ADVERTISEMENT

ಗ್ಯಾರಂಟಿ ಯೋಜನೆಗಳು ನಿಲ್ಲವುದಿಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 16:35 IST
Last Updated 18 ಏಪ್ರಿಲ್ 2024, 16:35 IST
ಬೈಲಹೊಂಗಲ ತಾಲ್ಲೂಕಿನ ಹೊಸೂರು, ಮಲ್ಲೂರು ಗ್ರಾಮಗಳ ಕಾರ್ಯಕರ್ತರ ಸಮಾವೇಶದಲ್ಲಿ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ, ಶಾಸಕ ಮಹಾಂತೇಶ ಕೌಜಲಗಿ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಕಾರ್ಯಕರ್ತರು ಸನ್ಮಾನಿಸಿದರು
ಬೈಲಹೊಂಗಲ ತಾಲ್ಲೂಕಿನ ಹೊಸೂರು, ಮಲ್ಲೂರು ಗ್ರಾಮಗಳ ಕಾರ್ಯಕರ್ತರ ಸಮಾವೇಶದಲ್ಲಿ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ, ಶಾಸಕ ಮಹಾಂತೇಶ ಕೌಜಲಗಿ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಕಾರ್ಯಕರ್ತರು ಸನ್ಮಾನಿಸಿದರು   

ಬೈಲಹೊಂಗಲ: ‘ಬುದ್ಧ, ಬಸವ, ಅಂಬೇಡ್ಕರ್ ಅವರ ಆಶಯಗಳಿಗೆ ತಕ್ಕಂತೆ ರಾಜ್ಯ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಬಡವರಿಗಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಸರ್ಕಾರ ಇರುವವರೆಗೂ ನಿರಂತರವಾಗಿ ನಡೆಯಲಿವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಬೈಲಹೊಂಗಲ ತಾಲ್ಲೂಕಿನ ಹೊಸೂರು, ಮಲ್ಲೂರ ಗ್ರಾಮಗಳಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ‘ಯಾವುದೇ ಕಾರಣಕ್ಕೂ ಯೋಜನೆಗಳು ನಿಲ್ಲಿಸುವುದಿಲ್ಲ. ಇದು ಸರ್ಕಾರದ ಪಾಲಿಗೆ ಪುಣ್ಯದ ಕಾರ್ಯ. ಬಡವರ ಹಸಿವನ್ನ ನೀಗಿಸುತ್ತೀವೆ’ ಎಂದರು.

‘ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ಹೆಣ್ಣುಮಕ್ಕಳ ಆತ್ಮಸ್ಥೈರ್ಯ ಕುಗ್ಗಿಸುವಂಥದ್ದು. ಬಿಜೆಪಿ- ಜೆಡಿಎಸ್ ನಾಯಕರು ಅನವಶ್ಯಕವಾಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಕಿಡಿ ಕಾರಿದರು.

ADVERTISEMENT

‘ಬೆಳಗಾವಿ ಸ್ವಾಭಿಮಾನಗಳ ಜಿಲ್ಲೆ. ಸಂಗೊಳ್ಳಿ ರಾಯಣ್ಣ‌ನ ತವರೂರು. ಇಂಥ‌ ಜಿಲ್ಲೆಗೆ ಬೇರೆ ಜಿಲ್ಲೆಯ ವ್ಯಕ್ತಿ ಬೇಕಾ’ ಎಂದು ಪ್ರಶ್ನಿಸಿದರು.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ‘ಬೈಲಹೊಂಗಲದಿಂದ 3 ಲಕ್ಷಕ್ಕೂ ಹೆಚ್ಚು ಹೆಣ್ಣು ಮಕ್ಕಳು ಶಕ್ತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನರ ಆರ್ಥಿಕ ಸ್ಥಿತಿ ಸುಧಾರಿಸಿದೆ. ಇಂಥ ಯೋಜನೆಗಳ ವಿರುದ್ಧ ಬಿಜೆಪಿಯವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವುದು ವಿಪರ್ಯಾಸ’ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಮಾತನಾಡಿ, ‘ಕೇಂದ್ರ ಸರ್ಕಾರದ ಯೋಜನೆಗಳು ನಮಗೆ ಕೈ ತಪ್ಪುತ್ತಿವೆ. ಒಂದೇ ಭಾರತ್‌ ರೈಲು ಹುಬ್ಬಳ್ಳಿಯವರೆಗೆ ಮಾತ್ರ ತಲುಪಿತು. ಐಐಟಿ, ಹೈಕೋರ್ಟ್ ಪಕ್ಕದ ಜಿಲ್ಲೆಯ ಪಾಲಾದವು. ಈ ಬಾರಿ ನನ್ನನ್ನು ಗೆಲ್ಲಿಸಿ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವೆ’ ಎಂದು ಹೇಳಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ್ ಪಾಟೀಲ, ಜಿಲ್ಲಾ ಕಾರ್ಯದರ್ಶಿ ಉಮೇಶ ಬೋಳೆತ್ತಿನ, ಮಹಾಂತೇಶ ಮತ್ತಿಕೊಪ್ಪ, ಸೋಮನಿಂಗ ಮೂಗಬಸವ, ಮುರುಗೋಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಗೌಡ ಪಾಟೀಲ, ಗಂಗಾಧರ ಮೂಗಬಸವ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.