
ರಾಮದುರ್ಗ: ಪೌರಾಣಿಕ ಹಿನ್ನೆಲೆ ಹೊಂದಿದ ತಾಲ್ಲೂಕಿನ ಗೊಡಚಿ ವೀರಭದ್ರೇಶ್ವರ ರಥೋತ್ಸವ ಗುರುವಾರ, ಅಪಾರ ಭಕ್ತ ಸಮೂಹದ ಮಧ್ಯೆ ವೈಭವದಿಂದ ನೆರವೇರಿತು.
ಜಿಲ್ಲೆ, ನೆರೆ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳಿಂದಲೂ ಭಕ್ತರ ಪ್ರವಾಹ ಹರಿದುಬಂತು. ರಥದಲ್ಲಿ ಅರ್ಚಕರು ಬೆಳ್ಳಿಯ ವೀರಭದ್ರೇಶ್ವರನ ಮೂರ್ತಿ ಪ್ರತಿಷ್ಠಾಪಿಸಿದರು. ಪುರವಂತರ ವೀರಗಾಸೆಯೊಂದಿಗೆ ಪೂಜೆ ಆರಂಭಗೊಂಡು ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
‘ಹರಹರ ಮಹಾದೇವ’ ಎಂಬ ಉದ್ಘೋಷ ಎಲ್ಲೆಲ್ಲೂ ಅನುರಣಿಸಿತು. ರಥವನ್ನು ದೇವಸ್ಥಾನದ ಮುಂದಿನ ಭಾಗದಿಂದ ಗೊಡಚಿ ಗ್ರಾಮದ ಸಮೀಪ ಇರುವ ಪಾದಗಟ್ಟೆ ತನಕ ಭಕ್ತರು ತಂದು ನಿಲ್ಲಿಸಿದರು. ಅಲ್ಲಿಂದ ಮರಳಿದ ರಥವು ದೇವಸ್ಥಾನ ತಲುಪುವ ವೇಳೆ ಗ್ರಾಮದಲ್ಲಿ ಸಂಜೆಯ ಬೀದಿ ದೀಪಗಳು ಬೆಳಗಿದವು. ಚಲಿಸುತ್ತಿದ್ದ ರಥಕ್ಕೆ ಭಕ್ತರು ಉತ್ತತ್ತಿ, ಬಾಳೆಹಣ್ಣು ಮತ್ತು ಬೆಂಡುಬೆತ್ತಾಸು ಎರಚಿ ಹರಕೆ ತೀರಿಸಿದರು.
ಕಾಲು ನಡಿಗೆಯ ಜಾತ್ರೆ: ಗೊಡಚಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ದೂರದ ಊರುಗಳಿಂದ ಸಾಕಷ್ಟು ಜನ ವಾಹನ ಚಕ್ಕಡಿ ಬಂಡಿಗಳಲ್ಲಿ ಬಂದು ಸೇರುತ್ತಾರೆ. ದೇವರಿಗೆ ಹರಕೆ ತೀರಿಸುವ ಜನ ಮಾತ್ರ ದೂರದ ಊರುಗಳಿಂದಲೂ ನಡೆದುಕೊಂಡೆ ಬರುವುದು ಇಲ್ಲಿ ಸಂಪ್ರದಾಯವಾಗಿದೆ.
ಕಾಲು ನಡಿಗೆಯಲ್ಲಿ ಆಗಮಿಸುವ ಭಕ್ತರ ಧಣಿವು ಆರಿಸಿಕೊಳ್ಳಲು ಕೆಲ ಸಂಘ ಸಂಸ್ಥೆಗಳು ಮತ್ತು ಭಕ್ತರು ಕಾಲು ನಡಿಗೆಯ ಭಕ್ತರಿಗೆ ದಾರಿಯುದ್ದಕ್ಕೂ ಅಲ್ಪೋಪಹಾರದ ವ್ಯವಸ್ಥೆ ಮಾಡಿರುವುದು ಎಲ್ಲರಿಗೂ ಮೆಚ್ಚುಗೆಯಾಯಿತು.
ಲಕ್ಷಾಂತರ ಭಕ್ತರ ಭಕ್ತಿ ಭಾವದ ಮಧ್ಯದಲ್ಲಿ ಗುರುವಾರ ಸಂಜೆ ವೇಳೆಗೆ ವೀರಭದ್ರೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ನೀರೂರುಸಿದ ಬಳವೊಲು ಹಣ್ಣು
ಗೊಡಚಿ ವೀರಭದ್ರೇಶ್ವರ ಜಾತ್ರೆಯಲ್ಲಿ ಬಳವೊಲು ಹಣ್ಣು ಹೆಚ್ಚು ಪ್ರಸಿದ್ಧ. ಈ ಜಾತ್ರೆಯಲ್ಲಿ ಮಾತ್ರ ಈ ಹಣ್ಣು ಸಿಗುವ ಕಾರಣ ‘ಬಳವೂಲು ಜಾತ್ರೆ’ ಎಂದೂ ಪ್ರಸಿದ್ಧವಾಗಿದೆ. ಸುಮಾರು 20 ಟ್ರಕ್‌ಗಳಲ್ಲಿ ಆಮದು ಮಾಡಿಕೊಂಡ ಬಳವೊಲು ಹಣ್ಣಿನ ವ್ಯಾಪಾರವು ಅತೀ ಅಗ್ಗದ ದರದಲ್ಲಿ ಸಿಗುತ್ತವೆ. ಭಕ್ತರ ಬಾಯಲ್ಲಿ ನೀರೂರಿಸಿ ಬಿಕರಿಯಾಗುತ್ತಿವೆ. ‘ಕಚ್ಚಾ ಕಾಯಿಗಳನ್ನು ಭqfqi ಇಳಿಸುವ ಮತ್ತು ಸಾಗಾಟ ಮಾಡುವ ವೆಚ್ಚವು ಲಾಭದಲ್ಲಿ ಸಮ ಹೊಂದುತ್ತದೆ. ಹೆಚ್ಚಿನ ಲಾಭವಿಲ್ಲ. ಪಾಡಿಗೆ ಬಿದ್ದಿರುವ ಬಳವೊಲು ಹಣ್ಣನ್ನು ಹಾವೇರಿ ಮತ್ತು ಶಿಗ್ಗಾವಿಯಿಂದ ತಂದು ಮಾರಬೇಕಾಗುತ್ತದೆ’ ಎಂಬುದು ವ್ಯಾಪಾರಿ ದುರ್ಗಪ್ಪ ಇಟಗಿ ಅಭಿಮತ. ಬಳೆಪೇಟೆ ಆಟಿಕೆ ಬಾಳೆಹಣ್ಣು ಬೋರೆಹಣ್ಣು ಬಳವೊಲು ಹಣ್ಣಿನ ಮಾರಾಟಕ್ಕಾಗಿ ಪ್ರತ್ಯೇಕ ಸ್ಥಾನಗಳನ್ನು ನಿಗದಿಪಡಿಸಿದ್ದು ಹೆಚ್ಚು ಅನುಕೂಲಕರಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.