ADVERTISEMENT

ಬೆಳಗಾವಿ: ಗಣೇಶೋತ್ಸವಕ್ಕೆ ಸಾರ್ವಜನಿಕ ಸ್ಥಳದಲ್ಲಿ ಅವಕಾಶವಿಲ್ಲ

ಸರಳವಾಗಿ ಆಚರಿಸಲು ಆದೇಶ; ಮಾರ್ಗಸೂಚಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 6:44 IST
Last Updated 31 ಜುಲೈ 2021, 6:44 IST
ಎಂ.ಜಿ. ಹಿರೇಮಠ
ಎಂ.ಜಿ. ಹಿರೇಮಠ   

ಬೆಳಗಾವಿ: ‘ಈ ಬಾರಿ ಗಣೇಶೋತ್ಸವ (ಸೆ.10) ಅಂಗವಾಗಿ ಮೂರ್ತಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲು ಅವಕಾಶವಿಲ್ಲ’ ಎಂದು ಜಿಲ್ಲಾಡಳಿತ ತಿಳಿಸಿದೆ.

‘ಕೋವಿಡ್ ನಿಯಂತ್ರಿಸುವ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಈ ಆದೇಶ ಮಾಡಲಾಗಿದೆ. ದೇವಸ್ಥಾನಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಿ, ಸರಳವಾಗಿ ಹಬ್ಬ ಆಚರಿಸಬೇಕು. ಮಹಾಮಂಡಳಗಳು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶದಲ್ಲಿ ತಿಳಿಸಿದ್ದಾರೆ.

‘ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್–19 ಹಾಗೂ ಡೆಲ್ಟಾಪ್ಲಸ್ ವೈರಸ್‌ ವ್ಯಾಪಕವಾಗಿ ಹರಡುತ್ತಿದೆ. ಬೆಳಗಾವಿ ನಗರದಲ್ಲಿ ಹಾಗೂ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಚಿಕ್ಕೋಡಿ ಭಾಗದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ, ಗಣೇಶೋತ್ಸವವನ್ನು ಸರಳವಾಗಿ ಆಚರಿಸಬೇಕು. ಗಣೇಶ ಮೂರ್ತಿಗಳನ್ನು ಮನೆಗಳಲ್ಲಿ ಮತ್ತು ಸಮೀಪದ ದೇಗುಲಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಬೇಕು’ ಎಂದು ಸೂಚಿಸಿದ್ದಾರೆ.

ADVERTISEMENT

‘ಗಣೇಶ ಮಂಡಳಗಳು ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದ ಇಲಾಖೆ ಮತ್ತು ಪ್ರಾಧಿಕಾರಗಳಿಂದ ಅನುಮತಿ ಪಡೆಯಬೇಕು. ಪಟಾಕಿಗಳನ್ನು ಸಿಡಿಸುವಂತಿಲ್ಲ. ಬಣ್ಣ ಎರಚಾಡುವಂತಿಲ್ಲ. ಲೌಡ್ ಸ್ಪೀಕರ್‌ ಬಳಸುವಂತಿಲ್ಲ. ಸರಳವಾಗಿ ಆಚರಿಸಬೇಕು. ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ 2 ಅಡಿ (ಪೀಠಸಹಿತ) ಹಾಗೂ ದೇವಸ್ಥಾನಗಳಲ್ಲಿ 4 ಅಡಿ (ಪೀಠಸಹಿತ) ಮೀರುವಂತಿಲ್ಲ. ಪಿಒಪಿ ಬಳಸದೆ ಮಣ್ಣಿನ ತಯಾರಿಸಿದ ಮೂರ್ತಿಗಳನ್ನಷ್ಟೇ ಕಡ್ಡಾಯವಾಗಿ ಪ್ರತಿಷ್ಠಾಪಿಸಬೇಕು’.

‘ದೇಗುಲಗಳಲ್ಲಿ ಕೊರೊನಾ ಸೋಂಕಿನ ಜಾಗೃತಿ ಮೂಡಿಸಬೇಕು. ಆರತಿ ಕಾರ್ಯಕ್ರಮದ ಸಮಯದಲ್ಲಿ ಗರಿಷ್ಠ ಐವರಿಗಷ್ಟೇ ಅವಕಾಶ ಇರುತ್ತದೆ. ಗಣೇಶ ಮೂರ್ತಿಗಳ ದರ್ಶನ ಸೌಲಭ್ಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಥವಾ ಆನ್‌ಲೈನ್‌ನಲ್ಲೇ ಕಲ್ಪಿಸಬೇಕು. ದೇವಸ್ಥಾನಗಳಲ್ಲಿ ನಿತ್ಯ ಸ್ಯಾನಿಟೈಸ್ ಮಾಡಬೇಕು. ಭಕ್ತರಿಗೆ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಬೇಕು. ಅಂತರ ಕಾಯ್ದುಕೊಳ್ಳಬೇಕು. ಮೂರ್ತಿ ತರುವಾಗ ಅಥವಾ ವಿಸರ್ಜನೆ ಕಾಲಕ್ಕೆ ಮೆರವಣಿಗೆ ನಡೆಸುವಂತಿಲ್ಲ. ಮೂರ್ತಿಗಳ ವಿಸರ್ಜನೆಯನ್ನು ಏಕಕಾಲಕ್ಕೆ ಮಾಡಬಾರದು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವ್ಯವಸ್ಥೆ ಮಾಡಲಾಗುವ ಸಂಚಾರಿ ಟ್ಯಾಂಕ್‌ಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಬೇಕು’ ಎಂದು ಸೂಚಿಸಲಾಗಿದೆ.

‘ಮಾರ್ಗಸೂಚಿಗಳು ಪಾಲನೆ ಆಗುವಂತೆ ಪೊಲೀಸ್ ಇಲಾಖೆ ಹಾಗೂ ಸಂಬಂಧಿಸಿದ ಪ್ರಾಧಿಕಾರದವರು ಕ್ರಮ ವಹಿಸಬೇಕು. ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ, ಹೋದ ವರ್ಷವೂ ಗಣೇಶೋತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು.

ಪಾಲಿಸಬೇಕು

ಗಣೇಶೋತ್ಸವ ಆಚರಣೆ ಕಾಲಕ್ಕೆ ಸಂದರ್ಭಕ್ಕೆ ಅನುಸಾರವಾಗಿ ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆ ಹೊರಡಿಸುವ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

–ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.