ADVERTISEMENT

ಸರ್ದಾರ್‌ ಪಟೇಲ್‌ ಅವರ 150ನೇ ಜನ್ಮದಿನ | ನ.19ರಂದು ‘ಏಕತಾ ನಡಿಗೆ’: ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 12:37 IST
Last Updated 16 ನವೆಂಬರ್ 2025, 12:37 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಬೆಳಗಾವಿ: ‘ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 150ನೇ ಜನ್ಮದಿನ ಅಂಗವಾಗಿ, ನಗರದಲ್ಲಿ ‘ಮೈ ಭಾರತ’ ಕೇಂದ್ರದ ಸಹಯೋಗದೊಂದಿಗೆ ನ.19ರಂದು ‘ಏಕತಾ ನಡಿಗೆ’ ಹಮ್ಮಿಕೊಂಡಿದ್ದೇವೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

‘ಅಂದು ಬೆಳಿಗ್ಗೆ 7ಕ್ಕೆ ಶಹಾಪುರದ ಶಿವಾಜಿ ಉದ್ಯಾನದಿಂದ ಆರಂಭವಾಗುವ ನಡಿಗೆ ಪಾಟೀಲ ಗಲ್ಲಿಯ ಶನಿ ಮಂದಿರ, ಟಿಳಕ ಚೌಕ್‌, ರಾಮಲಿಂಗಖಿಂಡ ಗಲ್ಲಿ ಮಾರ್ಗವಾಗಿ ಸಾಗಿ, ಧರ್ಮವೀರ ಸಂಭಾಜಿ ವೃತ್ತ ತಲುಪಲಿದೆ’ ಎಂದು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಗ್ಗೆ ದೇಶದಲ್ಲಿ ಜನರಲ್ಲಿ ವಿಶ್ವಾಸವಿದೆ. ಹಾಗಾಗಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದ್ದಾರೆ. ಆದರೆ, ಸೋಲಿನಿಂದ ಕಂಗೆಟ್ಟ ಕಾಂಗ್ರೆಸ್‌ನವರು ಆಧಾರ ರಹಿತವಾಗಿ ನಮ್ಮ ಪಕ್ಷವನ್ನು ಟೀಕಿಸುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಕಾಂಗ್ರೆಸ್‌ನವರಿಗೆ ಈಗ ಯಾವ ವರ್ಗಗಳ ಬೆಂಬಲವೂ ಇಲ್ಲ. ಮುಸ್ಲಿಮರು ಮತಗಳೂ ಈಗ ಬಿಜೆಪಿಗೆ ಬಂದಿವೆ. ಈ ಬಗ್ಗೆ ಆ ‍ಪಕ್ಷದವರು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

‘ವಿದ್ಯುನ್ಮಾನ ಮತಯಂತ್ರಗಳ ಕಾರ್ಯನಿರ್ವಹಣೆ ಬಗ್ಗೆ ಕಾಂಗ್ರೆಸ್‌ನವರಿಗೆ ಸಂಶಯವಿದ್ದರೆ ದೂರು ನೀಡಬೇಕು. ಕೇವಲ ಮೌಖಿಕವಾಗಿ ದೂರಿದರೆ ಸಾಲದು’ ಎಂದ ಶೆಟ್ಟರ್‌, ‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶೀಘ್ರ 100ನೇ ಸೋಲಿನ ಸಂಭ್ರಮಾಚರಣೆ ಮಾಡಿಕೊಳ್ಳುತ್ತಾರೆ’ ಎಂದು ವ್ಯಂಗ್ಯವಾಡಿದರು.

ಮೇಯರ್‌ ಮಂಗೇಶ ಪವಾರ, ಉಪಮೇಯರ್‌ ವಾಣಿ ಜೋಶಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.