ADVERTISEMENT

ವೀರಶೈವ ಲಿಂಗಾಯತ ಸಮಾಜಕ್ಕೆ ಮೀಸಲಾತಿ ಕಲ್ಪಿಸಲು ಸರ್ಕಾರ ಬದ್ಧ: ಮುರುಗೇಶ್‌ ನಿರಾಣಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 14:06 IST
Last Updated 14 ಮಾರ್ಚ್ 2021, 14:06 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ಬೆಳಗಾವಿ: ‘ಸಮಸ್ತ ವೀರಶೈವ ಲಿಂಗಾಯತ ಸಮಾಜಕ್ಕೆ ಕಾನೂನು ಚೌಕಟ್ಟಿನಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಲಿಂಗಾಯತ ಪಂಚಮಸಾಲಿ ಸಮುದಾಯ ಯಾವುದೇ ಜಾತಿ ಕಾಲಂನಲ್ಲಿ ಇರಲಿಲ್ಲ. ಈ ವಿಷಯವನ್ನು 2010ರಲ್ಲಿ ನಾನು ಕೈಗಾರಿಕಾ ಸಚಿವನಾಗಿದ್ದಾಗ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದೆ. ಆಗ, ಅವರು ಉಪಸಮಿತಿ ರಚಿಸಿದ್ದರು. ಅದರಲ್ಲಿ ನಾನೂ ಸದಸ್ಯನಿದ್ದೆ. ಯಡಿಯೂರಪ್ಪ ಅವರು ಪ್ರವರ್ಗ 2ಎ ಮೀಸಲಾತಿಗೆ ರೆಫರ್ ಮಾಡಿದ್ದರು. ಅಧಿವೇಶನದಲ್ಲಿ ಪ್ರಶ್ನೆ ಬಂದರೆ ವಿಳಂಬ ಆಗುತ್ತದೆ ಎಂಬ ಕಾರಣಕ್ಕೆ 3ಬಿಗೆ ಸೇರಿಸಿದರು. ಸಮಾಜವನ್ನು ಪ್ರವರ್ಗ 3ಬಿಗೆ ಸೇರ್ಪಡೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದರು.

‘ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಲು ಮುಖ್ಯಮಂತ್ರಿ ಒಲವು ತೋರಿಸಿದ್ದರು. ಆದರೆ, ಸಮಾಜದ ಕೆಲ ಶಾಸಕರು ಅವರ ದಾರಿ ತಪ್ಪಿಸಿದರು’ ಎಂಬ ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ, ‘ಅವರು ದೊಡ್ಡವರು. ಚಿಕ್ಕವನಾದ ನಾನು ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ’ ಎಂದು ತಿಳಿಸಿದರು.

ADVERTISEMENT

‘ಈಗ ಎಲ್ಲ ಸಮಾಜದವರೂ ಮೀಸಲಾತಿ ಅಥವಾ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಕೇಳುತ್ತಿದ್ದಾರೆ. ಇದು ಸರ್ಕಾರದ ಮುಂದಿರುವ ಬಹಳ ದೊಡ್ಡ ಬೇಡಿಕೆ. ಯಾವ ಸಮಾಜದವರು ಮೀಸಲಾತಿಗೆ ಅರ್ಹರಿದ್ದಾರೆ ಎನ್ನುವುದರ ಬಗ್ಗೆ ಹಿಂದುಳಿದ ವರ್ಗಗಳ ಆಯೋಗ ವರದಿ ನೀಡಲಿದೆ. ಸರ್ಕಾರವೂ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿ ರಚಿಸಿದೆ. ಈ ಸಮಿತಿ ವರದಿ ನೀಡಿದ ನಂತರ ಮುಖ್ಯಮಂತ್ರಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ಸಿ.ಡಿ. ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ನಿರಪರಾಧಿಯಾಗಿ ಹೊರಬರುತ್ತಾರೆಂಬ ವಿಶ್ವಾಸವಿದೆ’ ಎಂದರು.

‘ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಯತ್ನ ನಡೆಯುತ್ತಿದೆ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ, ‘ಆ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ನಾಲ್ಕೈದು ದಿನಗಳಿಂದ ಟಿವಿಯನ್ನೂ ನೋಡಿಲ್ಲ. ಯಾರು ತಪ್ಪು‌ ಮಾಡಿದ್ದಾರೆಯೋ ಅವರಿಗೆ ಶಿಕ್ಷೆಯಾಗುತ್ತದೆ. ರಮೇಶ ಜಾರಕಿಹೊಳಿ‌ ತಪ್ಪು ಮಾಡಿಲ್ಲ ಎಂದು ನನಗನಿಸುತ್ತದೆ. ತನಿಖೆ ಬಳಿಕ ಎಲ್ಲವೂ ಸಂಪೂರ್ಣವಾಗಿ ಗೊತ್ತಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.