ಬೆಳಗಾವಿ: ಸಾಂಬ್ರಾ ವಿಮಾನನಿಲ್ದಾಣ ನಿರ್ಮಾಣದ ವೇಳೆ ಭೂಮಿ ಕಳೆದುಕೊಂಡ ರೈತರು ತಮಗೆ ಸರ್ಕಾರದಿಂದ ಪರಿಹಾರ ದೊರೆಯದಿರುವ ಕಾರಣದಿಂದ ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲು ಮುಂದಾದ ಘಟನೆ ಶುಕ್ರವಾರ ನಡೆಯಿತು.
‘ವಿಮಾನನಿಲ್ದಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 68 ರೈತರ 38 ಎಕರೆ 34ಗುಂಟೆ ಜಮೀನು ಸ್ವಾಧೀನಪಡಿಸಿಕೊಂಡಿವೆ. ಆದರೆ ಇದುವರೆಗೂ ಹಣ ನೀಡಿಲ್ಲ. ₹ 4.60 ಕೋಟಿ ಬರಬೇಕಾಗಿದೆ. ಆದ್ದರಿಂದ ನಾವು ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದೆವು. ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಹಣ ನೀಡುವಂತೆ ಆದೇಶಿಸಿದೆ. ಹಣ ಕೊಡದಿದ್ದರೆ ಎಸಿ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಜಪ್ತಿ ಮಾಡಿಕೊಳ್ಳುವಂತೆ ತಿಳಿಸಿತ್ತು. ಹೀಗಾಗಿ, ವಕೀಲರೊಂದಿಗೆ ಬಂದಿದ್ದೇವೆ’ ಎಂದು ರೈತರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ರೈತರ ಪರ ವಕೀಲ ಅಪ್ಪಾಸಾಹೇಬ ಕದರಜೋಷಿ ಇದ್ದರು.
ಈ ನಡುವೆ, ಉಪವಿಭಾಗಾಧಿಕಾರಿ ಅಶೋಕ ತೇಲಿ ಅವರು 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಬಳಿ ತೆರಳಿ ಕಾಲಾವಕಾಶ ಪಡೆದರು. ಸೆ. 24ರೊಳಗೆ ಹಣ ತುಂಬುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರತಿಕ್ರಿಯೆಗೆ ಉಪವಿಭಾಗಾಧಿಕಾರಿ ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.