ADVERTISEMENT

ಜಿಎಸ್‌ಟಿ ಪರಿಷ್ಕರಣೆಯಿಂದ ದೇಶಕ್ಕೆ ಹಿತ: ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿಕೆ

ವಿನಾಕರಣ ವಿರೋಧಿಸುವತ್ತಿರುವ ಕಾಂಗ್ರೆಸ್‌:

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 7:53 IST
Last Updated 7 ಸೆಪ್ಟೆಂಬರ್ 2025, 7:53 IST
ಈರಣ್ಣ ಕಡಾಡಿ
ಈರಣ್ಣ ಕಡಾಡಿ   

ಬೆಳಗಾವಿ: ‘ಕೇಂದ್ರ ಸರ್ಕಾರ ದೇಶದ ಜನಹಿತ ದೃಷ್ಟಿಯಿಂದ ಜಿಎಸ್‌ಟಿ ಪರಿಷ್ಕರಣೆ ಮಾಡಿದೆ. ಇದರಿಂದ ಸಾಕಷ್ಟು ಸುಧಾರಣೆಗಳು ಸಾಧ್ಯವಾಗಲಿವೆ. ದೇಶದ ಆರ್ಥಿಕ ವ್ಯವಸ್ಥೆಯ ಗಮನಾರ್ಹವಾಗಿ ಸುಧಾರಿಸಲಿದೆ. ಇದನ್ನು ಸಹಿಸಿಕೊಳ್ಳದ ಕಾಂಗ್ರೆಸ್‌ ನಾಯಕರು ವಿನಾಕಾರಣ ವಿರೋಧ ಮಾಡುತ್ತಿದ್ದಾರೆ’ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವುದೇ ಸರ್ಕಾರ ಸುಧಾರಣಾ ಕ್ರಮ ಕೈಗೊಂಡಾಗ ಪಕ್ಷಾತೀತವಾಗಿ ಅದನ್ನು ಸ್ವಾಗತಿಸಬೇಕು. ಆದರೆ, ಕಾಂಗ್ರೆಸ್‌ ನಾಯಕರ ಮಾನಸಿಕ ಸ್ಥಿತಿ ಬರೀ ವಿರೋಧ ಮಾಡುವುದಾಗಿದೆ’ ಎಂದರು.

‘ನಾಲ್ಕು ಹಂತದ ಸರಕು ಮತ್ತು ಸೇವಾ ತೆರಿಗೆಯನ್ನು ಈಗ ಎರಡು ಹಂತಗಳಲ್ಲಿ ಮಾತ್ರ ಆಕರಿಸಲಾಗುತ್ತಿದೆ. ಈಗ ಸರಕು ಸೇವೆಗಳ ವ್ಯವಹಾರ ಸುಲಭವಾಗಲಿದೆ. ಅಲ್ಲದೇ ಈ ಹಿಂದೆ ಶೇ 12 ಹಾಗೂ ಶೇ 28ರಷ್ಟಿದ್ದ ತೆರಿಗೆ ಸ್ಲ್ಯಾಬ್‌ಗಳನ್ನು ಶೇ 5 ಮತ್ತು ಶೇ 18ಕ್ಕೆ ಮಾತ್ರ ಉಳಿಸಿಕೊಳ್ಳಲಾಗಿದೆ. ಶೇ 5, 12 ಹಾಗೂ 18ರಲ್ಲಿ ಬರುವ ಶಿಕ್ಷಣ, ಆರೋಗ್ಯ ವಿಮೆ, ಜೀವ ವಿಮೆಗಳಿಗೆ ಜಿಎಸ್‌ಟಿ ತೆರಿಗೆ ದರ ಶೂನ್ಯಗೊಳಿಸಲಾಗಿದೆ. ದೇಶದ ಆಹಾರ ಉತ್ಪನ್ನಗಳು, ಕೃಷಿ, ತೋಟಗಾರಿಕೆ ವಸ್ತುಗಳ ಮೇಲೆ ಶೇ 12ರಷ್ಟು ಜಿಎಸ್‌ಟಿಯನ್ನು ಈಗ  ಶೇ 5ಕ್ಕೆ ಇಳಿಸಲಾಗಿದೆ. ವೈದ್ಯಕೀಯ ಔಷಧಗಳ ಮೇಲಿದ್ದ ಶೇ 18ರಷ್ಟು ಪ್ರಮಾಣವನ್ನೂ ಶೇ 5ಕ್ಕೆ ಇಳಿಸಲಾಗಿದೆ. ಶೇ 28ರಷ್ಟು ಇದ್ದ ವಾಣಿಜ್ಯ ಚಟುವಟಿಕೆಗಳ ಜಿಎಸ್‌ಟಿ ಪ್ರಮಾಣವನ್ನು ಶೇ 18ಕ್ಕೆ ಇಳಿಸಲಾಗಿದೆ. ದೊಡ್ಡ ವಾಹನ ಖರೀದಿಗೆ ವಿಧಿಸುವ ಹೆಚ್ಚುವರಿ ತೆರಿಗೆಯನ್ನು ಹಿಂಪಡೆಯಲಾಗಿದೆ. ಇವೆಲ್ಲವೂ ಜನೋಪಯೋಗಿಯಾಗಿವೆ’ ಎಂದರು.

ADVERTISEMENT

‘ಅಮೆರಿಕ ಅಧ್ಯಕ್ಷ ಟ್ರಂಪ್‌ ಇಡೀ ಜಗತ್ತಿನ ಮೇಲೆ ತೆರಿಗೆ ಯುದ್ಧ ಸಾರಿದ್ದಾರೆ. ಇಂಥದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ತೆರಿಗೆ ಹಗುರಗೊಳಿಸಿದ್ದು ಕ್ರಾಂತಿಕಾರಿ ನಿರ್ಧಾರ. ಇದರಿಂದ ಪ್ರತಿ ವರ್ಷ ಕೇಂದ್ರ ಸರ್ಕಾರಕ್ಕೆ ಸುಮಾರು ₹40 ಸಾವಿರ ಕೋಟಿಯಿಂದ ₹50 ಸಾವಿರ ಕೋಟಿ ಹೊರೆಯಾಗುತ್ತದೆ. ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳು ಹಾಗೂ ಸಮಾಜವನ್ನು ದಾರಿ ತಪ್ಪಿಸುವಂತಹ ವ್ಯವಸ್ಥೆಗಳ ಮೇಲೆ ಶೇ 40ರಷ್ಟು ಜಿಎಸ್‌ಟಿ ವಿಧಿಸುವ ಮೂಲಕ ಪರೋಕ್ಷವಾಗಿ ಅವುಗಳ ನಿಯಂತ್ರಣ ಮಾಡಲಾಗುತ್ತಿದೆ’ ಎಂದೂ ಕಡಾಡಿ ಹೇಳಿದರು.

ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ನಗರ ಜಿಲ್ಲಾ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕ ಸಂಜಯ ಪಾಟೀಲ, ಎಂ.ಬಿ.ಝಿರಲಿ, ಹನುಮಂತ ಕೊಂಗಾಲಿ, ಸಚಿನ ಕಡಿ ಇದ್ದರು.

ಜಿಲ್ಲೆಯಲ್ಲಿ ಸುಮಾರು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ನಾಶವಾಗಿವೆ. ವಿದ್ಯುತ್ ಪರಿಕರಗಳು ಹಾಗೂ ರಸ್ತೆಗಳು ಹಾಳಾಗಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ.
– ಈರಣ್ಣ ಕಡಾಡಿ, ರಾಜ್ಯಸಭೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.