ADVERTISEMENT

ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮ: ಈಶ್ವರಪ್ಪ ಟೀಕೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 9:01 IST
Last Updated 12 ಏಪ್ರಿಲ್ 2021, 9:01 IST
ಕಾರ್ಯಕ್ರಮವೊಂದರಲ್ಲಿ ಈಶ್ವರಪ್ಪ ಮತ್ತು ಸಿದ್ದರಾಮಯ್ಯ
ಕಾರ್ಯಕ್ರಮವೊಂದರಲ್ಲಿ ಈಶ್ವರಪ್ಪ ಮತ್ತು ಸಿದ್ದರಾಮಯ್ಯ    

ಬೆಳಗಾವಿ: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಟೀಕಿಸಿದರು.

ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರಿಂದ ತಿರಸ್ಕಾರಗೊಂಡಿರುವ ಸಿದ್ದರಾಮಯ್ಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ನಮ್ಮ ಅಭ್ಯರ್ಥಿ ಬಗ್ಗೆ ಅವರು ಹಗುರವಾದ ಹೇಳಿಕೆ ನೀಡಿದ್ದಾರೆ. ಅವರ ಮಾತುಗಳನ್ನು ಜನರು ಒಪ್ಪುವುದಿಲ್ಲ. ಮಹಿಳೆಯರು ಅವರಿಗೆ ಪಾಠ ಕಲಿಸಲಿದ್ದಾರೆ. ಕುರುಬ ಸಮಾಜವೂ ಅವರೊಂದಿಗೆ ಇಲ್ಲ. ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ವರ್ಗಗಗಳಿಗೆ ಯಾವುದೇ ಕೊಡುಗೆ ನೀಡಲಿಲ್ಲ. ಈಗ ಮಾತನಾಡುತ್ತಿದ್ದಾರೆ’ ಎಂದು ಕುಟುಕಿದರು.

ADVERTISEMENT

‘ಕಾಂಗ್ರೆಸ್ ಎಲ್ಲ ಕಡೆ ಹೀನಾಯವಾಗಿ ಸೋಲನುಭವಿಸುತ್ತಿದೆ. ಕಾಂಗ್ರೆಸ್ ಈಗ ಖಾಲಿಯಾಗಿದೆ. ಹೀಗಾಗಿ, ಸದ್ದು ಮಾಡುತ್ತಿದೆ. ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಕೂಡ ಖಾಲಿ ಕೊಡಗಳೆ. ಸುಳ್ಳು ಹೇಳುವುದೇ ಅವರ ಕಾಯಕವಾಗಿದೆ’ ಎಂದು ಆರೋಪಿಸಿದರು.

‘ಬಿಜೆಪಿಯವರಿಗೆ ರಾಹುಲ್ ಗಾಂಧಿ ಸಿಂಹಸ್ವಪ್ನವಾಗಿದ್ದಾರೆ’ ಎಂಬ ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ರಾಹುಲ್ ಹೋದಲ್ಲೆಲ್ಲಾ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಅವರನ್ನು ಬೆಳಗಾವಿಗೆ ಕರೆಸಲಿ. ಅವರು ಸಿಂಹವೋ, ನರಿಯೋ, ಕುರಿಯೋ ಎನ್ನುವುದು ಗೊತ್ತಾಗುತ್ತದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.