ADVERTISEMENT

ಹುಕ್ಕೇರಿ | ವಿದ್ಯುತ್‌ ಸಂಘ: ಸರ್ಕಾರದಿಂದ ₹445 ಕೋಟಿ ಬಾಕಿ

ರಾಜ್ಯ ಏಕಮಾತ್ರ ಸಂಘ: ₹245 ಕೋಟಿ ರಿಯಾಯಿತಿ ಭರಿಸದ ಕಾರಣ ಬೆಳೆದಿದೆ ₹200 ಕೋಟಿ ಬಡ್ಡಿ

ಸಂತೋಷ ಈ.ಚಿನಗುಡಿ
Published 3 ಅಕ್ಟೋಬರ್ 2025, 2:55 IST
Last Updated 3 ಅಕ್ಟೋಬರ್ 2025, 2:55 IST
ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರ ಸಂಘದ ಕಚೇರಿ
ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರ ಸಂಘದ ಕಚೇರಿ   

ಹುಕ್ಕೇರಿ (ಬೆಳಗಾವಿ ಜಿಲ್ಲೆ): ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸರಬರಾಜು ಸಹಕಾರ ಸಂಘವು ₹445 ಕೋಟಿ ಆರ್ಥಿಕ ಹೊರೆ ಎದುರಿಸುತ್ತಿದೆ.

ಹೆಸ್ಕಾಂ, ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಸೆಸ್ಕ್‌ ಕಂಪನಿಗಳು ರಾಜ್ಯದೆಲ್ಲೆಡೆ ವಿದ್ಯುತ್ ಪೂರೈಸುತ್ತವೆ. ಆದರೆ, ಹುಕ್ಕೇರಿ ತಾಲ್ಲೂಕಿನಲ್ಲಿ ಮಾತ್ರ 56 ವರ್ಷಗಳಿಂದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ‌ ಸಂಘವೇ ವಿದ್ಯುತ್ ಪೂರೈಸುತ್ತಿದೆ.

ಕಂಪನಿಗಳಿಂದ ವಿದ್ಯುತ್‌ ಖರೀದಿಸಿ ಜನರಿಗೆ ಮತ್ತು ರೈತರಿಗೆ ನೀಡುವುದು ಇದರ ಉದ್ದೇಶ. ನೇರ ಸೇವೆ, ಗುಣಮಟ್ಟ ಹಾಗೂ ತ್ವರಿತ ಸ್ಪಂದನೆಗೆ ಈ ಸಂಘ ಹೆಸರುವಾಸಿಯಾಗಿದೆ.

ADVERTISEMENT

ರಾಜ್ಯ ಸರ್ಕಾರ 2015ರಿಂದ ವಿದ್ಯುತ್‌ ರಿಯಾಯಿತಿ ಹಣ ಪಾವತಿಸಿಲ್ಲ. ಇದು ಸುಮಾರು ₹245 ಕೋಟಿ ದಾಟಿದೆ. ಹೆಸ್ಕಾಂಗೆ ಹಣ ತುಂಬದ ಕಾರಣ ಅವರು ₹200 ಕೋಟಿ ಬಡ್ಡಿ ಹಾಕಿದ್ದಾರೆ. ರಿಯಾಯಿತಿ ಹಣ ಪಾವತಿಸಬೇಕು, ಬಡ್ಡಿ ಮನ್ನಾ ಮಾಡಿಸಬೇಕು ಎಂಬ ಬೇಡಿಕೆಗೆ ಸರ್ಕಾರ ದಶಕವಾದರೂ ಕಿವಿಗೊಟ್ಟಿಲ್ಲ.

ಗೃಹಬಳಕೆಯ ರಿಯಾಯಿತಿ ಆಗಾಗ ಪಾವತಿಸಲಾಗುತ್ತಿದೆ. ಆದರೆ, ಪಂಪ್‌ಸೆಟ್‌ಗಳ ರಿಯಾಯಿತಿ ಕಟ್ಟಡಬೇಕಿದೆ. ಹೀಗಾಗಿ ಇಡೀ ತಾಲ್ಲೂಕಿನ ರೈತರು ನಿರೀಕ್ಷೆಯಲ್ಲಿದ್ದಾರೆ.

ಕಂಬಗಳ ತಯಾರಿಕೆ, ಟ್ರಾನ್ಸ್‌ಫಾರ್ಮರ್‌ ದುರಸ್ತಿ, ಪುನಃಶ್ಚೇತನ ಕೇಂದ್ರ, ಗೋದಾಮು, ವಿದ್ಯುತ್ ಕಂಬ ತಯಾರಿಕಾ ಘಟಕ, ಲೈನ್ ಸಲಕರಣೆ ತಯಾರಿಕೆ ಘಟಕಗಳು, ಗೈರಾಡ್, ಮೇನ್‌ಲೈನ್ ವೈರ್ ಮತ್ತಿತರ ಪರಿಕರಗಳನ್ನು ಇಲ್ಲಿಯೇ ತಯಾರಿಸಲಾಗುತ್ತದೆ. 11 ವಿತರಣಾ ಘಟಕಗಳನ್ನೂ ಹೊಂದಿರುವುದು ಇದರ ಸ್ವಾವಲಂಬನೆಗೆ ಸಾಕ್ಷಿ.

ಈಚೆಗೆ ನಡೆದ ಸಂಘದ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ ಬಣದ ಗುಂಪು ಆಡಳಿತ ಚುಕ್ಕಾಣಿ ಹಿಡಿದಿದೆ. ಆರ್ಥಿಕ ಹೊರೆಯಿಂದ ಸಂಘವನ್ನು ಹೊರತರುತ್ತೇವೆ ಎಂಬ ಭರವಸೆ ನೀಡಿದ್ದು, ಜನರ ನಿರೀಕ್ಷೆ ಗರಿಗೆದರಿದೆ.

ವಿದ್ಯುತ್‌ ಸಹಕಾರ ಸಂಘ ಸುಸ್ಥಿತಿಯಲ್ಲಿದೆ. ರಾಜ್ಯ ಸರ್ಕಾರದಿಂದ ಸಬ್ಸಿಡಿ ಸಂದಾಯ ಮಾಡಿ ಬಡ್ಡಿ ಮನ್ನಾ ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ
ನೇಮಿನಾಥ ಖೇಮಲಾಪುರೆ ಸ್ಥಾನಿಕ ಎಂಜಿನಿಯರ್‌ ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರ ಸಂಘ

ಏನಿದರ ಹಿರಿಮೆ

ದೇಶದಲ್ಲಿ ಮೂರೇ ವಿದ್ಯುತ್‌ ಸರಬರಾಜು ಸಹಕಾರ ಸಂಘಗಳಿವೆ. ಹುಕ್ಕೇರಿಯಲ್ಲಿ ಇರುವುದು ರಾಜ್ಯದ ಏಕೈಕ ಸಂಘ. ಇನ್ನೊಂದು ಆಂಧ್ರಪ್ರದೇಶ ಮತ್ತೊಂದು ತೆಲಂಗಾಣದಲ್ಲಿ ಇದೆ. ಸ್ವಾತಂತ್ರ್ಯ ಹೋರಾಟಗಾರ ಸಹಕಾರ ಕ್ಷೇತ್ರ ಧುರೀಣರಾಗಿದ್ದ ಅಪ್ಪಣ್ಣಗೌಡ ಪಾಟೀಲ 1969ರಲ್ಲಿ ಇದನ್ನು ಸ್ಥಾಪಿಸಿದ್ದಾರೆ. ಸದ್ಯ 1‌.47 ಲಕ್ಷ ವಿದ್ಯುತ್ ಸಂಪರ್ಕಗಳನ್ನು ನೀಡಿದೆ. ಹುಕ್ಕೇರಿ ಚಿಕ್ಕೋಡಿ ಬೆಳಗಾವಿ ತಾಲ್ಲೂಕಿನ ಮನೆಗಳು ರೈತರ ಪಂಪ್‌ಸೆಟ್‌ ವಾಣಿಜ್ಯ ಚಟುವಟಿಕೆ ಕೈಗಾರಿಕೆ ಹೀಗೆ ಪ್ರತಿಯೊಂದಕ್ಕೂ ಈ ಸಂಘವೇ ವಿದ್ಯುತ್‌ ಪೂರೈಸುತ್ತದೆ. 97 ಸಾವಿರ ಷೇರುದಾರರು 402 ಕಾರ್ಮಿಕರಿದ್ದು ಎಲ್ಲರೂ ರೈತರ ಮಕ್ಕಳು ಎಂಬುದು ಇದರ ಹಿರಿಮೆ.

3.47 ಕೋಟಿ ಯೂನಿಟ್ ಬಳಕೆ 

‘ತಾಲ್ಲೂಕಿನಲ್ಲಿ ಪ್ರತಿ ತಿಂಗಳು 3.47 ಕೋಟಿ ಯೂನಿಟ್ ವಿದ್ಯುತ್‌ ಬಳಕೆಯಾಗುತ್ತಿದೆ. ಇದಕ್ಕೆ ₹22 ಕೋ‌ಟಿ ಖರ್ಚಾಗುತ್ತದೆ. ಹೆಸ್ಕಾಂನಿಂದ 1 ಯೂನಿಟ್‌ಗೆ ₹ 6.40 ನೀಡಿ ವಿದ್ಯುತ್ ಖರೀದಿಸುತ್ತೇವೆ. ಗೃಹ ಬಳಕೆಗೆ ಪ್ರತಿ ಯೂನಿಟ್‌ಗೆ ₹ 5.80 ವಾಣಿಜ್ಯ ಬಳಕೆಗೆ ಪ್ರತಿ ಯೂನಿಟ್‌ಗೆ ₹ 7 ಕೈಗಾರಿಕೆಗಳಿಗೆ ಪ್ರತಿ ಯೂನಿಟ್‌ಗೆ ₹ 4.50 ನೀರಾವರಿ ಪಂಪ್‌ಸೆಟ್‌ಗೆ ಪ್ರತಿ ಯೂನಿಟ್‌ಗೆ ₹ 7.46 ದರವಿದೆ’ ಎಂಬುದು ಸಂಘದ ಅಧಿಕಾರಿಗಳು ಮಾಹಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.