
ವಂಚನೆ
ಬೆಳಗಾವಿ: ನಕಲಿ ಇನ್ವಾಯ್ಸ್‌ಗಳನ್ನು ಸೃಷ್ಟಿಸಿ ₹593 ಕೋಟಿ ಜಿಎಸ್‌ಟಿ ವಂಚಿಸಿದ ಬೆಳಗಾವಿ ಮೂಲದ ಆರೋಪಿಯನ್ನು, ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾನಿರ್ದೇಶನಾಲಯ (ಡಿಜಿಜಿಐ) ಬೆಳಗಾವಿ ವಲಯದ ಅಧಿಕಾರಿಗಳು ಬೆಂಗಳೂರಿನಲ್ಲಿ ಈಚೆಗೆ ಬಂಧಿಸಿದ್ದಾರೆ.
ಬೆಳಗಾವಿಯ ಜಿಎಎಸ್‌ಟಿ ಪ್ರ್ಯಾಕ್ಟಿಷನರ್ ಆಗಿರುವ ಮೊಹಮ್ಮದ್ ಸೈಫುಲ್ಲಾ ಬಂಧಿತ. ಬೆಂಗಳೂರಿನಲ್ಲಿ ವಿವಿಧ ಕಂಪನಿಗಳ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿ ಮಾಡಿದ ಅನುಮಾನ ಕಂಡುಬಂದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.
ಬೆಳಗಾವಿ ಮೂಲದ ವ್ಯಕ್ತಿ ಕೋಟ್ಯಂತರ ವ್ಯವಹಾರ ಮಾಡಿದ ಬಗ್ಗೆ ಇನ್ವಾಯ್ಸ್‌ಗಳು ಸಿದ್ಧಗೊಂಡಿದ್ದವು. ಇದರ ಬಗ್ಗೆ ಅನುಮಾನಗೊಂಡ ಅಧಿಕಾರಿಗಳ ತಂಡ ಗೌಪ್ಯ ತನಿಖೆ ನಡೆಸಿತು. ಆಗ ಒಂದರ ಹಿಂದೊಂದು ಪ್ರಕರಣ ಹೊರಬಿದ್ದವು.
ಬೆಂಗಳೂರು ನಗರದಲ್ಲಿನ ಸ್ಟಾರ್ ಟ್ಯಾಕ್ಸ್ ಕನ್ಸಲ್ಟೆಂಟ್‌ಗೆ ಸಂಬಂಧಿಸಿದ ವಿವಿಧ ಕಚೇರಿಗಳು ಮತ್ತು ವಾಸಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು. ಯಾವುದೇ ವಾಸ್ತವಿಕ ಸರಕು ಅಥವಾ ಸೇವೆಗಳ ಪೂರೈಕೆ ಇಲ್ಲದೆ ಕೇವಲ ಕಾಗದದ ಮೇಲಿನ ವ್ಯವಹಾರಗಳ ಮೂಲಕ ನಕಲಿ ಬಿಲ್ ಸೃಷ್ಟಿಸಿದ್ದು ಖಾತ್ರಿಯಾಯಿತು.
ಆರೋಪಿ ₹593 ಕೋಟಿ ಮೌಲ್ಯದ ನಕಲಿ ಬಿಲ್‌ಗಳನ್ನು ತೆಗೆದಿದ್ದೂ ಅಲ್ಲದೇ, ₹235 ಕೋಟಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಕೂಡ ಪಡೆದು ಇತರರಿಗೆ ವರ್ಗಾಯಿಸಿದ್ದಾರೆ. ಕಂಪನಿಗಳಿಗೆ ಅಕ್ರಮವಾಗಿ ಲಾಭ ಮಾಡಿಕೊಟ್ಟು ಇದರ ಮೇಲೆ ಶೇಕಡಾವಾರು ಕಮಿಷನ್ ಕೂಡ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯನ್ನು ಈಚೆಗೆ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಬಳಿಕ ಟ್ರಾನ್ಸಿಟ್ ರಿಮಾಂಡ್ ಮೂಲಕ ಬೆಳಗಾವಿಯ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಲ್ಲದೇ, ಈ ಜಾಲದಲ್ಲಿ ಲಾಭಾಂಶ ಪಡೆದ ಎಲ್ಲ ಕಂಪನಿಗಳು ಹಾಗೂ ವ್ಯಕ್ತಿಗಳನ್ನೂ ಪತ್ತೆ ಮಾಡಲಾಗುತ್ತಿದೆ ಎಂದು ಜಿಎಸ್‌ಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.