ADVERTISEMENT

ಫಲಿತಾಂಶ ಪ್ರಕಟಗೊಳ್ಳಲು ಕ್ಷಣಗಣನೆ

ಮತ ಎಣಿಕೆ ನಾಳೆ: ಪ್ರವೇಶಿಸಲು ಕೋವಿಡ್ ಪರೀಕ್ಷೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 8:25 IST
Last Updated 29 ಡಿಸೆಂಬರ್ 2020, 8:25 IST
ಫಲಿತಾಂಶ ಪ್ರಕಟಗೊಳ್ಳಲು ಕ್ಷಣಗಣನೆ
ಫಲಿತಾಂಶ ಪ್ರಕಟಗೊಳ್ಳಲು ಕ್ಷಣಗಣನೆ   

ಬೆಳಗಾವಿ: ಜಿಲ್ಲೆಯಲ್ಲಿ ಎಲ್ಲ 14 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಎರಡು ಹಂತಗಳಲ್ಲಿ ಮುಕ್ತಾಯಗೊಂಡಿರುವ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲು ಕ್ಷಣಗಣನೆ ಆರಂಭವಾಗಿದೆ.

‘ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಬುಧವಾರ (ಡಿ.30) ಬೆಳಿಗ್ಗೆ 8ರಿಂದ ಮತ ಎಣಿಕೆ ನಡೆಯಲಿದ್ದು, ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾಡಳಿತ ತಿಳಿಸಿದೆ.

477 ಗ್ರಾಮ ಪಂಚಾಯಿತಿಗಳಲ್ಲಿ ಕಣದಲ್ಲಿದ್ದ 20,728 ಮಂದಿಯ ರಾಜಕೀಯ ಭವಿಷ್ಯವೇನು ಎನ್ನುವುದು ನಿರ್ಧಾರವಾಗಲಿದೆ. ತಲಾ 7 ತಾಲ್ಲೂಕುಗಳಲ್ಲಿ ಕ್ರಮವಾಗಿ ಒಂದು ಹಾಗೂ 2ನೇ ಹಂತದಲ್ಲಿ ಮತದಾನ ನಡೆದಿತ್ತು. 1ನೇ ಹಂತದಲ್ಲಿ ಶೇ 81.01 ಹಾಗೂ 2ನೇ ಹಂತದಲ್ಲಿ ಶೇ 83.16ರಷ್ಟು ಮತದಾನವಾಗಿತ್ತು. ಚಿಹ್ನೆ ಆಧಾರದ ಮೇಲೆ ಈ ಚುನಾವಣೆ ನಡೆದಿಲ್ಲವಾದರೂ ಪ್ರಮುಖ ರಾಜಕೀಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿತ್ತು. ಘಟಾನುಘಟಿ ನಾಯಕರು ತಮ್ಮ ಬೆಂಬಲಿಗರು ಅಥವಾ ಪಕ್ಷದ ಬೆಂಬಲಿಗರ ಪರವಾಗಿ ಪ್ರಚಾರ ಸಮಾವೇಶ ನಡೆಸಿದ್ದರು. ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಹೀಗಾಗಿ, ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ.

ADVERTISEMENT

ಬೆಳಗಾವಿ ತಾಲ್ಲೂಕಿನ 55 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯ ಬಿ.ಕೆ. ಮಾಡೆಲ್ ಶಾಲೆ ಆವರಣದ ಎನ್.ಎಸ್.ಪೈ. ಸ್ಮರಣಾರ್ಥ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ ಕಟ್ಟಡದಲ್ಲಿ ನಡೆಯಲಿದೆ.

‘ಅಭ್ಯರ್ಥಿ ಪರವಾಗಿ ನೇಮಿಸಿದ ಮತಗಳ ಎಣಿಕೆ ಏಜೆಂಟರು, ಒಂದು ಗಂಟೆ ಮುನ್ನವೇ ನಿಗದಿತ ಸ್ಥಳದಲ್ಲಿ ಹಾಜರಾಗಬೇಕು. ಮಾಸ್ಕ್ ಧರಿಸುವುದು ಕಡ್ಡಾಯ. ಕೇಂದ್ರಕ್ಕೆ ಪ್ರವೇಶ ಬಯಸುವ ಎಲ್ಲರಿಗೂ ಕೋವಿಡ್-19 ಪರೀಕ್ಷೆ ಕಡ್ಡಾಯವಾಗಿದೆ. ಮುಖ್ಯ ದ್ವಾರದಲ್ಲಿ ವೈದ್ಯಾಧಿಕಾರಿಗಳಿಂದ ಪರೀಕ್ಷೆ ನಡೆಸಲಾಗುವುದು. ರೋಗ ಲಕ್ಷಣಗಳು ಕಂಡುಬಂದಲ್ಲಿ ಹೆಚ್ಚಿನ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುವುದು’ ಎಂದುತಹಶೀಲ್ದಾರ್ ಆರ್.ಕೆ. ಕುಲಕರ್ಣಿ ಮಾಹಿತಿ ನೀಡಿದ್ದಾರೆ.

‘ಮತಗಳ ಎಣಿಕೆ ಕಾರ್ಯವನ್ನು ಪಂಚಾಯಿತಿವಾರು 120 ಟೇಬಲ್‌ಗಳಲ್ಲಿ ನಡೆಸಲಾಗುತ್ತಿದೆ. ಒಂದು ಪಂಚಾಯಿತಿ ಎಣಿಕೆ ಮುಗಿದ ನಂತರ ಒಳಗಡೆ ಇರುವ ಎಣಿಕೆ ಏಜೆಂಟರನ್ನು ಹೊರಗಡೆಗೆ ಕಳುಹಿಸಲಾಗುವುದು ಮತ್ತು ಬೇರೆ ಪಂಚಾಯಿತಿಯ ಎಣಿಕೆ ಕಾರ್ಯ ಪ್ರಾರಾರಂಭಿಸಿ, ಅದಕ್ಕೆ ಸಂಬಂಧಪಟ್ಟ ಎಣಿಕೆ ಏಜೆಂಟರ ಪ್ರವೇಶಕ್ಕೆ ಅನುಮತಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ವಾಹನ ನಿಲುಗಡೆಗೆ ಸ್ಥಳ ನಿಗದಿ

* ಅಭ್ಯರ್ಥಿಗಳು ಮತ್ತು ಅವರ ಮತಗಳ ಎಣಿಕೆ ಏಜೆಂಟರ ವಾಹನಗಳನ್ನು ಕ್ಲಬ್ ರೋಡಿನ ಸಿಪಿಇಡಿ ಮೈದಾನದಲ್ಲಿ ನಿಲ್ಲಿಸಬೇಕು.

* ದ್ವಿಚಕ್ರ ವಾಹನವಾಗಿದ್ದಲ್ಲಿ ಕ್ಯಾಂಪ್ ಪ್ರದೇಶದ ಅಸದ್ ಖಾನ್ ದರ್ಗಾ ಮೈದಾನದಲ್ಲಿ ನಿಲ್ಲಿಸಬಹುದು.

* ಚುನಾವಣಾಧಿಕಾರಿ ಮತ್ತು ಪೂರಕ ಸರ್ಕಾರಿ ಸಿಬ್ಬಂದಿ ವಾಹನಗಳನ್ನು ಚಂದನ್‌ ಟಾಕೀಸ್ ಆವರಣ ಅಥವಾ ಪಕ್ಕದ ಬೆಳಗಾವಿ ಗೆಸ್ಟ್ ಹೌಸ್ ಆವರಣದಲ್ಲಿ ನಿಲ್ಲಿಸಬೇಕು.

* ಸುರಕ್ಷತೆ ದೃಷ್ಟಿಯಿಂದಾಗಿ ಅಂಬಾ ಭವನದಿಂದ ಪ್ರವೇಶದ ರಸ್ತೆಯನ್ನು ಮತ್ತು ಪಶ್ಚಿಮದಿಂದ ಗ್ಲೋಬ್ ಟಾಕೀಸ್ ಕಡೆಯಿಂದ ಪ್ರವೇಶದ ರಸ್ತೆಯನ್ನು ಬ್ಯಾರಿಕೇಡಿಂಗ್ ನಿರ್ಬಂಧಿಸಲಾಗಿದೆ. ಪಾಸಿಲ್ಲದವರಿಗೆ ಅವಕಾವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.