ಪ್ರಾತಿನಿಧಿಕ ಚಿತ್ರ
ಗೋಕಾಕ: ತಾಲ್ಲೂಕಿನ ಮಮದಾಪುರ ಗ್ರಾಮದಲ್ಲಿ ದೇವಸ್ಥಾನದ ಕಟ್ಟೆ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬರನ್ನು ಮಂಗಳವಾರ, ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಲಾಗಿದೆ.
ಮಡ್ಡೆಪ್ಪ ಯಲ್ಲಪ್ಪ ಬಾನಸಿ (47) ಕೊಲೆಯಾದವರು. ಭೀರಪ್ಪ ಸಿದ್ದಪ್ಪ ಸುಣಧೋಳಿ ಎಂಬ ವೃದ್ಧ ಕೊಲೆ ಆರೋಪಿ. ಜಮೀನು ವಿವಾದ ಕೊಲೆಗೆ ಕಾರಣವಾಗಿರಬಹುದು ಎಂದು ಮೂಲಗಳು ತಿಳಿಸಿವೆ. ಕೊಲೆಯ ಘಟನಾವಳಿ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಜಮೀನು ಕೂಡುಸಾಲು ಗುರುತಿಸಲು ಭೀರಪ್ಪ ಕಲ್ಲು ಇರಿಸಿದ್ದರು. ಅದನ್ನು ಮಡ್ಡೆಪ್ಪ ತೆರವುಗೊಳಿಸಿದ್ದರು. ಇದೇ ವಿಚಾರ ಇಬ್ಬರ ನಡುವಿನ ಜಗಳಕ್ಕೆ ಕಾರಣವಾಗಿತ್ತು. ಮಂಗಳವಾರ ಮಡ್ಡೆಪ್ಪ ಅವರು ಭೀರದೇವ ದೇವಸ್ಥಾನದ ಪ್ರಾಂಗಣದಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ಏಕಾಏಕಿ ದಾಳಿ ಇಟ್ಟ ಆರೋಪಿ, ಕಬ್ಬು ಕಟಾವು ಮಾಡುವ ಕೊಯ್ತಾದಿಂದ ಹಲ್ಲೆ ನಡೆಸಿದ. ಸುತ್ತ ಇದ್ದವರು ಅವರನ್ನು ಕಾಪಾಡಲು ಮುಂದಾಗಲಿಲ್ಲ. ದಾಳಿಯಿಂದ ತಪ್ಪಿಸಿಕೊಳ್ಳಲು ಮಡ್ಡೆಪ್ಪ ದೇವಸ್ಥಾನದ ಸುತ್ತ ಓಡಾಡಿದರು. ಆದರೂ ಆರೋಪಿ ಅವರ ಬೆನ್ನುಬಿಡದೇ ಕೊಚ್ಚಿದ.
ತೀವ್ರ ರಕ್ತಸ್ರಾವದಿಂದ ಬಳಲಿದ ಮಡ್ಡೆಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.