ADVERTISEMENT

ಗೋಕಾಕ ಚಳವಳಿ: ಮೊಣಕಾಲು ಸವೆಸಿದವರ ಮರೆತ ಸರ್ಕಾರ

ಸಂತೋಷ ಈ.ಚಿನಗುಡಿ
Published 1 ನವೆಂಬರ್ 2025, 2:34 IST
Last Updated 1 ನವೆಂಬರ್ 2025, 2:34 IST
1981ರಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ನಡೆದ ಗೋಕಾಕ ಚಳವಳಿಯಲ್ಲಿ ಮೊಣಕಾಲುಗಳ ಮೇಲೆ ನಡೆದ ಹೋರಾಟಗಾರರು. ಮಲ್ಲಪ್ಪ ಶಿಂಗಾರಿ, ಬಸವರಾಜ ಢವಳಿ, ಶ್ರೀಕಾಂತ ಕೊಳದೂರ, ಶಂಕರ ಹುಲಮನಿ, ಗೋವಿಂದ ಟೊಪಗಿ, ಮಲ್ಲಣ್ಣ ಢವಳಿ (ಎಡದಿಂದ)
1981ರಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ನಡೆದ ಗೋಕಾಕ ಚಳವಳಿಯಲ್ಲಿ ಮೊಣಕಾಲುಗಳ ಮೇಲೆ ನಡೆದ ಹೋರಾಟಗಾರರು. ಮಲ್ಲಪ್ಪ ಶಿಂಗಾರಿ, ಬಸವರಾಜ ಢವಳಿ, ಶ್ರೀಕಾಂತ ಕೊಳದೂರ, ಶಂಕರ ಹುಲಮನಿ, ಗೋವಿಂದ ಟೊಪಗಿ, ಮಲ್ಲಣ್ಣ ಢವಳಿ (ಎಡದಿಂದ)   

ಬೆಳಗಾವಿ: 1981ರಲ್ಲಿ ಗೋಕಾಕ ವರದಿ ಜಾರಿಗಾಗಿ ಆಂದೋಲನ ಜೋರಾಗಿದ್ದ ಸಂದರ್ಭದಲ್ಲಿ ಬೆಳಗಾವಿಯ ಆರು ಯುವಕರು ಮೊಣಕಾಲುಗಳ ಮೇಲೆ 2 ಕಿ.ಮೀ ದೂರ ನಡೆದು ವಿನೂತನ ಹೋರಾಟ ಮಾಡಿದರು. ಇದು ಚಳವಳಿಗೆ ಹೊಸ ದಿಕ್ಕು ನೀಡಿತ್ತು. ಆರು ಹೋರಾಟಗಾರರಲ್ಲಿ ನಾಲ್ವರು ಬೆಳಗಾವಿಯಲ್ಲಿದ್ದಾರೆ. ಗೌರವಧನ ಅಥವಾ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗಾಗಿ ದಶಕಗಳಿಂದ ಅವರು ಮೊರೆಯಿಟ್ಟರೂ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ.

ಹೋರಾಟಗಾರರಾದ ಬಸವರಾಜ ನಾ. ಢವಳಿ, ಮಲ್ಲಣ್ಣ ಮಾ. ಢವಳಿ, ಶಂಕರ ಬ. ಹುಲಮನಿ, ಗೋವಿಂದ ನಾ. ಟೊಪಗಿ, ಶ್ರೀಕಾಂತ ಕೊಳದೂರ ಹಾಗೂ ಮಲ್ಲಪ್ಪ ಶಿಂಗಾರಿ ಮೊಣಕಾಲು ಮೇಲೆ ನಡೆದಿದ್ದರು. ಅವರಲ್ಲಿ ಮಲ್ಲಪ್ಪ ನಿಧನರಾಗಿದ್ದು, ಶ್ರೀಕಾಂತ ಅವರು ಎಲ್ಲಿದ್ದಾರೆ? ಏನಾದರು ಎಂಬ ಬಗ್ಗೆ ಮಾಹಿತಿ ಇಲ್ಲ.

ಬೆಳಗಾವಿಯಲ್ಲಿ ಅದ್ಧೂರಿಯಾ ರಾಜ್ಯೋತ್ಸವ ಆಚರಿಸಲಾಗುತ್ತದೆ. ಲಕ್ಷಾಂತರ ಸಂಖ್ಯೆಯಲ್ಲಿ ಕನ್ನಡಿಗರು ಸಮಾವೇಶಗೊಳ್ಳುತ್ತಾರೆ. ಈ ವೈಭವಕ್ಕೆ ಕಾರಣರಾದವರು ತೆರೆಮರೆಗೆ ಸರಿದಿದ್ದಾರೆ.

ADVERTISEMENT

‘36 ಗೆಳೆಯರು ಕನ್ನಡ ತರುಣ ಸಂಘ ಕಟ್ಟಿ ಹೋರಾಟ ಶುರು ಮಾಡಿದ್ದೆವು. ಬೊಬ್ಬೆ ಹಾಕುವುದು, ಉರುಳುಸೇವೆ, ಹರತಾಳ್‌ ನಡೆದೇ ಇದ್ದವು. ಸರ್ಕಾರ ಕಣ್ಣು ತೆರೆಯಲಿಲ್ಲ. ಆಗ ಮೊಣಕಾಲುಗಳ ಮೇಲೆ ನಡೆದೆವು. ಸುತ್ತ ಸೇರಿದ ಜನ ಜೈಕಾರ ಹಾಕುತ್ತಲೇ ಇದ್ದರು. ರಕ್ತ ಸುರಿಯುತ್ತಿತ್ತು. ಮಾರನೇ ದಿನ ಚಿತ್ರನಟರಾದ ರಾಜಕುಮಾರ್, ಅನಂತನಾಗ್, ಲೋಕೇಶ್‌, ಅಶೋಕ್‌ ಮುಂತಾದವರು ಬೆಳಗಾವಿಗೆ ಬಂದರು. ರಾಜಕುಮಾರ್ ಖುದ್ದಾಗಿ ನಮ್ಮೆಲ್ಲರನ್ನು ಭೇಟಿಯಾಗಿ ಅಭಿನಂದಿಸಿದರು’ ಎಂದು ಬಸವರಾಜ ಢವಳಿ ನೆನಪಿಸಿಕೊಂಡರು.

‘ಗೋಕಾಕ ಚಳವಳಿಯಲ್ಲಿ ಪಾಲ್ಗೊಂಡವರಿಗೆ ಮಾಸಾಶನ ಕೊಡಬೇಕು ಎಂಬ ಬೇಡಿಕೆಯನ್ನು ಸರ್ಕಾರ ಪರಿಗಣಿಸಿಲ್ಲ. ಆದರೂ ನಾವು ಕನ್ನಡ ಚಳವಳಿ ಬಿಡಲಿಲ್ಲ. ಗಡಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡಾಟಿಕೆ ಹೆಚ್ಚಿತು. ನಾವೂ ದಶಕಗಳ ಕಾಲ ಸೆಡ್ಡು ಹೊಡೆದೆವು. ಆಗಿನ ಜನಾಂದೋಲನ ಈಗ ರಾಜ್ಯೋತ್ಸವ ಸ್ವರೂಪ ಪಡೆದಿದೆ’ ಎಂದರು.

ಏಕೀಕರಣ ಚಳವಳಿ ಬಳಿಕ ಗೋಕಾಕ ಚಳವಳಿಯೇ ಅತಿ ದೊಡ್ಡ ಹೋರಾಟ. ಅದರಲ್ಲಿ ಹೋರಾಡಿದವರಿಗೂ ಗೌರವಧನ ಕೊಡುವುದು ಅಗತ್ಯ
– ಅಶೋಕ ಚಂದರಗಿ, ಸದಸ್ಯ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ
ಮೊಣಕಾಲು ಮೇಲೆ ನಡೆದು ಹೋರಾಡಿದವರ ಮನವಿ ಬಂದಿದೆ. ರಾಜ್ಯೋತ್ಸವದಲ್ಲಿ ಯಾರನ್ನು ಸನ್ಮಾನಿಸಬೇಕು ಎಂದು ಆಯ್ಕೆ ಸಮಿತಿ ಸಭೆಯಲ್ಲಿ ನಿರ್ಧರಲಾಗುವುದು
ವಿದ್ಯಾವತಿ ಭಜಂತ್ರಿ, ಸಹಾಯಕ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ
1981ರಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ನಡೆದ ಗೋಕಾಕ ಚಳವಳಿಯಲ್ಲಿ ಮೊಣಕಾಲುಗಳ ಮೇಲೆ ನಡೆದ ಹೋರಾಟಗಾರರನ್ನು ಭೇಟಿ ಮಾಡಿದ ನಟ ರಾಜಕುಮಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.