ನಿಪ್ಪಾಣಿ: ‘ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರವು ಜಿಎಸ್‌ಟಿ ಹಂತಗಳನ್ನು ಕಡಿಮೆ ಮಾಡಿದೆ. ಆದ್ದರಿಂದ ಹಬ್ಬದ ಸಮಯದಲ್ಲಿ ಖರೀದಿ ಹೆಚ್ಚಾಗಲಿದೆ. ಈ ನಿರ್ಧಾರವು ದೇಶದ ಆರ್ಥಿಕತೆಯನ್ನು ಹೆಚ್ಚಿಸುತ್ತದೆ’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಪ್ರತಿಪಾದಿಸಿದರು.
ನಗರದಲ್ಲಿ ಸೋಮವಾರ ನಡೆದ ಆನಂದೋತ್ಸವ ಸಭೆಯಲ್ಲಿ ಅವರು ಮಾತನಾಡಿ, ‘ಜಿಎಸ್‌ಟಿ ಹಂತಗಳನ್ನು ಕಡಿಮೆ ಮಾಡುವ ಮೂಲಕ ಕೇಂದ್ರ ಸರ್ಕಾರವು ಸಾಮಾನ್ಯ ಜನರಿಗೆ ದಸರಾ ಮತ್ತು ದೀಪಾವಳಿಯ ಉಡುಗೊರೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ, ಜಿಎಸ್‌ಟಿ ಜಾರಿಗೆ ತರುವ ಆಂದೋಲನ ಪ್ರಾರಂಭವಾಯಿತು ಮತ್ತು ಈ ಕಾನೂನು 2017 ರಿಂದ ಜಾರಿಗೆ ಬಂದಿತು. ಈ ಹಿಂದೆ, ಜಿಎಸ್‌ಟಿಯಲ್ಲಿ ನಾಲ್ಕು ಹಂತಗಳಿದ್ದವು, ಆದರೆ ಈಗ ಅದನ್ನು 5 ಮತ್ತು 18 ಪ್ರತಿಶತದ ಎರಡು ಹಂತಗಳಿಗೆ ಇಳಿಸಲಾಗಿದೆ, ಇದು ಸಾಮಾನ್ಯ ಜನರಿಗೆ ಪರಿಹಾರ ನೀಡಿದೆ’ ಎಂದರು.
‘ಜಿಎಸ್‌ಟಿ ಜಾರಿಗೆ ತಂದಾಗ ತಿಂಗಳಿಗೆ ₹37 ಸಾವಿರ ಕೋಟಿ ಸಂಗ್ರಹವಾಗುತ್ತಿತ್ತು. ಈಗ ಜಿಎಸ್‌ಟಿ ಸಂಗ್ರಹ ₹2 ಲಕ್ಷ ಕೋಟಿಗೆ ತಲುಪಿದೆ. ಪರಿಣಾಮವಾಗಿ, ಜಿಎಸ್‌ಟಿಯನ್ನು ಸುಧಾರಿಸುವ ಮೂಲಕ ಹಂತಗಳನ್ನು ಕಡಿಮೆ ಮಾಡಲಾಗಿದೆ. ಇದು ನಿಪ್ಪಾಣಿ ತಾಲ್ಲೂಕಿನ ವ್ಯಾಪಾರಿಗಳು ಮತ್ತು ಅಂಗಡಿಯವರು ಸೇರಿದಂತೆ ಸಾಮಾನ್ಯ ಜನರಿಗೆ ಪ್ರಯೋಜನವನ್ನು ನೀಡುತ್ತದೆ’ ಎಂದರು.
ಬಿಜೆಪಿ ಕಾರ್ಯಕರ್ತರು ಪರಸ್ಪರ ಸಿಹಿ ವಿತರಿಸುವ ಮೂಲಕ ಆನಂದೋತ್ಸವ ಆಚರಿಸಿದರು.
ಸ್ಥಳೀಯ ನಗರಸಭೆ ಅಧ್ಯಕ್ಷೆ ಸೋನಾಲ ಕೋಠಡಿಯಾ, ಉಪಾಧ್ಯಕ್ಷ ಸಂತೋಷ ಸಾಂಗಾವಕರ, ವೇದಗಂಗಾ ಎಫ್‌ಪಿಒನ ಸಿದ್ಧು ನರಾಟೆ, ಹಾಲ್ ಶುಗರ್ ನಿರ್ದೇಶಕ ಮಹಾಲಿಂಗ ಕೋಠಿವಾಲೆ, ರಾಜು ಗುಂಡೇಶಾ, ಸುಹಾಸ ಗೂಗೆ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಸ್.ಎಸ್. ಧವಣೆ, ಲಕ್ಷ್ಮಿ ಮಗದುಮ, ಅಭಯ ಮಾನವಿ, ನಿರಂಜನ ಕಮತೆ ಇದ್ದರು.
ಜಿಎಸ್‌ಟಿ ದರ ಇಳಿಕೆ: ರಾಯಬಾಗದಲ್ಲಿ ಸಂಭ್ರಮ
ರಾಯಬಾಗ: ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ‘ನಾರಿಕ ದೇವೋಭವ’ ಎಂಬ ಘೋಷಣೆಯಡಿ ಜಿಎಸ್‌ಟಿ ದರವನ್ನು ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ರಾಯಬಾಗದಲ್ಲಿ ಮಂಗಳವಾರ ಸಂಭ್ರಮಾಚರಣೆ ನಡೆಯಿತು.
ರಾಯಬಾಗ ಶಾಸಕ ದುರ್ಯೋಧನ ಐಹೊಳೆ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಜಿಎಸ್‌ಟಿ ದರ ಇಳಿಕೆಯು ಸಣ್ಣ ವ್ಯಾಪಾರಿಗಳು ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಉಳಿತಾಯದ ಉತ್ಸವವಾಗಿದೆ. ಮೋದಿ ಅವರ ನೇತೃತ್ವದ ಸರ್ಕಾರವು ಜನಪರ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಅಭಿಪ್ರಾಯಪಟ್ಟರು. ‘ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ಸರಳಗೊಳಿಸುವ ಮೂಲಕ ಕೇಂದ್ರ ಸರ್ಕಾರವು ₹140 ಕೋಟಿ ಭಾರತೀಯರಿಗೆ ನೇರ ಪ್ರಯೋಜನ ಒದಗಿಸಿದೆ’ ಎಂದರು.
ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ಬಿಜೆಪಿ ಮಂಡಲದ ಅಧ್ಯಕ್ಷ ಪ್ರಥ್ವಿರಾಜ ಜಾಧವ ಸದಾಶಿವ ಘೋರ್ಪಡೆಸದಾನಂದ ಹಳಿಂಗಳಿಬಸವರಾಜ ದೋಣವಾಡೆ ಸಂಗಣ್ಣ ದತ್ತವಾಡೆ ವೀರೇಶ ಬ್ಯಾಕೂಡೆ ಮಹೇಶ ಕರಮಡಿ ಸೇರಿದಂತೆ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.