಗೆ ಮಕ್ಕಳಲ್ಲಿ ಜೊತೆಗೆ ಪಾಲಕರಲ್ಲೂ ಜಾಗೃತಿ ಮೂಡಿಸಿದ್ದಾರೆ. ಎನ್ಎಂಎಂಎಸ್ ಪ್ರತಿಭಾ ಪರೀಕ್ಷೆಯಲ್ಲಿ 10ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ.

ಕಂಪ್ಯೂಟರ್ ಪ್ರಯೋಗಾಲಯ:

ಸರ್ಕಾರದ ಟಿಎಎಲ್‌ಪಿ ಯೋಜನೆಯಡಿ 21 ಹೊಸ ಕಂಪ್ಯೂಟರ್‌ಗಳು ಒಳಗೊಂಡ ಪ್ರಯೋಗಾಲಯ ಇಲ್ಲಿದೆ. ಮಕ್ಕಳಿಗೆ ಪ್ರತಿ ನಿತ್ಯ ಒಂದು ಗಂಟೆ ಕಂಪ್ಯೂಟರ್ ಕಲಿಸಲಾಗುತ್ತದೆ. ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿಗಳೂ ಇ-ಮೇಲ್ ಐಡಿ ಸೃಷ್ಟಿಸಿದ್ದಾರೆ. ಶಾಲಾ ಸಂಸತ್ತಿನ ಆಯ್ಕೆಯನ್ನು ಗಣಕೀಕೃತವಾಗಿ ಮಾಡುತ್ತಿರುವುದು ಇಲ್ಲಿಯ ಇನ್ನೊಂದು ವಿಶೇಷದೆ. 2 ಲಕ್ಷ ಮೌಲ್ಯದ ಪುಸ್ತಕಗಳ ಸಂಗ್ರಹಿಸಿದ್ದು, ಮಕ್ಕಳಲ್ಲಿ ಓದುವ ಸಂಸ್ಕೃತಿ ಬೆಳೆಸುತ್ತಿದ್ದಾರೆ. ಇಲ್ಲಿಯ ಬಾಲಕಿಯರ ಥ್ರೋಬಾಲ್ ತಂಡವು ಹಲವಾರು ವರ್ಷಗಳಿಂದ ರಾಜ್ಯ ಮಟ್ಟದವರೆಗೆ ಸಾಧನೆ ಮಾಡಿ ಗುರುತಿಸಿಕೊಂಡಿದೆ.

ಒಳ್ಳೆಯ ನೌಕರಿ ಮತ್ತು ಸೈನ್ಯದಲ್ಲಿರುವ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಝರಾಕ್ಸ್ ಯಂತ್ರ, ಮೈಕ್ ಸೆಟ್, ಸ್ಟೀಲ್ ಕಪಾಟು, ಡಯಾಸ್, ಮೇಜು, ಕುರ್ಚಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಶಾಲೆಗೆ ನೆರವಾಗಿದ್ದಾರೆ.

‘ಎಸ್ಸೆಸ್ಸೆಲ್ಸಿಯಲ್ಲಿ ಪ್ರತಿ ವರ್ಷವೂ ಶೇ 97ಕ್ಕಿಂತ ಹೆಚ್ಚಿನ ಫಲಿತಾಂಶವನ್ನು ಈ ಶಾಲೆ ಪಡೆಯುತ್ತಿದೆ. ಇಲಾಖೆಯಿಂದ ನೀಡುವ ಲ್ಯಾ‍ಪ್‌ಟಾಪ್‌ ಪ್ರೋತ್ಸಾಹಕ್ಕೆ ಈವರೆಗೆ 7 ವಿದ್ಯಾರ್ಥಿಗಳು ಭಾಜನರಾಗಿದ್ದಾರೆ. ಕಳೆದ ವರ್ಷ ಶಿಕ್ಷಣ ಇಲಾಖೆಯಿಂದ ‘ಅತ್ಯುತ್ತಮ ಶಾಲೆ’ ಪ್ರಶಸ್ತಿ ದೊರೆತಿದೆ’ ಎಂದು ಮುಖ್ಯಶಿಕ್ಷಕಿ ಗೀತಾ ಕರಗಣ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಪರ್ಕಕ್ಕೆ: 7349700125

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.