ADVERTISEMENT

‘ಶುಭ ಶುಕ್ರವಾರ’ ಮನೆಯಲ್ಲೇ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 13:37 IST
Last Updated 10 ಏಪ್ರಿಲ್ 2020, 13:37 IST
ಬೆಳಗಾವಿಯಲ್ಲಿ ‘ಶುಭ ಶುಕ್ರವಾರ’ ಅಂಗವಾಗಿ ವ್ಯಕ್ತಿಯೊಬ್ಬರು ಮೆಥೋಡಿಸ್ಟ್‌ ಚರ್ಚ್‌ನ ಹೊರಗಡೆಯೆ ನಿಂತು ನಮನ ಸಲ್ಲಿಸಿದರು– ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯಲ್ಲಿ ‘ಶುಭ ಶುಕ್ರವಾರ’ ಅಂಗವಾಗಿ ವ್ಯಕ್ತಿಯೊಬ್ಬರು ಮೆಥೋಡಿಸ್ಟ್‌ ಚರ್ಚ್‌ನ ಹೊರಗಡೆಯೆ ನಿಂತು ನಮನ ಸಲ್ಲಿಸಿದರು– ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ನಗರದಲ್ಲಿ ಕ್ರೈಸ್ತರು ಶುಭ ಶುಕ್ರವಾರ (ಗುಡ್ ಫ್ರೈಡೆ)ವನ್ನು ಶ್ರದ್ಧಾ ಭಕ್ತಿಯಿಂದ ಮನೆಗಳಲ್ಲೇ ಆಚರಿಸಿದರು.

ಕೋವಿಡ್‌–19 ಸೋಂಕು ಹರಡುವ ಭೀತಿ ಹಾಗೂ ಲಾಕ್‌ಡೌನ್‌ನಿಂದಾಗಿ ಅವರು ಚರ್ಚ್‌ಗಳಿಗೆ ಬಾರದೆ ಕುಟುಂಬದವರೊಂದಿಗೆ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.

ಗುಡ್‌ ಫ್ರೈಡೆ ದಿನದಂದು ಇದೇ ಮೊದಲ ಬಾರಿಗೆ ಕ್ರೈಸ್ತರು ಮನೆಯಲ್ಲೇ ಸಾಮೂಹಿಕ ಪ್ರಾರ್ಥನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಚರ್ಚ್‌ಗಳಲ್ಲಿನ ಎಲ್ಲ ಸೇವೆಗಳನ್ನು ರದ್ದುಪಡಿಸಲಾಗಿತ್ತು. ಹೀಗಾಗಿ, ಮನೆಗಳಲ್ಲೇ ವ್ರತ ಆಚರಿಸಿದ ಅವರು, ಕೋವಿಡ್–19ಗೆ ಬಲಿಯಾದವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಿದರು.

ADVERTISEMENT

ಕೊರೊನಾ ವಿರುದ್ಧ ಹೋರಾಡುತ್ತಿರುವ ಸರ್ಕಾರಿ ಅಧಿಕಾರಿಗಳು, ವೈದ್ಯರು, ನರ್ಸ್‌ಗಳು ಹಾಗೂ ಅಗತ್ಯ ಸೇವೆಗಳಲ್ಲಿ ತೊಡಗಿರುವವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭ ಹಾರೈಸಿದರು. ಕೋವಿಡ್‌–19 ತಂದೊಡ್ಡಿರುವ ಸಂಕಷ್ಟಗಳಿಂದ ಜನರನ್ನು ಪಾರು ಮಾಡುವಂತೆಯೂ ಪ್ರಾರ್ಥಿಸಿದರು.

ಬೆಳಗಾವಿ ಧರ್ಮ‍ಪ್ರಾಂತ್ಯದ ಬಿಷಪ್ ಡಾ.ಡೆರಿಕ್‌ ಫರ್ನಾಂಡೀಸ್‌ ಬಿಷಪ್‌ ಹೌಸ್‌ನಿಂದಲೇ ಆನ್‌ಲೈನ್‌ನಲ್ಲಿ ಪ್ರಾರ್ಥನೆ ನೆರವೇರಿಸಿದರು. ಅವರೊಟ್ಟಿಗೆ ಕ್ರೈಸ್ತರು ಮನೆಗಳಿಂದಲೇ ಭಾಗಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.