ADVERTISEMENT

ಬಾಡಿಗೆಗೆ ಪಡೆದ ಕಾರ್‌ಗಳನ್ನು ಮಾರಿದ್ದ! ₹ 49.50 ಲಕ್ಷ ಮೌಲ್ಯದ 9 ಕಾರ್‌ ವಶ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 13:16 IST
Last Updated 3 ಜೂನ್ 2019, 13:16 IST
ಬೆಳಗಾವಿಯಲ್ಲಿ ಕಾರ್‌ಗಳ ಸಮೇತ ಆರೋಪಿಯನ್ನು ಬಂಧಿಸಲಾಗಿದೆ
ಬೆಳಗಾವಿಯಲ್ಲಿ ಕಾರ್‌ಗಳ ಸಮೇತ ಆರೋಪಿಯನ್ನು ಬಂಧಿಸಲಾಗಿದೆ   

‌ಬೆಳಗಾವಿ: ಬಾಡಿಗೆಗೆಂದು ಕಾರ್‌ಗಳನ್ನು ಪಡೆದುಕೊಂಡು ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಉದ್ಯಮಬಾಗ್‌ ಠಾಣೆ ಪೊಲೀಸರು, ವ್ಯಕ್ತಿಯೊಬ್ಬನನ್ನು ಬಂಧಿಸಿ ₹ 49.50 ಲಕ್ಷ ಮೌಲ್ಯದ 9 ಕಾರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ರಾಮತೀರ್ಥ ನಗರದ ಶಿವಕುಮಾರ ಮಲ್ಲೇಶಪ್ಪ ಮಾಳಕನ್ನವರ (22) ಬಂಧಿತ.

‘ತಾನು ಬಾಲಾಜಿ ಎಂಟರ್‌ಪ್ರೈಸೆಸ್ ಎಂಬ ಕಂಪನಿ ಮಾಲೀಕನಾಗಿದ್ದು, ದೊಡ್ಡ ಕಂಪನಿಗಳಿಗೆ ಕಾರುಗಳನ್ನು ಬಾಡಿಗೆಗೆ ಕೊಡುವುದಾಗಿ ಸುಳ್ಳು ಹೇಳಿ ನಂಬಿಸಿ, ನನ್ನ ಫೊರ್ಡ್‌ ಪಿಯಸ್ಟೊ ಕಾರ್‌ ತೆಗೆದುಕೊಂಡಿದ್ದ. ಆ ಕಾರನ್ನು ಮಾರಲು ಬೇರೆಯವರ ಬಳಿ ಇಟ್ಟು ಹಣ ಪಡೆದುಕೊಂಡಿದ್ದ. ನನಗೆ ಬಾಡಿಗೆ ನೀಡದೇ ಕಾರನ್ನೂ ಮರಳಿಸದೇ ಮೋಸ ಮಾಡಿದ್ದಾನೆ’ ಎಂದು ಶಿವಕುಮಾರ ವಿರುದ್ಧ ರಾಣಿ ಚನ್ನಮ್ಮ ನಗರದ ಮಂಜುನಾಥ ಚಂಬಣ್ಣ ಆಲಕಟ್ಟಿ ಉದ್ಯಮಬಾಗ ಠಾಣೆಗೆ ದೂರು ನೀಡಿದ್ದರು.

ADVERTISEMENT

ತನಿಖೆ ನಡೆಸಿದ ಪೊಲೀಸರು, ಶಿವಕುಮಾರನನ್ನು ಮೇ 30ರಂದು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ‘ನಾನು ಬೆಳಗಾವಿ ಮತ್ತು ಧಾರವಾಡ ನಗರಗಳಲ್ಲಿ 7 ಹಾಗೂ ಇನ್ನೊಬ್ಬ ಆರೋಪಿ ಸಂಜಯ ಕುಲಕರ್ಣಿ ಜೊತೆ ಸೇರಿ ಬೆಂಗಳೂರಿನಲ್ಲಿ 2 ಕಾರ್‌ಗಳನ್ನು ಮಾರಾಟ ಮಾಡಿದ್ದಾಗಿ ತಿಳಿಸಿದ್ದಾನೆ. ಬಾಡಿಗೆಗೆ ಬಳಸುವುದಾಗಿ ಮಾಲೀಕರಿಗೆ ಸುಳ್ಳು ಹೇಳಿ ಅವರಿಂದ ಕಾರ್‌ಗಳನ್ನು ಪಡೆದುಕೊಂಡು ಬಾಡಿಗೆಯನ್ನೂ ನೀಡದೇ, ವಾಹನವನ್ನು ಮರಳಿಸದೇ ಬೇರೆಯವರಿಗೆ ಮಾರಿದ ಬಗ್ಗೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಇನ್ನೊಬ್ಬ ಆರೋಪಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.