ಮೂಡಲಗಿ ಹೊರವಲಯದ ಗುರ್ಲಾಪುರದಲ್ಲಿ ರೈತ ಬಸವಣ್ಣಿ ಮುಗಳಖೋಡ ಅವರ ತೋಟದಲ್ಲಿ ಅರಿಸಿನ ನಾಟಿ ಮಾಡುತ್ತಿರುವುದು
ಮೂಡಲಗಿ: ಕಳೆದೆರಡು ವರ್ಷಗಳಿಂದ ಅರಿಸಿನಕ್ಕೆ ಉತ್ತಮ ದರ ಸಿಗುತ್ತಿದೆ. ಹಾಗಾಗಿ ತಾಲ್ಲೂಕಿನ ರೈತರು ಈ ವರ್ಷ ಅರಿಸಿನ ಬೆಳೆ ನಾಟಿಗೆ ಹೆಚ್ಚಿನ ಉತ್ಸಾಹ ತೋರಿದ್ದಾರೆ.
ಈ ಸಲ ಮುಂಗಾರು ಪೂರ್ವದಲ್ಲಿ ಮತ್ತು ರೋಹಿಣಿ ಮಳೆ ಉತ್ತಮವಾಗಿ ಸುರಿದಿದೆ. ಜತೆಗೆ, ಎರಡು ವಾರಗಳಿಂದ ವರುಣ ಬಿಡುವು ಕೊಟ್ಟ ಕಾರಣ ಕೃಷಿಕರು ಹುಮ್ಮಸ್ಸಿನಿಂದ ಭೂಮಿಗಿಳಿದು ಅರಿಸಿನ ಬೀಜಗಳ ನಾಟಿ ಮಾಡುತ್ತಿದ್ದಾರೆ.
ಈ ಮಧ್ಯೆ, ನೀರಾವರಿ ಸೌಕರ್ಯ ಹೊಂದಿದ ರೈತರು ಏಪ್ರಿಲ್, ಮೇ ತಿಂಗಳಲ್ಲೇ ಅರಿಸಿನ ಬೀಜ ನಾಟಿ ಮಾಡಿದ್ದರು. ಅವರ ಭೂಮಿಯಲ್ಲಿ ಈಗ ಅರಿಸಿನ ಸಸಿ ಬೆಳೆಯುತ್ತಿವೆ.
2024ರ ಮಾರ್ಚ್‌ನಲ್ಲಿ ಅರಿಸಿನ ದರ ಕ್ವಿಂಟಲ್‌ಗೆ ₹13 ಸಾವಿರದಿಂದ ₹20 ಸಾವಿರದವರೆಗೆ ಇತ್ತು. 2025ರ ಮಾರ್ಚ್‌ನಲ್ಲಿ ₹13 ಸಾವಿರದಿಂದ ₹22 ಸಾವಿರದವರೆಗೆ ದರವಿದೆ. ಕಳೆದೆರಡು ವರ್ಷ ನಿಶ್ಚಿತ ದರ ಸಿಕ್ಕಿದ್ದರಿಂದ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ ಕಾರಣ, ಈ ಬೆಳೆ ಬೆಳೆಯುವವರ ಪ್ರಮಾಣ ವೃದ್ಧಿಯಾಗುತ್ತಿದೆ.
ಅರಿಸಿನದತ್ತ ಒಲವು:
ಮೂಡಲಗಿಯಲ್ಲಿ ಒಂದೂವರೆ ದಶಕದ ಹಿಂದೆ ಮುಖ್ಯ ಬೆಳೆಯಾದ ಕಬ್ಬಿನೊಂದಿಗೆ ಅಲ್ಪ ಪ್ರಮಾಣದಲ್ಲಿ ಅರಿಸಿನ ಬೆಳೆಯುತ್ತಿದ್ದರು. ಯಾವುದೇ ರೈತ ಒಂದರಿಂದ ಎರಡು ಎಕರೆ ಅರಿಸಿನ ಬೆಳೆದರೂ ಹೆಚ್ಚಿತ್ತು. ಆದರೆ, ಈಗ ಉತ್ತಮ ಆದಾಯ ಕೈಗೆಟುಕುತ್ತಿರುವ ಹಿನ್ನೆಲೆಯಲ್ಲಿ ಮೂಡಲಗಿ, ರಾಜಾಪುರ ಭಾಗದ ರೈತರು ಮೂರರಿಂದ ಏಳು ಎಕರೆಯವರೆಗೆ ಅರಿಸಿನ ಬೆಳೆಯುತ್ತಿದ್ದಾರೆ.
‘ಕಳೆದ ವರ್ಷ ಆರು ಎಕರೆಯಲ್ಲಿ ಅರಿಸಿನ ಬೆಳೆದಿದ್ದೆ. ಎಕರೆಗೆ 35 ಕ್ವಿಂಟಲ್ ಇಳುವರಿ ಬಂದಿತ್ತು. ಸಾಂಗ್ಲಿ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹14 ಸಾವಿರದಿಂದ ₹16 ಸಾವಿರ ದರ ಸಿಕ್ಕಿತ್ತು. ಈ ವರ್ಷವೂ ಆರು ಎಕರೆಯಲ್ಲಿ ನಾಟಿ ಮಾಡಿದ್ದೇನೆ. ಖರ್ಚು–ವೆಚ್ಚವನ್ನೆಲ್ಲ ತೆಗೆದು, ಎಕರೆಗೆ ₹3.50 ಲಕ್ಷದಿಂದ ₹4 ಲಕ್ಷ ಲಾಭವಾಗುವುದು ಖಾತ್ರಿ’ ಎಂದು ಗುರ್ಲಾಪುರದ ರೈತ ಬಸವಣ್ಣಿ ಮುಗಳಖೋಡ ಹೇಳಿದರು.
ಇದೇ ಊರಿನ ಪ್ರಶಾಂತ ಮುಗಳಖೋಡ, 30 ಗುಂಟೆಯಲ್ಲಿ ಅರಿಸಿನ ಬೆಳೆದು ₹2.50 ಲಕ್ಷ ಲಾಭ ಗಳಿಸಿದ ಬಗ್ಗೆ ಸಂತಸ ಹಂಚಿಕೊಂಡರು.
‘ಅರಿಸಿನ ಬೆಳೆಯೊಂದಿಗೆ ಸ್ವೀಟ್‌ಕಾರ್ನ್, ಗೋವಿನಜೋಳ, ಮೆಣಸಿನಕಾಯಿ ಮತ್ತಿತರ ಮಿಶ್ರಬೆಳೆ ಬೆಳೆದು ಹೆಚ್ಚಿನ ಲಾಭ ಗಳಿಕೆಗೆ ಅವಕಾಶವಿದೆ’ ಎಂದು ರೈತ ರವಿ ಮುಗಳಖೋಡ ತಿಳಿಸಿದರು.
‘ಅರಿಸಿನ ಬೆಳೆದ ನಂತರ ಭೂಮಿ ಫಲವತ್ತತೆ ಹೆಚ್ಚುತ್ತದೆ. ಮಾರನೇ ವರ್ಷ ಇಲ್ಲಿಯೇ ಕಬ್ಬು ಬೆಳೆದು ಹೆಚ್ಚು ಇಳುವರಿ ಪಡೆಯಬಹುದು’ ಎನ್ನುತ್ತಾರೆ ರಾಜಾಪುರದ ರೈತ ರಾಜು ಬೈರುಗೋಳ.
ಮೂಡಲಗಿ ತಾಲ್ಲೂಕಿನಲ್ಲಿ 1560 ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆ ಇದೆ. ಅದರಲ್ಲಿ 850 ಹೆಕ್ಟೇರ್‌ನಷ್ಟು ಅರಿಸಿನ ಬೀಜ ನಾಟಿ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 100 ಹೆಕ್ಟೇರ್ ಹೆಚ್ಚಿನ ಪ್ರದೇಶದಲ್ಲಿ ಅರಿಸಿನ ನಾಟಿಯಾಗುತ್ತಿದೆ.ಮಲ್ಲಿಕಾರ್ಜುನ ಜನಮಟ್ಟಿ, ಹಿರಿಯ ತಾಲ್ಲೂಕು ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ
ಸದ್ಯ ಅರಿಸಿನಕ್ಕೆ ಕ್ವಿಂಟಲ್‌ಗೆ ₹13 ಸಾವಿರ ದರವಿದೆ. ಮಹಾರಾಷ್ಟ್ರವಲ್ಲದೆ; ಕೇರಳ ಬೆಂಗಳೂರು ಶಿರಸಿ ಮತ್ತಿತರ ಮಾರುಕಟ್ಟೆಗೂ ಪಾಲೀಶ್ ಮಾಡದ ಅರಿಸಿನ ಕಳುಹಿಸುತ್ತಿದ್ದೇವೆ.ಮುತ್ತಪ್ಪ ಬಿರನಾಳ, ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.