ADVERTISEMENT

ಬೆಳಗಾವಿ: ‘ಗೋಕಾಕ ಬಂದ್ ಅ.5ರಂದು’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 13:47 IST
Last Updated 26 ಸೆಪ್ಟೆಂಬರ್ 2020, 13:47 IST

ಗೋಕಾಕ: ‘ಇಲ್ಲಿನ ರಾಜಸ್ಥಾನದ ವರ್ತಕರಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಅ. 5ರಂದು ಗೋಕಾಕ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು’ ಎಂದು ದಸಂಸ ಮುಖಂಡ ರಮೇಶ ಮಾದರ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಸ್ಥಾನ ಸೇರಿದಂತೆ ಇತರ ರಾಜ್ಯಗಳಿಂದ ಬಂದು ನೆಲೆಸಿರುವ ವರ್ತಕರು ಇಡೀ ತಾಲ್ಲೂಕಿನ ವ್ಯಾಪಾರಿ ಬಾಂಧವ್ಯವನ್ನೇ ಹದಗೆಡಿಸಿದ್ದಾರೆ. ಯುವಕರಿಗೆ ಹಣ ಮತ್ತಿತರ ಆಮಿಷವೊಡ್ಡಿ ಅವರನ್ನು ಅಪರಾಧ ಚಟುವಟಿಕೆಗಳಿಗೆ ಪ್ರಚೋದಿಸಿ ಕೋಮು ಗಲಭೆ ಹೆಚ್ಚಲು ಬೆಂಬಲಿಸುತ್ತಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

‘ಗ್ರಾಹಕರಿಗೆ ರಸೀದಿ ನೀಡದೆ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದಾರೆ. ಪರವಾನಗಿ ಇಲ್ಲದೆ ಮೀಟರ್ ಬಡ್ಡಿ ವ್ಯವಹಾರದಲ್ಲೂ ತೊಡಗಿದ್ದಾರೆ. ಈ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವಂತೆ ಅಧಿಕಾರಿಗಳ ಗಮನಸೆಳೆಯಲು ಬಂದ್ ಮಾಡಲಾಗುತ್ತಿದೆ. ವಿವಿಧ ಸಂಘಟನೆಗಳು ಬೆಂಬಲ ನೀಡಿವೆ’ ಎಂದರು.

ದಸಂಸ ರಾಜ್ಯ ಸಂಚಾಲಕ ಸತ್ಯಜಿತ ಕರವಾಡೆ, ‘ಗೋಕಾಕ-ಮೂಡಲಗಿ-ಘಟಪ್ರಭಾ ವ್ಯಾಪಾರಿಗಳನ್ನು ರಕ್ಷಿಸಿ’ ಎಂಬ ಘೋಷಣೆಯೊಂದಿಗೆ ಈ ಹೋರಾಟ ಪ್ರಾರಂಭಿಸಲಾಗುತ್ತಿದೆ’ ಎಂದು ತಿಳಿಸಿದರು.

ರೈತ ಸಂಘದ ಮುಖಂಡ ಗಣಪತಿ ಈಳಿಗೇರ, ಈರಯ್ಯ ಪೂಜೇರಿ, ಬಸವರಾಜ ಕಾಡಾಪೂರ, ಅರ್ಜುನ ಗಂಡವ್ವಗೋಳ, ಮಹಾದೇವ ಗುಡೇರ, ಅನಿಲ ಚಂದಾವರೆ, ಗಜಬರ ನದಾಫ, ಅಲ್ಲಾಭಕ್ಷ ಮುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.