ADVERTISEMENT

ಕುಲಗೋಡದಲ್ಲಿ ಬಲಭೀಮ ದೇವರ ಉತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 3:07 IST
Last Updated 18 ಫೆಬ್ರುವರಿ 2024, 3:07 IST
ಕುಲಗೋಡದ ಬಲಭೀಮ ದೇವರ ದೇವಸ್ಥಾನ
ಕುಲಗೋಡದ ಬಲಭೀಮ ದೇವರ ದೇವಸ್ಥಾನ   

ಕೌಜಲಗಿ: ‘ಬರದ ಬವಣೆ’ ಮಧ್ಯೆಯೂ ಸಮೀಪದ ಕುಲಗೋಡದಲ್ಲಿ ಈಗ ಸಂಭ್ರಮ ಮನೆಮಾಡಿದೆ. ಬಲಭೀಮ ದೇವರ ಉತ್ಸವಕ್ಕೆ ಶನಿವಾರ ಚಾಲನೆ ಸಿಕ್ಕಿದ್ದು, ಸರ್ವಧರ್ಮಿಯರು ಭಾಗವಹಿಸಿ ಭಾವೈಕ್ಯತೆ ಮೆರೆಯುತ್ತಿದ್ದಾರೆ.

‘ರಂಗಭೂಮಿ ಪಿತಾಮಹ’ ತಮ್ಮಣ್ಣನ ಆರಾಧ್ಯದೈವ ಬಲಭೀಮ. ಈ ದೇವರ ಉತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದಾರೆ. ಭಾನುವಾರ(ಫೆ.18) ಬೆಳಿಗ್ಗೆ ಬಲಭೀಮ ದೇವರ ಪಲ್ಲಕ್ಕಿ ಉತ್ಸವ, ಶ್ರೀರಾಮ ಮತ್ತು ಬಲಭೀಮನ ಮಹಾರಥೋತ್ಸವ ಜರುಗಲಿದೆ.

ಪಲ್ಲಕ್ಕಿಯಲ್ಲಿ ಬಲಭೀಮ ದೇವರ ಉತ್ಸವ ಮೂರ್ತಿ ಇರಿಸಿ, ದೇವಾಲಯದ ಸುತ್ತಲೂ ಐದು ಸುತ್ತು ಪ್ರದಕ್ಷಿಣೆ ಹಾಕಲಾಗುವುದು. ಆಗ ಭಕ್ತರು ಪಲ್ಲಕ್ಕಿಗೆ ಉತ್ತತ್ತಿ, ಹಣ್ಣು, ಮಿಠಾಯಿ ಎಸೆದು ತಮ್ಮ ಭಕ್ತಿ ಸಮರ್ಪಿಸುತ್ತಾರೆ. ನಂತರ ಮಹಾಮಂಗಳಾರತಿ ಕಾರ್ಯಕ್ರಮ ‌ನೆರವೇರಲಿದೆ. ಭಕ್ತರಿಗೆ ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಬಲಭೀಮ ದೇವರ ಮರುಕಾರ್ತಿಕೋತ್ಸವ ಫೆ.24 ರಂದು ನಡೆಯಲಿದ್ದು, ಆ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಲಿದ್ದಾರೆ.

ಬಲಭೀಮ ಯಾರು?

‘ಕೌಜಲಗಿ ಸಮೀಪದ ಕುಲಗೋಡದ ಈಶಾನ್ಯ ದಿಕ್ಕಿನಲ್ಲಿ ಬಂಡೆಗಲ್ಲುಗಳಿರುವ ಸಾಲಿನ ಕಾಡಿನ ಹುತ್ತದಲ್ಲಿ ಆದಿದೇವರು ಬಲಭೀಮನ ಮೂರ್ತಿ ಉದ್ಭವವಾಗಿದೆ’ ಎಂದು ಇತಿಹಾಸ ಹೇಳುತ್ತದೆ.

‘ಕೌಜಲಗಿಯ ತಿಮ್ಮಪ್ಪ ದೇಸಾಯಿ ಅವರ ಕನಸಿನಲ್ಲಿ ಕಾಣಿಸಿಕೊಂಡ ಬಲಭೀಮ ದೇವರು, ತಾನಿರುವ ಸ್ಥಳದಿಂದ ಮೂರ್ತಿ ಹೊರತೆಗೆಯುವಂತೆ ಸೂಚಿಸಿತು. ಆಗ ದೇಸಾಯಿ ಅವರು ಕಾರ್ಯೋನ್ಮುಖರಾಗಿ, ನಿರ್ದಿಷ್ಟ ಸ್ಥಳ ಅಗೆಸಿದರು. ಅಲ್ಲಿ ಸಿಕ್ಕ ಸುಂದರವಾದ ಮೂರ್ತಿಯನ್ನು ಅಂದಿನ ದೇಸಗತಿಯ  ಆಡಳಿತ ಕೇಂದ್ರವಾದ ಕೌಜಲಗಿಯಲ್ಲಿ ಪ್ರತಿಷ್ಠಾಪಿಸಲು ಎತ್ತಿ‌ನಬಂಡಿಯಲ್ಲಿ ತೆಗೆದುಕೊಂಡು ಹೊರಟರು. ಆದರೆ, ಕುಲಗೋಡಕ್ಕೆ ಬಂದಾಗ ಚಕ್ಕಡಿ ಮುಂದೆ ಸಾಗಲಿಲ್ಲ. ಹಾಗಾಗಿ ಗ್ರಾ‌ಮದ ಉತ್ತರ ಅಗಸಿ ಬಾಗಿಲಿನ ಎದುರು ಇರುವ ಜೈನ ಬಸದಿ ಜೀರ್ಣೋದ್ಧಾರಗೊಳಿಸಿ, ಅಲ್ಲಿಯೇ ಆರೂವರೆ ಅಡಿ ಎತ್ತರದ ಕಡುಗೆಂಪು ಬಣ್ಣದ ಬಲಭೀಮನ ಮೂರ್ತಿ ಪ್ರತಿಷ್ಠಾಪಿಸಲಾಯಿತು’ ಎಂದು ಗ್ರಾಮಸ್ಥರು ತಿಳಿಸುತ್ತಾರೆ.

ಬಲಭೀಮ ನಂಬಿದ ಭಕ್ತರನ್ನು ಎಂದಿಗೂ ಕೈಬಿಡಲಾರ ಎಂಬ ನಂಬಿಕೆಯಿದೆ. ಹಾಗಾಗಿ ಭಕ್ತರು ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ.
ಹನುಮಂತ ಪೂಜೇರಿ, ಅರ್ಚಕ
ಪ್ರತಿವರ್ಷ ಬಲಭೀಮ ದೇವರ ಉತ್ಸವ ಅದ್ದೂರಿಯಾಗಿ ಜರುಗುತ್ತದೆ. ದೂರದ ಊರುಗಳ ಭಕ್ತರು ಭಾಗವಹಿಸುತ್ತಾರೆ. ಈ ಸಲವೂ ಸಂಭ್ರಮದಿಂದ ಆಚರಿಸುತ್ತಿದ್ದೇವೆ.
ಸುನೀಲ ನಿರ್ವಾಣಿ, ಗ್ರಾಮಸ್ಥ
ಬಲಭೀಮನ ಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.