
ಗೋಕಾಕ ಜ್ಞಾನ ಮಂದಿರ ಆಧ್ಯಾತ್ಮ ಕೇಂದ್ರದಲ್ಲಿ ಶನಿವಾರ ನಡೆದ ನಾಗರೀಕರ ಸಭೆಯನ್ನು ಉದ್ದೇಶಿಸಿ ಅಶೋಕ ಪೂಜಾರಿ ಮಾತನಾಡಿದರು. ಚಿತ್ರದಲ್ಲಿ ಬಸವರಾಜ ಕಲ್ಯಾಣಶೆಟ್ಟಿ, ಚಂದ್ರಕಾಂತ ಕುರಬೇಟ, ಸೋಮಶೇಖರ ಮಗದುಮ್ ಮತ್ತಿತರರು ಇದ್ದಾರೆ.
ಗೋಕಾಕ: ಗೋಕಾಕ ನಗರದ ಉತ್ತರ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಹರಿಯುತ್ತಿರುವ ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳ ’ಸಂಗಮʼ ಪವಿತ್ರ ಕ್ಷೇತ್ರ ಅಭಿವೃದ್ಧಿಪಡಿಸಲು ಸರ್ಕಾರವನ್ನು ಒತ್ತಾಯಿಸಲಾಯಿತು.
ಶನಿವಾರ ಜ್ಞಾನ ಮಂದಿರ ಆಧ್ಯಾತ್ಮ ಕೇಂದ್ರದಲ್ಲಿ ನಡೆದ ನಾಗರಿಕರ ಸಭೆಯಲ್ಲಿ ಈ ಕುರಿತು ಸವಿಸ್ತಾರ ಚರ್ಚೆ ನಡೆದು ಗ್ಲುಕೋಜ್ ಕಾರ್ಖಾನೆ ಮತ್ತು ಜ್ಞಾನ ಮಂದಿರ ಆಧ್ಯಾತ್ಮ ಕೇಂದ್ರದ ನಡುವೆ ಇರುವ ಸರ್ಕಾರಿ ಮಾರ್ಗವನ್ನು ಅಭಿವೃದ್ಧಿ ಪಡಿಸಿ ಮಾರ್ಕಂಡೇಯ ನದಿಗೆ ಬ್ರಿಡ್ಜ್-ಕಮ್-ಬ್ಯಾರೇಜ್ ನಿರ್ಮಿಸಬೇಕು ಹಾಗೂ ನದಿಗಳ ಸಂಗಮ ಸ್ಥಳದಲ್ಲಿ ಕನಿಷ್ಠ ಅರ್ಧ ಕಿ.ಮೀ. ಉದ್ದ ಘಾಟ್ ನಿರ್ಮಿಸುವ ಮೂಲಕ ಪವಿತ್ರ ನದಿಯಲ್ಲಿ ಸ್ಥಾನ ಮಾಡುವ ಸದ್ಬಕ್ತರಿಗೆ ಅನುಕೂಲ ಮಾಡಕೊಡಬೇಕು ಎಂದು ಸರ್ಕಾರವನ್ನು ವಿನಂತಿಸಲು ಮತ್ತು ಇದಕ್ಕೆ ಪೂರಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರನ್ನು ನಿಯೋಗದ ಮೂಲಕ ವಿನಂತಿಸಲು ತೀರ್ಮಾನಿಸಲಾಯಿತು.
ಪ್ರಸಕ್ತ ಸಾಲಿನ ರಾಜ್ಯ ಸರ್ಕಾರದ ಬಜೆಟ್‌ನಲ್ಲೆ ಪ್ರಾಧಾನ್ಯತೆ ನೀಡಲು ಜಿಲ್ಲಾ ಉಸ್ತುವಾರಿ ಸಚಿವರ ಮುಖಾಂತರ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗೋಕಾಕ ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ, ಕೆಎಲ್ಇ ಸಂಸ್ಥೆ ನಿರ್ದೇಶಕ ಜಯಾನಂದ ಮುನವಳ್ಳಿ, ಹಿರಿಯ ರಾಜಕೀಯ ಮುಖಂಡ ಅಶೋಕ ಪೂಜಾರಿ ಹಾಗೂ ಮುಖಂಡರಾದ ಸೋಮಶೇಖರ ಮಗದುಮ್ಮ ಮೊದಲಾದವರು ಮಾತನಾಡಿ, ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳ ಸಂಗಮ ಸ್ಥಳ ತನ್ನದೇ ಆದ ಧಾರ್ಮಿಕ ಮಹತ್ವ ಹೊಂದಿದ್ದು, ಈ ಸ್ಥಳದಲ್ಲಿರುವ ಕೂಡಲ ಸಂಗಮೇಶ್ವರ ದೇವಸ್ಥಾನವು ಶತಮಾನಗಳ ಇತಿಹಾಸ ಹೊಂದಿದೆ. ತನ್ನದೇ ಆದ ವೈಶಿಷ್ಠ್ಯತೆ ಹೊಂದಿದೆ. ಆದ್ದರಿಂದ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರವಾಸಿ ಕೇಂದ್ರವನ್ನಾಗಿ ಮಾಡುವುದರ ಜೊತೆಗೆ ಗೋಕಾಕದ ಅಭಿವೃದ್ಧಿಗೆ ಪೂರಕವಾದ ಚಿಂತನೆ ಇದರಲ್ಲಿದೆ. ಸರ್ಕಾರ ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸಭೆಯ ಅಧ್ಯಕ್ಷತೆಯನ್ನು ಗೋಕಾಕ ಅರ್ಬನ್ ಬ್ಯಾಂಕ್ ಚೇರಮನ್ ಬಸವರಾಜ ಕಲ್ಯಾಣಶೆಟ್ಟಿ ವಹಿಸಿದ್ದರು.
ಸಭೆಯಲ್ಲಿ ಮಾಯಪ್ಪ ತಹಶೀಲ್ದಾರ್, ರಮೇಶ ಮೂರ್ತೇಲಿ, ಚಂದ್ರಕಾಂತ ಕುರಬೇಟ, ಶಿವಾನಂದ ಹೂಲಿ, ವಿಜಯ ಕ್ಯಾಸ್ತಿ, ಬಸವರಾಜ ದೇಶನೂರ, ಅಭಯ ದೀಕ್ಷಿತ, ಸಂಜೀವ ಪೂಜಾರಿ, ಮಲ್ಲಿಕಾರ್ಜುನ ನಂದಗಾಂವಿ, ಬಾಳು ಅಂಬಿ, ತುಕ್ಕಪ್ಪ ಮುತ್ನಾಳ, ರಾಜು ಮಠದ, ಸೋಮಯ್ಯ ಹಿರೇಮಠ, ರಾಜು ಮಾಡಲಗಿ, ಶ್ರೀಶೈಲ ಪೂಜಾರಿ, ಮಹೇಶ ಮಠಪತಿ, ವಿನಾಯಕ ಹೊಸಮನಿ, ಅನೀಲ ಹಾಲಭಾಂವಿ, ಚಂದ್ರಪ್ಪ ಮಡಿವಾಳರ, ಅನೀಲ ಸಂಕಾಜಿ, ನಾಗು ದೇಸಾಯಿ, ಮಂಜು ಪೂಜೇರಿ ಸೇರಿದಂತೆ ಅನೇಕ ಪ್ರಮುಖರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.