ADVERTISEMENT

ಅಕಾಲಿಕ ಮಳೆ: ದ್ರಾಕ್ಷಿ ಬೆಳೆಗಾರರಿಗೆ ಕಹಿ, ₹ 23 ಕೋಟಿ ನಷ್ಟ

ಎಂ.ಮಹೇಶ
Published 22 ಏಪ್ರಿಲ್ 2022, 19:30 IST
Last Updated 22 ಏಪ್ರಿಲ್ 2022, 19:30 IST
ತೆಲಸಂಗದಲ್ಲಿ ಶೆಡ್‌ನಲ್ಲಿ ಒಣಗಲು ಹಾಕಿದ್ದ ದ್ರಾಕ್ಷಿಗೆ ಮಳೆಯಿಂದ ಹಾನಿಯಾಗಿರುವುದು (ಸಂಗ್ರಹ ಚಿತ್ರ)
ತೆಲಸಂಗದಲ್ಲಿ ಶೆಡ್‌ನಲ್ಲಿ ಒಣಗಲು ಹಾಕಿದ್ದ ದ್ರಾಕ್ಷಿಗೆ ಮಳೆಯಿಂದ ಹಾನಿಯಾಗಿರುವುದು (ಸಂಗ್ರಹ ಚಿತ್ರ)   

ಬೆಳಗಾವಿ: ಜಿಲ್ಲೆಯ ಅಥಣಿ ಭಾಗದಲ್ಲಿ ಏಪ್ರಿಲ್‌ ಮೊದಲ ವಾರ ಸುರಿದ ಅಕಾಲಿಕ ಮಳೆಯಿಂದಾಗಿ ಬರೋಬ್ಬರಿ 1,500 ಟನ್‌ಗೂ ಜಾಸ್ತಿ ದ್ರಾಕ್ಷಿ ಹಾಳಾಗಿದ್ದು, ಇದರಿಂದ ₹ 23ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ತೋಟಗಾರಿಕೆ ಇಲಾಖೆ ಅಂದಾಜಿಸಿದೆ.

ಜೋರು ಗಾಳಿ ಹಾಗೂ ಮಳೆಯು 200ಕ್ಕೂ ಹೆಚ್ಚು ಮಂದಿ ದ್ರಾಕ್ಷಿ ಬೆಳೆಗಾರರಿಗೆ ಕಹಿ ಉಣಿಸಿದೆ. ಮತ್ತೊಮ್ಮೆ ಪರಿಹಾರಕ್ಕಾಗಿ ಸರ್ಕಾರದ ಎದುರು ಕೈಒಡ್ಡುವಂತೆ ಮಾಡಿದೆ.

ಅಥಣಿ ತಾಲ್ಲೂಕಿನ ಪೂರ್ವ ಭಾಗದಲ್ಲಿ ದ್ರಾಕ್ಷಿ ಬೆಳೆಗಾರರು ಲಕ್ಷಾಂತರ ರೂಪಾಯಿ ಹಾನಿ ಅನುಭವಿಸಿದ್ದಾರೆ. ಐಗಳಿಯ ಕಲ್ಯಾಣ ನಗರದಲ್ಲಿರುವ ಒಣ ದ್ರಾಕ್ಷಿ ಸಂಸ್ಕರಣಾ ಘಟಕದ ಬಳಿ ಅಡಹಳ್ಳಿ, ಕೋಹಳ್ಳಿ, ಕಕಮರಿ, ಅಡಹಳಟ್ಟಿ, ಸುಟ್ಟಟ್ಟಿ, ಕೊಕಟನೂರ, ಯಲಹಡಗಿ ಮೊದಲಾದ ಗ್ರಾಮಗಳ ಬೆಳೆಗಾರರು ದ್ರಾಕ್ಷಿಯನ್ನು ಒಣಗಲು ಹಾಕಿದ್ದರು (ಒಣ ದ್ರಾಕ್ಷಿಗಾಗಿ). ಏಕಾಏಕಿ ಸುರಿದ ಮಳೆಯಿಂದಾಗಿ ಹಾನಿಯಾಗಿತ್ತು. ಇದಲ್ಲದೆ, ಅಲ್ಲಲ್ಲಿ ಶೆಡ್‌ಗಳ ತಾಡಪಾಲುಗಳು ಹಾರಿ ಹೋಗಿ ದ್ರಾಕ್ಷಿ ನೆನೆದು ಹೋಗಿತ್ತು.

ADVERTISEMENT

ವರದಿ ಸಲ್ಲಿಕೆ:ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿ ಇಲಾಖೆಗೆ ವರದಿ ಸಲ್ಲಿಸಿದ್ದಾರೆ. ಅದನ್ನು ಆಧರಿಸಿ, ಪರಿಹಾರ ಒದಗಿಸುವಂತೆ ಕೋರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಪ್ರಸ್ತಾವ ನೀಡಿದ್ದಾರೆ.

ಜಿಲ್ಲೆಯ ಅಥಣಿ ಹಾಗೂ ಕಾಗವಾಡ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. 5,200 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದೆ. ಅಲ್ಲಿ ಹೋದ ವರ್ಷದ ನವೆಂಬರ್‌ನಲ್ಲಿ ಅಕಾಲಿಕ ಮಳೆಯಿಂದಾಗಿ ಬರೋಬ್ಬರಿ 3,200 ಹೆಕ್ಟೇರ್‌ ಹಾಳಾಗಿತ್ತು. ಅದರಲ್ಲಿ ಅಥಣಿ ತಾಲ್ಲೂಕೊಂದರಲ್ಲೇ 3ಸಾವಿರ ಹೆಕ್ಟೇರ್‌ ಹಾನಿಗೀಡಾಗಿತ್ತು. ಒಟ್ಟು 4,688 ಮಂದಿ ಬೆಳೆಗಾರರು ನಷ್ಟ ಅನುಭವಿಸಿದ್ದರು. ಹೂ ಬಿಡುವ ಹಾಗೂ ಕಾಯಿ ಕಚ್ಚುವ ಸಮಯದಲ್ಲಿ ಬಿದ್ದ ತುಂತುರು ಮಳೆ ಹಾಗೂ ಹವಾಮಾನ ವೈಪರೀತ್ಯ ಶಾಪವಾಗಿ ಪರಿಣಮಿಸಿತ್ತು. ಈಗ ಮತ್ತೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ಬೆಳೆಗಾರರಿಗೆ ಎದುರಾಗಿದೆ.

‘ನಮ್ಮ ಭಾಗದಲ್ಲಿ ಅಕಾಲಿಕ ಮಳೆ ತೀವ್ರ ಆರ್ಥಿಕ ಹೊಡೆತ ನೀಡಿದೆ. ಹೋದ ವರ್ಷವೂ ನಷ್ಟ ಅನುಭವಿಸಿ ಉಳಿಸಿಕೊಂಡಿದ್ದ ಅಲ್ಪಸ್ವಲ್ಪ ಬೆಳೆಯೂ ಈಗ ಹಾಳಾಗಿದೆ. ಶೆಡ್‌ಗಳಲ್ಲಿ ಒಣ ದ್ರಾಕ್ಷಿ ಸಿದ್ಧಪಡಿಸಲು ಹಾಕಿದ್ದ ದ್ರಾಕ್ಷಿ ಹಾಳಾಗಿ, ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಎಕರೆಗೆ ಸರಾಸರಿ ₹ 3 ಲಕ್ಷ ಖರ್ಚಾಗುತ್ತದೆ. ಅವರಿಗೆ ಸರ್ಕಾರ ನೆರವಾಗಬೇಕು’ ಎನ್ನುತ್ತಾರೆ ತೆಲಸಂಗದ ಜಗದೀಶ ಖೊಬ್ರಿ.

‘ಜಿಲ್ಲಾಡಳಿತವನ್ನು ಕೋರಲಾಗಿದೆ’

ಅಕಾಲಿಕ ಮಳೆಯಿಂದ ಆಗಿರುವ ಹಾನಿಗೆ ಪರಿಹಾರ ಕಲ್ಪಿಸುವುದು ಹೇಗೆ ಎಂಬ ತಾಕಲಾಟವೂ ಇಲಾಖೆಯ ಅಧಿಕಾರಿಗಳಿಗೆ ಎದುರಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ, ‘ಈಗ ಆಗಿರುವ ಹಾನಿಯು ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಪರಿಹಾರಕ್ಕೆ ಅರ್ಹವಾಗುವುದಿಲ್ಲ. ಜಮೀನಿನಲ್ಲಿನ ಬೆಳೆಗಳಿಗೆ ಮಾತ್ರವೇ ಅದು ಅನ್ವಯವಾಗುತ್ತದೆ. ಕೊಯ್ಲು ಮುಗಿದ ನಂತರದ್ದು ಅನ್ವಯ ಆಗುವುದಿಲ್ಲ’ ಎಂದು ತಿಳಿಸಿದರು.

‘ಹೋದ ವರ್ಷ ಹೂವು ಕಚ್ಚುವ ಹಂತದಲ್ಲಿ ಆಗಿದ್ದ ನಷ್ಟಕ್ಕೆ ಎಕರೆಗೆ ₹18ಸಾವಿರದಂತೆ ಪರಿಹಾರ ಕೊಡಲಾಗಿತ್ತು. ಈಗ ಒಣಗಲು ಹಾಕಿದ್ದಾಗ (22 ದಿನ ಒಣಗಿಸಬೇಕು) ಮಳೆಯಾಗಿ ಹಾನಿಯಾಗಿದೆ. ಅಲ್ಲಲ್ಲಿ ದ್ರಾಕ್ಷಿಗೆ ಫಂಗಸ್ ಆಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ನಿಧಿಯಲ್ಲಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಸರ್ಕಾರ ನೆರವಾಗಬೇಕು

ರೈತರಿಗೆ ಅಲ್ಪ ಮೊತ್ತದ ಪರಿಹಾರ ಸಾಲದು. ಸಾಲದ ದವಡೆಯಿಂದ ಅವರು ಹೊರಬರಲು ಹವಾಮಾನ ಕೈ ಹಿಡಿಯುತ್ತಿಲ್ಲ. ನಮಗೆ ಸರ್ಕಾರವು ನೆರವಾಗಬೇಕು.

– ಶಹಜಾನ ಡೊಂಗರಗಾಂವ, ಮುಖಂಡ, ಐಗಳಿ

ಪರಿಗಣಿಸುವಂತೆ ಕೋರಲಾಗಿದೆ

ಹಾನಿ ಕುರಿತು ತೋಟಗಾರಿಕೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸುವಂತೆ ಕೋರಲಾಗಿದೆ.

– ಮಹಾಂತೇಶ ಮುರಗೋಡ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.