ADVERTISEMENT

ಚನ್ನಮ್ಮನ ಕಿತ್ತೂರು: ಭೂಮಿ ಹಕ್ಕಿಗಾಗಿ ರಸ್ತೆ ತಡೆದ ರೈತರು

ಮುಖ್ಯಮಂತ್ರಿ ಭೇಟಿಗೆ ಸಿಗದ ಅವಕಾಶ: ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2023, 10:05 IST
Last Updated 4 ಅಕ್ಟೋಬರ್ 2023, 10:05 IST
ಚನ್ನಮ್ಮನ ಕಿತ್ತೂರಿನಲ್ಲಿ ಸಾಗುವಳಿ ಹಕ್ಕಿಗಾಗಿ ನಡೆದ ಹೆದ್ದಾರಿ ತಡೆಯಲ್ಲಿ ಪಾಲಕರೊಂದಿಗೆ ವಿದ್ಯಾರ್ಥಿಗಳೂ ಭಾಗವಹಿಸಿದ್ದರು
ಚನ್ನಮ್ಮನ ಕಿತ್ತೂರಿನಲ್ಲಿ ಸಾಗುವಳಿ ಹಕ್ಕಿಗಾಗಿ ನಡೆದ ಹೆದ್ದಾರಿ ತಡೆಯಲ್ಲಿ ಪಾಲಕರೊಂದಿಗೆ ವಿದ್ಯಾರ್ಥಿಗಳೂ ಭಾಗವಹಿಸಿದ್ದರು   

ಪ್ರಜಾವಾಣಿ ವಾರ್ತೆ

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಕುಲವಳ್ಳಿ ಸೇರಿ ಒಂಬತ್ತು ಗೊಂಚಲು ಗ್ರಾಮಗಳ ಜಮೀನಿನಲ್ಲಿ ದಶಕಗಳಿಂದ ಸಾಗುವಳಿ ಮಾಡುತ್ತ ಬಂದಿರುವ ರೈತರಿಗೆ ಭೂಮಿ ಹಕ್ಕು ನೀಡಬೇಕು ಮತ್ತು ಈಗಾಗಲೇ ಸಿದ್ಧಪಡಿಸಿರುವ ಭೂಮಿ ನಕ್ಷೆ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ಇಲ್ಲಿ ನಡೆದ ಮೂರನೇ ಪ್ರತಿಭಟನೆ ತೀವ್ರ ಸ್ವರೂಪ ತಾಳಿತು.

ಜಾನುವಾರು, ಮಕ್ಕಳು, ಮಹಿಳೆಯರು ಹಾಗೂ ರೈತರು ಸೇರಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಹೊರಟಿದ್ದ ವಾಹನಗಳನ್ನು ತಡೆದ ಪರಿಣಾಮ ಎಲ್ಲರೂ ನಡೆದುಕೊಂಡು ಬಂದು ಹೆದ್ದಾರಿ ಸೇರಿದರು. ಅಲ್ಲಿ ಒಂದೂವರೆ ತಾಸು ಎರಡೂ ಬದಿಯ ಹೆದ್ದಾರಿ, ಸರ್ವೀಸ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ADVERTISEMENT

ರಸ್ತೆಯ ಮೇಲೆ ಒಲೆ ಹೂಡಿ ಅಡುಗೆ ಮಾಡಲೂ ಪ್ರಾರಂಭಿಸಿದರು. ಹಠಾತ್ ಹೆದ್ದಾರಿ ಬಂದ್ ನಡೆಸಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತವು. ಬೆಳಗಾವಿಯಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಕುರುಬರ ಸಮಾವೇಶಕ್ಕೆ ಹೊರಟಿದ್ದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೂ ಬಂದ್ ಬಿಸಿ ತಟ್ಟಿತು. ಮಾರ್ಗ ಬದಲಿಸಿ ಖಾನಾಪುರ ಮೂಲಕ ಬೆಳಗಾವಿಗೆ ತೆರಳುವಂತೆ ಪೊಲೀಸರು ಅವರಿಗೆ ಸೂಚಿಸಿದರು.

ಶಾಲಾ ವಿದ್ಯಾರ್ಥಿನಿಯೊಬ್ಬಳು ಬಿಸಿಲಿನ ಝಳಕ್ಕೆ ಮೂರ್ಛೆ ಹೋದಳು. ಆಕೆಯನ್ನು ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಬೆಳಗಾವಿಗೆ ಬಂದಿದ್ದ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಸಮಯ ಸಿಗದ ಕಾರಣ ಕಿತ್ತೂರು ತಹಶೀಲ್ದಾರ್ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ರೈತಪರ ಹೋರಾಟಗಾರ ಪಿ.ಎಚ್. ನೀಲಕೇರಿ, ಬಿಷ್ಟಪ್ಪ ಶಿಂಧೆ ತಿಳಿಸಿದರು.

‘ದಶಕಗಳಿಂದ ಸಾಗುವಳಿ ಹಕ್ಕು ನೀಡಬೇಕಿದ್ದ ಸರ್ಕಾರದ ಅಧಿಕಾರಿಗಳು ನಮಗೆ ವಂಚಿಸುತ್ತ ಬಂದಿದ್ದಾರೆ. ಕುಲವಳ್ಳಿ ಗುಡ್ಡದ ಭೂಮಿಯು ಮುಳ್ಳುಕಂಟಿ, ಕಲ್ಲುಗಳಿಂದ ಕೂಡಿದೆ. ಅಲ್ಲಿ ಜನವಸತಿ ಇಲ್ಲ ಎಂದು ತಾಲ್ಲೂಕು ಆಡಳಿತ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದೆ. ಹೀಗಾಗಿ ನಮಗೆ ಭೂಮಿ ಹಕ್ಕು ಸಿಗದಂತೆ ಅಧಿಕಾರಿಗಳು ನೋಡಿಕೊಂಡಿದ್ದಾರೆ’ ಎಂದು ಹೋರಾಟಗಾರರು ಆರೋಪಿಸಿದರು.

‘ಎಂಟು ಸರ್ಕಾರಿ ಶಾಲೆಗಳಿವೆ, ಒಂದು ಪ್ರೌಢಶಾಲೆ ಇದೆ, ಗ್ರಾಮ ಪಂಚಾಯ್ತಿ ಇದೆ, 2,700 ಕುಟುಂಬಗಳು ಒಂಬತ್ತು ಹಳ್ಳಿಗಳಲ್ಲಿ ವಾಸ ಮಾಡುತ್ತಿವೆ. ಸರ್ಕಾರದ ಅಧಿಕೃತ ದಾಖಲೆ ಪ್ರಕಾರ ಆರು ಸಾವಿರ ಜನಸಂಖ್ಯೆ ಇದೆ. ಅದರೂ ಇಲ್ಲಿ ಜನವಸತಿ ಇಲ್ಲ ಎಂದು ತಾಲ್ಲೂಕು ಆಡಳಿತ ಮಾಹಿತಿ ನೀಡುತ್ತದೆ’ ಎಂದು ಅಸಹಾಯಕತೆ ತೋಡಿಕೊಂಡರು.

ಹೋರಾಟಗಾರರಾದ ಶಿವಾನಂದ ಹೊಳೆಹಡಗಲಿ, ಅಪ್ಪೇಶ ದಳವಾಯಿ, ಸಿದ್ದಣ್ಣ ಕಂಬಾರ, ಸರಸ್ವತಿ ಹೈಬತ್ತಿ, ಬಸವರಾಜ ಹೈಬತ್ತಿ, ಅರ್ಜುನ ಮಡಿವಾಳರ, ರಾಚಯ್ಯ ಒಕ್ಕುಂದಮಠ, ಮಹಾಂತೇಶ ಎಮ್ಮಿ, ಕಾಸೀಂ ನೇಸರಗಿ, ನಾಗಪ್ಪ ಅಸಲನ್ನವರ, ಮಡಿವಾಳಪ್ಪ ವರಗಣ್ಣವರ, ಸುರೇಶ ತೋಫಗಾನಿ, ದಶರಥ ಮಡಿವಾಳರ, ಒಂಬತ್ತು ಹಳ್ಳಿಗಳ ಜನರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.