ADVERTISEMENT

ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪಾಲಿಸಬೇಕು: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 12:58 IST
Last Updated 15 ಮಾರ್ಚ್ 2022, 12:58 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಹಿಜಾಬ್ ಕುರಿತಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ಎಲ್ಲರೂ ಪಾಲಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ನ್ಯಾಯಾಲಯದ ತೀರ್ಪು ಅಂತಿಮ. ತೀರ್ಪನ್ನು ಒಂದೇ ಧರ್ಮದ ಪರವಾಗಿಯೇನೂ ನೀಡಿಲ್ಲ. ಎಲ್ಲ ರೀತಿಯ ಬಣ್ಣ ಹಾಗೂ ವಸ್ತ್ರಕ್ಕೆ ಅವಕಾಶ ಕೊಟ್ಟಿಲ್ಲ. ಆದ್ದರಿಂದ ಎಲ್ಲರೂ ಪಾಲಿಸಬೇಕು. ಇದು ಹಿಂದಿನಿಂದಲೂ ವಿವಾದವೇನೂ ಆಗಿರಲಿಲ್ಲ’ ಎಂದರು.

‘ಹಿಬಾಜ್‌ ವಿಚಾರದಲ್ಲಿ ರಾಜ್ಯದಲ್ಲಿ ಅಶಾಂತಿ ಉಂಟು ಮಾಡಿದವರು ನಾವಲ್ಲ. ಮಾಡಿದವರೆ ಅವರು (ಬಿಜೆಪಿಯವರು). ಕೆಲವು ಎ ಟೀಂ, ಬಿ ಟೀಂಗಳನ್ನು ಸಾಕುತ್ತಿರುವವರು ಅವರೆ. ರಾಷ್ಟ್ರಮಟ್ಟದಲ್ಲಿ ಅಸಾದುದ್ದೀನ್ ಒವೈಸಿ ಸಾಕಿದ್ದಾರೆ. ಉತ್ತರಪ್ರದೇಶದಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡಲು ಸಮಾಜವಾದಿ ಪಕ್ಷದ 12 ಅಭ್ಯರ್ಥಿಗಳನ್ನು ಅವರು ಸೋಲಿಸಿದ್ದಾರೆ. ತಮ್ಮ ಅನುಕೂಲಕ್ಕಾಗಿ ಅವರನ್ನು ಬಿಜೆಪಿಯವರು ಬಳಸಿಕೊಳ್ಳುತ್ತಾರೆ. ಒವೈಸಿ ರಾಜ್ಯಕ್ಕೂ ಬರುತ್ತಾರೆ. ಅದೆಲ್ಲವನ್ನೂ ಎದುರಿಸುವಂತಹ ಸಂಘಟನೆಯನ್ನು ನಾವು ಮಾಡಿಕೊಳ್ಳಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ದಿ ಕಾಶ್ಮಿರ್‌ ಫೈಲ್ಸ್‌’ ಚಲನಚಿತ್ರದ ಮೂಲಕ ಬಿಜೆಪಿಯವರು ಹೊಸದೊಂದು ಅಪ್ರಚಾರ ಪ್ರಾರಂಭಿಸಿದ್ದಾರೆ. ಅದು ಬಿಜೆಪಿಯವರ ಕಾರ್ಯಸೂಚಿಯಾಗಿದೆ. ರಾಜ್ಯದಲ್ಲಿರುವ ಜನರಿಗೆ ನೀರು, ಉತ್ತಮ ರಸ್ತೆ, ಉದ್ಯೋಗ ನೀಡದೆ ಕೇವಲ ₹ 10 ಶಾಲು ಹಾಕಿಕೊಂಡು ಧಂಗೆ ಮಾಡುವುದೇ ಬಿಜೆಪಿಯವರ ಮುಖ್ಯ ಕೆಲಸವಾಗಿದೆ’ ಎಂದು ಆರೋಪಿಸಿದರು. ‘ದಲಿತರ ಮೇಲೆ ಆಗಿರುವ–ಆಗುತ್ತಿರುವ ದೌರ್ಜನ್ಯದ ಬಗ್ಗೆ ಚಲನಚಿತ್ರ ತೆಗೆಯಬೇಕಲ್ಲವೇ?. ಬಿಜೆಪಿಯವರ ಆಡಳಿತದಲ್ಲಿ ಯಾರೂ ಸತ್ತಿಲ್ಲವೇ?’ ಎಂದು ಕೇಳಿದರು.

‘ಕಾಶ್ಮೀರಿ ಪಂಡಿತರ ಮೇಲೆ ಅನ್ಯಾಯ ಆಗಿರಬಹುದು, ಒಪ್ಕೊತೀವಿ. ಬೇರೆಯವರ ಮೇಲೆ ಆಗಿರುವುದೂ ಬೆಳಕಿಗೆ ಬರಬೇಕಲ್ಲವೇ? ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಘಟನೆಗಳನ್ನು ಹೈಲೈಟ್ ಮಾಡುವುದಿಲ್ಲವೇಕೆ? ಅವರೇನೂ ಹಿಂದೂಗಳಲ್ಲವೇ? ಬಿಜೆಪಿ ಕಾರ್ಯಕರ್ತನಾಗಿದ್ದರೆ ಮಾತ್ರ ಹಿಂದೂ ಎಂದು ಹೈಲೈಟ್ ಮಾಡುತ್ತಾರೆ. ಇಲ್ಲವಾದಲ್ಲಿ ಜಾತಿ ಬಣ್ಣ ಕಟ್ಟುತ್ತಾರೆ. ಈಗ ಬಂದಿರುವ ಸಿನಿಮಾ ಟ್ರೇಲರ್‌ ಅಷ್ಟೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತ್ತಷ್ಟು ಅಂತಹ ಸಿನಿಮಾಗಳನ್ನು ತರುತ್ತಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.