
ಬೆಳಗಾವಿ: 'ಇಂದು ಕಬ್ಬು ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಆದರೆ, ರಾಜ್ಯ ಸರ್ಕಾರ ರೈತರ ಸಂಕಷ್ಟ ಆಲಿಸಲು ಮುಂದೆಬರುತ್ತಿಲ್ಲ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು.
'ಪ್ರತಿ ಟನ್ ಕಬ್ಬಿಗೆ ₹3,500 ನೀಡುವಂತೆ ಗುರ್ಲಾಪುರ ಬಳಿ ಕಬ್ಬು ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವೇ ಮುಂದಾಳತ್ವ ವಹಿಸಿ ಅವರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಬೇಕಿತ್ತು. ಆದರೆ, ರಾಜ್ಯ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಅವರ ಹೋರಾಟಕ್ಕೆ ಬೆಂಬಲ ಸೂಚಿಸಲು ಇಲ್ಲಿಗೆ ಬಂದಿದ್ದೇವೆ' ಎಂದರು.
'ರಾಜ್ಯದಲ್ಲಿ 2014ರಲ್ಲಿ ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆದ ವೇಳೆ ಕಬ್ಬಿನ ವಿಚಾರವಾಗಿಯೇ ರೈತ ವಿಠ್ಠಲ ಅರಭಾವಿ ಪ್ರಾಣ ಕಳೆದುಕೊಂಡರು. ಆಗ ಬಿ.ಎಸ್.ಯಡಿಯೂರಪ್ಪ ಹೋರಾಟ ಮಾಡಿ ಅಂದಿನ ಮುಖ್ಯಮಂತ್ರಿ ಮೇಲೆ ಒತ್ತಡ ತಂದು ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇಂದು ರೈತರು ಸಂಕಷ್ಟ ಎದುರಿಸುತ್ತಿದ್ದರೂ ಸರ್ಕಾರ ಕಿಂಚಿತ್ತು ಕಾಳಜಿ ತೋರುತ್ತಿಲ್ಲ' ಎಂದು ದೂರಿದರು.
'ಧಾರಾಕಾರ ಮಳೆಯಿಂದ ರೈತರು ತೊಂದರೆಗೀಡಾದಾಗ ಸಹ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು, ಕಂದಾಯ ಸಚಿವರು ಮತ್ತು ಕೃಷಿ ಸಚಿವರು ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡಲಿಲ್ಲ. ಸರ್ಕಾರಕ್ಕೆ ರೈತರ ಪರ ಕಾಳಜಿ ಇಲ್ಲ. ಹಾಗಾಗಿ ಇಂದು ಕಬ್ಬಿನ ದರಕ್ಕಾಗಿ ರೈತರು ಮತ್ತೆ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ' ಎಂದು ಆರೋಪಿಸಿದರು.
'ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ವಾರ್ಷಿಕ 6 ಮಿಲಿಯನ್ ಟನ್ ಕಬ್ಬು ನುರಿಸುತ್ತವೆ. ಇದರಿಂದ ರಾಜ್ಯ ಸರ್ಕಾರಕ್ಕೆ ₹55 ಸಾವಿರ ಕೋಟಿ ತೆರಿಗೆ ಬರುತ್ತದೆ. ಆದರೆ, ಆದರೆ ಸರ್ಕಾರ ಕಬ್ಬು ಬೆಳೆಗಾರರ ನೆರವಿಗೆ ನಿಲ್ಲದ್ದರಿಂದ ಯಡಿಯೂರಪ್ಪ ಮಗನಾಗಿ ಮತ್ತು ರೈತ ನಾಯಕನಾಗಿ ಇಲ್ಲಿಗೆ ಬಂದಿದ್ದೇನೆ' ಎಂದರು.
'ರಾಜ್ಯದಲ್ಲಿ ಯಾರ ಸಕ್ಕರೆ ಕಾರ್ಖಾನೆಗಳಿವೆ ಎಂಬುದು ನಿಮಗೆ ಗೊತ್ತಿದೆ. ಸಕ್ಕರೆ ಕಾರ್ಖಾನೆಗಳ ಸಾಹುಕಾರಗಳ ಜೊತೆಗೆ ಸರ್ಕಾರ ಮಾತನಾಡಬೇಕು. ಅಧಿಕಾರಿಗಳು ಸಹ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು' ಎಂದು ಹೇಳಿದರು.
'ಬೆಳಗಾವಿಯಲ್ಲಿ ಡಿಸೆಂಬರ್ ನಲ್ಲಿ ನಡೆಯುವ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಹೊಸ ಸಿ.ಎಂ ಬರುತ್ತಾರೆ' ಎಂಬ ರಾಮುಲು ಹೇಳಿಕೆಗೆ, 'ರಾಮುಲು ಹೇಳಿದ್ದನ್ನು ಪಕ್ಕಕ್ಕೆ ಇಡಿ. ಸ್ವತಃ ಆಡಳಿತ ಪಕ್ಷದ ಸಚಿವರು, ಶಾಸಕರೇ ಇದನ್ನು ಹೇಳುತ್ತಿದ್ದಾರೆ. ಸರ್ಕಾರದಲ್ಲಿ ಮುಖ್ಯಮಂತ್ರಿ ಕುರ್ಚಿಗೆ ಯಾವ ರೀತಿ ಯುದ್ದ ಆರಂಭವಾಗಿದೆ ಎಂಬುದು ಬಿಹಾರ ಚುನಾವಣೆ ಫಲಿತಾಂಶದ ನಂತರ ಎಲ್ಲರಿಗೂ ಗೊತ್ತಾಗುತ್ತದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.