ADVERTISEMENT

ಬೆಳಗಾವಿ: ಭಾವೈಕ್ಯ ಮೆರೆದ ಈದ್‌–ಮಿಲಾದ್‌; ಮುಸ್ಲಿಮರೊಂದಿಗೆ ಹಿಂದೂಗಳು ಭಾಗಿ

ಸಂಭ್ರಮದಲ್ಲಿ ಮಿಂದೆದ್ದ ಸಾವಿರಾರು ಜನ, ಮುಸ್ಲಿಮರೊಂದಿಗೆ ಹಿಂದೂಗಳು ಸಹ ಭಾಗಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 8:21 IST
Last Updated 14 ಸೆಪ್ಟೆಂಬರ್ 2025, 8:21 IST
<div class="paragraphs"><p>ಬೆಳಗಾವಿಯಲ್ಲಿ ಭಾನುವಾರ ನಡೆದ ಈದ್-ಮಿಲಾದ್ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಹೆಜ್ಜೆ ಹಾಕಿದರು</p></div>

ಬೆಳಗಾವಿಯಲ್ಲಿ ಭಾನುವಾರ ನಡೆದ ಈದ್-ಮಿಲಾದ್ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಹೆಜ್ಜೆ ಹಾಕಿದರು

   

ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಬೆಳಗಾವಿ: ಪ್ರವಾದಿ ಮುಹಮ್ಮದ್‌ ಪೈಗಂಬರ್‌ ಅವರ ಜನ್ಮದಿನ ಪ್ರಯುಕ್ತ, ಈದ್–ಮಿಲಾದ್‌ ಮೆರವಣಿಗೆ ನಗರದಲ್ಲಿ ಭಾನುವಾರ ಸಡಗರದಿಂದ ನಡೆಯಿತು. ಮುಸ್ಲಿಮರೊಂದಿಗೆ ಹಿಂದೂಗಳು ಭಾಗವಹಿಸಿದ್ದು ಭಾವೈಕ್ಯದ ಕ್ಷಣಕ್ಕೆ ಸಾಕ್ಷಿಯಾಯಿತು.

ADVERTISEMENT

ಸೆ.5ರಂದು ಈದ್‌–ಮಿಲಾದ್‌ ಮೆರವಣಿಗೆ ನಿಗದಿಯಾಗಿತ್ತು. ಆದರೆ, ಮಾರನೇ ದಿನವಾದ ಸೆ.6ರಂದೇ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಇತ್ತು.

ಸತತ ಎರಡೂ ದಿನ ಮೆರವಣಿಗೆ ನಡೆದರೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಕಷ್ಟವಾಗುತ್ತದೆ ಎಂದು ಈದ್‌–ಮಿಲಾದ್‌ ಮೆರವಣಿಗೆಯನ್ನು ಸೆ.14ಕ್ಕೆ ಮುಂದೂಡಿದ್ದರು. ಜತೆಗೆ, ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿ ಪಾಲ್ಗೊಂಡು ಸಾಮರಸ್ಯ ಮೆರೆದಿದ್ದರು.

ಹಾಗಾಗಿ ಭಾನುವಾರ ಸಾವಿರಾರು ಜನರೊಂದಿಗೆ ಅದ್ದೂರಿಯಾಗಿ ಈದ್‌ ಮೆರವಣಿಗೆ ನಡೆಸಿದರು. ಇದರಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಪ್ರಮುಖರು ಪಾಲ್ಗೊಂಡರು.

ಹಳೇ ಪಿ.ಬಿ. ರಸ್ತೆಯಿಂದ ಆರಂಭಗೊಂಡ ಮೆರವಣಿಗೆ ಕೇಂದ್ರೀಯ ಬಸ್‌ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚನ್ನಮ್ಮನ ವೃತ್ತ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ ಮಾರ್ಗವಾಗಿ ಸಾಗಿ, ಕ್ಯಾಂಪ್‌ ಪ್ರದೇಶದಲ್ಲಿನ ಹಜರತ್‌ ಸೈಯದ್‌ ಅಸದ್‌ಖಾನ್‌ ದರ್ಗಾ ಆವರಣ ತಲುಪಲಿದೆ.

ಮೆರವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಸಂಭ್ರಮ ಮನೆಮಾಡಿತ್ತು. ಇಸ್ಲಾಂ ಧರ್ಮದ ಧ್ವಜಗಳು ರಾರಾಜಿಸಿದವು. ಸಾಂಪ್ರದಾಯಿಕ ದಿರಿಸಿನಲ್ಲಿ ಪುಟಾಣಿಗಳು ಕಣ್ಮನಸೆಳೆದರು. ಮೆರವಣಿಗೆಯುದ್ದಕ್ಕೂ ‘ಕವ್ವಾಲಿ’ಗಳು ಅನುರಣಿಸಿದವು. ಸಂಗೀತ ವಾದ್ಯಗಳ ಅಬ್ಬರವೂ ಜೋರಾಗಿತ್ತು.

ವಿವಿಧ ಸಂಘಟನೆಯವರು ಮತ್ತು ಮುಸ್ಲಿಮರು ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಬಾಳೆಹಣ್ಣು, ಐಸ್‌ಕ್ರೀಮ್‌, ಲಡ್ಡು, ಕುಡಿಯುವ ನೀರು ಮತ್ತು ಶರಬತ್‌ ವಿತರಿಸಿದರು.

ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಧರ್ಮಗುರು ಮುಫ್ತಿ ಮಂಜೂರ್ ಆಲಂ ಅವರು ಹಬ್ಬದ ಸಂದೇಶ ಸಾರಿದರು.

ಶಾಸಕ ಆಸೀಫ್‌ ಸೇಠ್‌, ‘‍ಮುಹಮ್ಮದ್‌ ಪೈಗಂಬರರು ಹಾಕಿಕೊಟ್ಟ ದಾರಿಯಲ್ಲಿ ಎಲ್ಲರೂ ಸಾಗೋಣ. ಹಿರಿಯರು ಅದರಲ್ಲೂ ಹೆತ್ತವರನ್ನು ಗೌರವಿಸೋಣ. ಪ್ರೀತಿ, ಸಹಬಾಳ್ವೆಯಿಂದ ಸಮಾಜದಲ್ಲಿ ಬಾಳೋಣ’ ಎಂದರು.

ಮಾಜಿ ಶಾಸಕ ಫಿರೋಜ್‌ ಸೇಠ್‌, ‘ಗಣೇಶ ಮೂರ್ತಿಗಳ ಮೆರವಣಿಗೆ ಸುಗಮವಾಗಿ ನಡೆಯಲೆಂದು ಮುಸ್ಲಿಮರು ಈದ್‌–ಮಿಲಾದ್‌ ಮೆರವಣಿಗೆ ಮುಂದೂಡಿ, ದೇಶಕ್ಕೆ ಭಾವೈಕ್ಯದ ಸಂದೇಶ ಕೊಟ್ಟಿದ್ದೀರಿ. ಬೆಳಗಾವಿಯಲ್ಲಿ ಹಿಂದೂ–ಮುಸ್ಲಿಮರು ಸಹೋದರರಂತೆ ಇದ್ದೇವೆ ಎಂದು ನಿರೂಪಿಸಿದ್ದೀರಿ. ಈ ಸಂಪ್ರದಾಯ ಹೀಗೆ ಮುಂದುವರಿಸೋಣ. ಬಡವರಿಗೆ ಸಹಾಯಹಸ್ತ ಚಾಚೋಣ’ ಎಂದರು.

ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌, ನಗರ ಪೊಲೀಸ್‌ ಕಮಿಷನರ್‌ ಭೂಷಣ ಬೊರಸೆ, ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್‌ ಜಗದೀಶ ಮಾತನಾಡಿದರು.

ಧರ್ಮಗುರು ಪೀರಸಾಬ್‌ ಸಯ್ಯದ್‌ ಕಾಶೀಮ್‌ ಅಶ್ರಫ್‌, ನಗರ ಪೊಲೀಸ್‌ ಉಪ ಆಯುಕ್ತ(ಕಾನೂನು ಮತ್ತು ಸುವ್ಯವಸ್ಥೆ) ನಾರಾಯಣ ಭರಮನಿ, ಮುಖಂಡರಾದ ಫೈಜಾನ್‌ ಸೇಠ್‌, ಅಮನ್‌ ಸೇಠ್‌, ವಿಕಾಸ ಕಲಘಟಗಿ, ರಂಜೀತ ಚವ್ಹಾಣಪಾಟೀಲ ಇತರರಿದ್ದರು.

ಪೊಲೀಸರು ಇಡೀ ನಗರದಾದ್ಯಂತ ಭದ್ರತೆ ಕೈಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.