ADVERTISEMENT

ಪಂಪ್‌ಸೆಟ್‌ ದುರಸ್ತಿಗೆ ರೈತರ ಆಗ್ರಹ

ನವಿಲುತೀರ್ಥ ಕಚೇರಿಗೆ ಮುತ್ತಿಗೆ ಹಾಕಿದ ರೈತರು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 2:08 IST
Last Updated 24 ಫೆಬ್ರುವರಿ 2026, 2:08 IST
ಸವದತ್ತಿಯಲ್ಲಿ ನವಿಲುತೀರ್ಥ ನೀರಾವರಿ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ಪಿ.ಎಚ್. ಗಂಗಣ್ಣವರ ಅವರಿಗೆ ರೈತರು ಪ್ರತಿಭಟನೆ ನಡೆಸಿದರು  
ಸವದತ್ತಿಯಲ್ಲಿ ನವಿಲುತೀರ್ಥ ನೀರಾವರಿ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ಪಿ.ಎಚ್. ಗಂಗಣ್ಣವರ ಅವರಿಗೆ ರೈತರು ಪ್ರತಿಭಟನೆ ನಡೆಸಿದರು     

ಸವದತ್ತಿ: ಯರಗಟ್ಟಿ ಏತನೀರಾವರಿ ಕಾಲುವೆಗೆ ತಿಂಗಳಾದರೂ ನೀರಿಲ್ಲ, ಕಚೇರಿಯಲ್ಲಿ ಅಧಿಕಾರಿಗಳಿಲ್ಲ. ಪಂಪ್‌ಸೆಟ್‌ಗಳನ್ನು ತ್ವರಿತವಾಗಿ ದುರಸ್ತಿ ಮಾಡಿ, ಬಳಿಕ ಸ್ಥಗಿತಗೊಳಿಸಿದ ಸಮಯ ಆಧರಿಸಿ ಇನ್ನೂ 20 ದಿನ ನೀರು ಹರಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ರೈತರು ಸೋಮವಾರ ನವಿಲುತೀರ್ಥ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಮಲಪ್ರಭಾ ಎಡದಂಡೆ ಕಾಲುವೆ ಮೂಲಕ ಯರಗಟ್ಟಿ ಏತನೀರಾವರಿ ಜಾಕ್ವೆಲ್‌ಗೆ ಬಂದ ನೀರನ್ನು ಲಿಫ್ಟ್ ಮಾಡಿ ಕಾಲುವೆಗೆ ಹರಿಸಲಾಗುತ್ತಿದೆ. ಇರುವ ನಾಲ್ಕಾರು ಪಂಪ್‌ಸೆಟ್‌ಗಳಲ್ಲಿ ಎರಡ್ಮೂರು ಕೆಟ್ಟುನಿಂತಿವೆ. ಫೆ.28 ಕ್ಕೆ ಅವುಗಳನ್ನು ಸ್ಥಗಿತಗೊಳಿಸುತ್ತಿದ್ದೀರಿ. ಆಲದಕಟ್ಟಿ ಸೇರಿ ಹಲವು ಗ್ರಾಮಗಳ ಜಮೀನುಗಳಿಗೆ ಇನ್ನೂ ನೀರುಣಿಸಿಲ್ಲ ಎಂದು ಆಗ್ರಹಿಸಿದರು.

ಆಲದಕಟ್ಟಿ, ರೈನಾಪೂರ, ಜೀವಾಪೂರ, ಸೊಪ್ಪಡ್ಲ ಹಾಗೂ ಸುತ್ತಲಿನ ಪ್ರದೇಶಗಳಿಗೆ ಮೇಲ್ಮಟ್ಟದ ಕ್ಷೇತ್ರಕ್ಕೆ ನೀರುಣಿಸುವ 2 ಪಂಪ್‌ಗಳು ಕೆಟ್ಟು ಸಾಕಷ್ಟು ಪ್ರಮಾಣದ ಬೆಳೆಗಳು ನೀರಿಲ್ಲದೆ ಒಣಗಿ ಕಮರುತ್ತಿವೆ. ಕಡಲೆ, ಗೋವಿನಜೋಳ, ಸೂರ್ಯಕಾಂತಿ ಸೇರಿ ಹಿಂಗಾರು ಬೆಳೆಗಳಿಗೆ ನೀರಿನ  ಅವಶ್ಯವಿದೆ. ಇನ್ನೂ ಸ್ವಲ್ಪ ಅವಧಿ ನೀರುಣಿಸಿದರೆ ಬೆಳೆ ಸಿಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. 

ADVERTISEMENT

ಅತಿವೃಷ್ಟಿಯಿಂದಾಗಿ ಮುಂಗಾರು ಬೆಳೆ ನಿರೀಕ್ಷೆಯಂತೆ ಫಲ ನೀಡಲಿಲ್ಲ. ಸದ್ಯ ಹಿಂಗಾರು ಬೆಳೆ ಸಮೃದ್ಧಿಯಿಂದ ಕೂಡಿದೆ. ಸುಮಾರು 40 ವರ್ಷ ಹಳೆಯದಾದ ಈ ಪಂಪ್‌ಗಳಿಂದ ಪ್ರತಿವರ್ಷ ಇದೇ ಸಮಸ್ಯೆ ಎದುರಿಸುವಂತಾಗಿದೆ. ಕೆಟ್ಟು ನಿಂತ ಎರಡು ಪಂಪ್‌ಗಳ ಮೂಲಕ ಕಾಲುವೆಗೆ ನೀರು ಇರದಿದ್ದರೆ ಸ್ವಲ್ಪವಾದರೂ ಸಮಸ್ಯೆ ಇಲ್ಲವಾಗುತ್ತಿತ್ತು. ರೈತರ ಬೇಡಿಕೆ ಈಡೇರದಿದ್ದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.

ಅಧಿಕಾರಿಗಳ ಭರವಸೆ ಮೇರೆಗೆ ಪ್ರತಿಭಟನೆ ಸ್ಥಗಿತಗೊಳಿಸಿದ ರೈತರು ಮನವಿ ಸಲ್ಲಿಸಿದರು.  ಪ್ರಭು ಚವಡಪ್ಪನವರ, ಮಲ್ಲನಗೌಡ ಸಣ್ಣಗೌಡರ, ಈಶ್ವರ ಚವಡಪ್ಪನವರ, ಬಸವರಾಜ ಹಳಮನಿ, ಚಂದ್ರು ಸಣ್ಣಗೌಡ್ರ ಹಾಗೂ ಪ್ರಮುಖರು ಇದ್ದರು.

Quote - ಯರಗಟ್ಟಿ ಏತನೀರಾವರಿ ಜಾಕ್ವೆಲ್‌ನಿಂದ ಹರಿಸುವ ಮೇಲ್ಮಟ್ಟದ ಕ್ಷೇತ್ರದಲ್ಲಿ 2 ಪಂಪ್‌ಗಳು ಕೆಟ್ಟುನಿಂತಿವೆ. ಸುಮಾರು 32 ಕ್ಯೂಸೆಕ್ ನೀರು ಹರಿಸುವುದಿದೆ. ದುರಸ್ತಿ ಮಾಡಿಸಿಲಾಗಿತ್ತು ಮೋಟರ್‌ ಸುಟ್ಟಿದ್ದರಿಂದ ಸಮಸ್ಯೆಯಾಗಿದೆ. ಕ್ರಮ ಕೈಗೊಳ್ಳಲಾಗುವುದು. ಪಿ.ಎಚ್. ಗಂಗಣ್ಣವರ ಕಾರ್ಯನಿರ್ವಾಹಕ ಎಂಜಿನಿಯರ್ ನೀರಾವರಿ ನಿಗಮ ನವಿಲುತೀರ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.