ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ನಿರ್ಮಿಸಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ /
ಪ್ರಜಾವಾಣಿ ಚಿತ್ರ
ಬೆಳಗಾವಿ: ರಾಜ್ಯದ ಇತರ ಭಾಗಗಳಂತೆಯೇ ಜಿಲ್ಲೆಯಲ್ಲಿಯೂ ಹೃದ್ರೋಗ ಹಾಗೂ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಲೇ ಸಾಗಿವೆ. ಅಳತೆಯಲ್ಲೂ, ಜನಸಂಖ್ಯೆಯಲ್ಲೂ ದೊಡ್ಡದಾದ ಬೆಳಗಾವಿ ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆಯೂ ದೊಡ್ಡದಾಗಿಯೇ ಇದೆ. ಮಾತ್ರವಲ್ಲ; ಮಹಾರಾಷ್ಟ್ರಕ್ಕೆ ಸೇರಿದ ಹತ್ತಿರದ ಹಳ್ಳಿಗಳಿಂದಲೂ ರೋಗಿಗಳು ಜಿಲ್ಲಾಸ್ಪತ್ರೆಗೆ ಬರುತ್ತಿದ್ದಾರೆ. ಆದರೆ, ಹೃದ್ರೋಗ ಶಸ್ತ್ರಚಿಕಿತ್ಸೆಗೆ ಬೇಕಾದ ವಾರ್ಡ್ ಹಾಗೂ ತಜ್ಞವೈದ್ಯರ ಕೊರತೆ ಕಾಡುತ್ತಿದೆ.
ಜಿಲ್ಲಾಸ್ಪತ್ರೆಯಲ್ಲಿ ಕಳೆದ ವರ್ಷವೇ ಹೃದ್ರೋಗ ಪತ್ತೆಗೆ ₹5 ಕೋಟಿ ವೆಚ್ಚದ ‘ಸಿಟಿ ಕೊರೊನರಿ ಎಂಜಿಯಾಗ್ರಾಮ್’ ಯಂತ್ರ ಅಳವಡಿಸಲಾಗಿದೆ. ಹಲವು ಕಾಯಿಲೆಗಳಿಗೆ ಈ ಒಂದೇ ಯಂತ್ರ ರೋಗಪತ್ತೆ ಮಾಡಬಲ್ಲದು. 2025ರಿಂದ ಹೃದಯ ಶಸ್ತ್ರಚಿಕಿತ್ಸೆ ಕೂಡ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೂ ಇದೂವರೆಗೆ ಅದು ಕೈಗೂಡಿಲ್ಲ.
ಶನಿವಾರ (ಜುಲೈ 5) ಒಂದೇ ದಿನದಲ್ಲಿ 151 ಇಸಿಜಿ, ಎಕ್ಸರೇ, 42 ಸಿಟಿ ಸ್ಕ್ಯಾನ್ ಮಾಡಲಾಗಿದೆ. ತಪಾಸಣೆಗೆ ಒಳಗಾಗುವವರ ಸಂಖ್ಯೆ ಹೆಚ್ಚಾದ ಬಳಿಕ ವಿಕಿರಣವಿಜ್ಞಾನ ವಿಭಾಗದ ಪ್ರಯೋಗಾಲಯವನ್ನು 24X7 ಸೇವೆಗೆ ಅಣಿಗೊಳಿಸಲಾಗಿದೆ. ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಸರ್ಕಾರ ಮಾತ್ರ ಕಣ್ತೆರೆದು ನೋಡುತ್ತಿಲ್ಲ.
ಹೊಸದಾಗಿ ನಿರ್ಮಿಸಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ಮಾಡಲಾಗಿದೆ. ಸದ್ಯ ಎಂಜಿಯೊಪ್ಲಾಸ್ಟಿ (ಬ್ಲಾಕೇಜ್‌ನಲ್ಲಿ ಸ್ಟೆಂಟ್ ಅಳವಡಿಸುವ ಕ್ರಿಯೆ) ಮಾತ್ರ ಮಾಡಲು ಸಾಧ್ಯ. ಇದಕ್ಕಾಗಿ ಇಬ್ಬರು ಹೃದ್ರೋಗ ವೈದ್ಯರ ನೇಮಕಕ್ಕೆ ಅರ್ಜಿ ಕರೆಯಲಾಗಿದ್ದು, ಅದರಲ್ಲಿ ಒಬ್ಬರು ಮಾತ್ರ ಬಂದಿದ್ದಾರೆ.
ಶಸ್ತ್ರಚಿಕಿತ್ಸಕ ಹುದ್ದೆಯೇ ಇಲ್ಲ: ಹೃದ್ರೋಗ ಶಸ್ತ್ರಚಿಕಿತ್ಸಕ (ಕಾರ್ಡಿಯೊ ಥೆರಫಿ ಸರ್ಜನ್) ನೇಮಕಾಗಿ ಹುದ್ದೆಯನ್ನೂ ಇದೂವರೆಗೆ ಸೃಷ್ಟಿ ಮಾಡಿಲ್ಲ. ಹೀಗಾಗಿ, ಸರ್ಕಾರ ಮೊದಲು ಈ ಹುದ್ದೆ ನಿಯೋಜನೆ ಮಾಡಬೇಕು. ಬಳಿಕ ಅದಕ್ಕೆ ವೈದ್ಯರ ನೇಮಕಕ್ಕೆ ಪ್ರಸ್ತಾವ ಸಲ್ಲಿಸಬೇಕು. ಅಲ್ಲಿಯವರೆಗೂ ತೆರೆದ ಹೃದಯ ಶಸ್ತ್ರಚಿಕಿತ್ಸೆ ಕನಸೇ ಸರಿ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿದ್ದರೂ ಸರ್ಕಾರ ಹೃದಯ ಶಸ್ತ್ರಚಿಕಿತ್ಸೆಗೆ ಏಕೆ ಹಿಂದೇಟು ಹಾಕುತ್ತಿದೆ ಎಂಬ ಪ್ರಶ್ನೆಗೆ ಮಾತ್ರ ಯಾರಲ್ಲೂ ಉತ್ತರವಿಲ್ಲ.
₹5 ಕೋಟಿ ವೆಚ್ಚದ ಅತ್ಯಾಧುನಿಕ ‘ಸಿಟಿ ಕೊರೊನರಿ ಎಂಜಿಯಾಗ್ರಾಮ್’ ಯಂತ್ರವನ್ನು ವರ್ಷದ ಹಿಂದೆ ಅಳವಡಿಸಲಾಗಿದೆ. ಇದರಿಂದ ಹೃದ್ರೋಗ ತಪಾಸಣೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಯವರೆಗೆ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ ತಪಾಸಣೆಯೂ ಸಾಧ್ಯವಿರಲಿಲ್ಲ. ಈ ಆಧುನಿಕ ತಾಂತ್ರಿಕ ಶಕ್ತಿಯ ಮೂಲಕ ಎಲ್ಲ ರೋಗಗಳ ಪತ್ತೆ ಕಾರ್ಯ ನಡೆಸಲು ಸಾಧ್ಯವಾಗಿದೆ.
ಹೃದಯ ಬೇನೆ, ಹೃದಯ ಉರಿ, ರಕ್ತದೊತ್ತಡ, ಉಸಿರಾಟದ ತೊಂದರೆ, ಆಯಾಸ ಹೀಗೆ ವಿವಿಧ ಲಕ್ಷಣಗಳು ಕಂಡುಬಂದರೆ ಮೊದಲು ಶುರು ಮಾಡುವುದೇ ಆ್ಯಂಜಿಯೊಗ್ರಾಮ್. ಹೃದಯಕ್ಕೆ ರಕ್ತ ಪೂರೈಸುವ ನಳಿಕೆಗಳನ್ನು ಚಿತ್ರೀಕರಿಸುವ ವಿಧಾನವಿದು. ಹೀಗೆ ಪ್ರತಿ ಆ್ಯಂಜಿಯೊಗ್ರಾಮ್‌ಗೆ ಕೆಲವು ಕಡೆ ₹10 ಸಾವಿರ ಮತ್ತೆ ಕೆಲವೆಡೆ ₹15 ಸಾವಿರ ವೆಚ್ಚ ತಗಲುತ್ತದೆ. ಇದು ಹೊರೆಯಾದ್ದರಿಂದ ಬಡ ರೋಗಿಗಳು ತಪಾಸಣೆಯಿಂದಲೇ ದೂರ ಉಳಿಯುವ ಸ್ಥಿತಿ ಇತ್ತು.
ಆದರೆ, ಇಲ್ಲಿ ಹೃದಯ ತಪಾಸಣೆ ಮಾತ್ರ ಸಾಧ್ಯವಾಗಿದೆ. ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯೇ ಗತಿ ಎನ್ನುವ ಸ್ಥಿತಿ ಇದೆ.
34,539 ಆರು ತಿಂಗಳಲ್ಲಿ ಮಾಡಲಾದ ಎಕ್ಸರೇ ಜನವರಿಯಿಂದ ಮಾಡಿದ ಸಿಟಿ ಸ್ಕ್ಯಾನ್‌ಗಳ ಸಂಖ್ಯೆ 6,439 ಕಳೆದ ವರ್ಷ 64,000 ಮಂದಿ ಎಕ್ಸರೇ ಮಾಡಿಸಿಕೊಂಡಿದ್ದಾರೆ
ಶೇ 40ರಷ್ಟು ವೈದ್ಯರೇ ಇಲ್ಲ
ಜಿಲ್ಲಾಸ್ಪತ್ರೆಯಲ್ಲಿ ಕಳೆದ ಹತ್ತು ವರ್ಷಗಳಿಂದ ವೈದ್ಯರ ಸಂಖ್ಯೆ ಅಷ್ಟೇ ಇದೆ. ಈಗಲೂ ಶೇ 40ರಷ್ಟು ವೈದ್ಯರು ಹಾಗೂ ವೈದ್ಯೇತರ ಸಿಬ್ಬಂದಿ ಕೊರತೆ ಕಾಡುತ್ತಿದೆ. 240 ವೈದ್ಯ ಹುದ್ದೆಗಳು ಮಂಜೂರಾಗಿದ್ದು 170 ಮಂದಿ ಮಾತ್ರ ಇದ್ದಾರೆ. ಇನ್ನೂ 40 ಹುದ್ದೆಗಳ ಮಂಜೂರಾತಿ ಬಾಕಿ ಇದೆ. ಕೋವಿಡ್‌ಗಿಂತ ಮುಂಚೆ ಪ್ರತಿ ದಿನ 600ರಿಂದ 700 ಜನ ಹೊರರೋಗ ವಿಭಾಗಕ್ಕೆ ಬರುತ್ತಿದ್ದರು. ಈಗ 1600ರಿಂದ 1800 ಮಂದಿ ಚಿಕಿತ್ಸೆಗೆ ಬರುತ್ತಿದ್ದಾರೆ. ಒಳರೋಗಿಗಳ ವಿಭಾಗದಲ್ಲಿ 1040 ಬೆಡ್‌ಗಳಿದ್ದು 940 ಬೆಡ್ ಯಾವಾಗಲೂ ಭರ್ತಿಯಾಗಿರುತ್ತವೆ. 150 ಐಸಿಯು ಬೆಡ್‌ಗಳಿದ್ದರೂ ಸಾಲುತ್ತಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ರೀತಿಯ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ತರಿಸಲಾಗಿದೆ. ಇದರಿಂದ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದ ರೋಗಿಗಳು ಈಗ ಇತ್ತ ಮುಖ ಮಾಡಿದ್ದಾರೆ. ₹190 ಕೋಟಿ ಹಣ ಸುರಿದು ಕಟ್ಟಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವ್ಯರ್ಥವಾಗದೆ. 8 ಶಸ್ತ್ರಚಿಕಿತ್ಸಾ ಕೊಠಡಿಗಳು ತೀವ್ರ ನಿಗಾ ಘಟಕ ಕಾರ್ಡಿಯಾಲಜಿ ಯುರಾಲಜಿ ನೆಫ್ರಾಲಜಿ ತಾಯಿ– ಮಕ್ಕಳ ವಿಶೇಷ ಘಟಕ ಸೇರಿ 11 ವಿಭಾಗಗಳು ಇಲ್ಲಿವೆ. ಆದರೂ ಹೃದ್ರೋಗಿಗಳಿಗೆ ಪ್ರಯೋಜನವಾಗುತ್ತಿಲ್ಲ.
ಇವರೇನಂತಾರೆ..?
ಹೃದಯದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಜಿಲ್ಲಾಸ್ಪತ್ರೆಗೆ ಬಂದಿದ್ದೇನೆ. ಇಲ್ಲಿನ ರೇಡಿಯಾಲಾಜಿ ವಿಭಾಗದಲ್ಲಿ ಒಂದೇ ಯಂತ್ರವಿದೆ. ಇದರಿಂದ ಇಸಿಜಿ, ಎಕ್ಸರೇ, ಎಕೊ ಮಾಡಿಸಲು ದಿನಗಟ್ಟಲೇ ಕಾಯಬೇಕು. ಹೃದ್ರೋಗಿಗಳಿಗೆ ಇಷ್ಟು ಕಾಯುವುದು ಅಪಾಯಕಾರಿ.ಸೋಮಪ್ಪ ಬಂಡಿವಡ್ಡರ, ರೋಗಿ
ಆರು ವರ್ಷಗಳಿಂದ ಮಗಳಿಗೆ ಹೃದಯದ ಸಮಸ್ಯೆ ಇದೆ. ಪ್ರತಿ ಮೂರು ತಿಂಗಳಿಗೊಮ್ಮೆ ಇಸಿಜಿ, ಎಕೊ ಮಾಡಿಸಬೇಕು. ಶಸ್ತ್ರಚಿಕಿತ್ಸೆ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ. ಪಡಿತರ ಚೀಟಿ ಬಳಸಿ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಿಸಲು ಸಾಧ್ಯವಿದೆ. ಆದರೆ, ಔಷಧೋಪಚಾರ ಮತ್ತು ಅಡ್ಮಿಟ್ ಮಾಡಿದ ಹಣ ತುಂಬಲೇಬೇಕು. ಹಣ ಹೊಂದಿಸುವವರೆಗೆ ಚಿಕಿತ್ಸೆಗೆ ಬರುತ್ತಿದ್ದೇವೆ.ಮಲ್ಲಮ್ಮ ಇಂಚಲ್, ರೋಗಿಯ ತಾಯಿ
ಆ್ಯಂಜಿಯೊಪ್ಲಾಸ್ಟಿ ಮಾಡಲು ಜಿಲ್ಲಾಸ್ಪತ್ರೆಯಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ಅಗತ್ಯ ಸಲಕರಣೆಗಳನ್ನು ತರಿಸಲಾಗಿದೆ. ಇಬ್ಬರು ವೈದ್ಯರ ಪೈಕಿ ಒಬ್ಬರನ್ನು ಈಗಾಗಲೇ ನಿಯೋಜನೆ ಮಾಡಲಾಗಿದೆ. ಎರಡು ವಾರಗಳಲ್ಲಿ ಸೇವೆ ಆರಂಭವಾಗುವ ಸಾಧ್ಯತೆ ಇದೆ.ಡಾ.ಈರಣ್ಣ ಪಟ್ಟೇದ, ಮುಖ್ಯಸ್ಥ, ರೇಡಿಯಾಲಜಿ ವಿಭಾಗ, ಬಿಮ್ಸ್
15 ದಿನಗಳಲ್ಲಿ ಆಂಜಿಯೊಪ್ಲಾಸ್ಟಿ ಆರಂಭ
‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದ್ರೋಗ ತಪಾಸಣೆಗೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಇದೆ. ಸದ್ಯಕ್ಕೆ ಆ್ಯಂಜಿಯೊಪ್ಲಾಸ್ಟಿ ಮಾತ್ರ ಮಾಡಲು ಸಾಧ್ಯ. ಬಿಪಿ ಶುಗರ್ ಮುಂತಾದ ಒತ್ತಡಗಳಿಂದ ಹೃದಯನಾಳ ಬಂದಾಗಿ ಹೃದಯಾಘಾತ ಸಂಭವಿಸಿದವರಿಗೆ ಇಲ್ಲಿ ಸ್ಟೆಂಟ್ ಅಲವಡಿಸಲಾಗುತ್ತದೆ. ಇನ್ನು 15 ದಿನಗಳಲ್ಲಿ ಅನುಮತಿ ಸಿಗಲಿದ್ದು ಚಿಕಿತ್ಸೆ ಆರಂಭವಾಗಲಿದೆ’ ಎನ್ನುವುದು ಬಿಮ್ಸ್ ನಿರ್ದೇಶಕ ಡಾ.ಅಶೋಕ ಶೆಟ್ಟಿ ಹೇಳಿಕೆ. ‘ಕಾರ್ಡಿಯಾಲಾಜಿಸ್ಟ್ ಕಾರ್ಡಿಯೊ ಗ್ಯಾಸ್ಟ್ರೊ ಎಂಟರಾಲಾಜಿಸ್ಟ್ ಸರ್ಜಿಕಲ್ ಗ್ಯಾಸ್ಟ್ರೊ ಎಂಟರಾಲಾಜಿಸ್ಟ್ ನ್ಯೂರೋ ಸರ್ಜನ್ ನ್ಯೂರಾಲಾಜಿಸ್ಟ್ ಪಿಡಿಯಾಟ್ರಿಕ್ ಸರ್ಜನ್ ಹುದ್ದೆಗಳನ್ನು ಈಗಾಗಲೇ ನೇಮಕ ಮಾಡಿಕೊಳ್ಳಲಗಿದೆ. ಎರಡನೇ ಬಾರಿ ನೇಮಕಾತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಆಗ ಹೃದಯ ಶಸ್ತ್ರಚಿಕಿತ್ಸಕರ ಹುದ್ದೆ ನಿಯೋಜನೆ ಆಗಬಹುದು’ ಎಂಬುದು ಅವರ ಮಾತು.
ನಿಲ್ಲದ ಖಾಸಗಿ ಆಸ್ಪತ್ರೆಗಳ ಲಾಬಿ
ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸೆ ಘಟಕ ಆರಂಭಿಸದಂತೆ ತೆರೆಮರೆಯಿಂದ ಲಾಬಿ ಕೂಡ ನಡೆದಿದೆ. ಸದ್ಯ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಆ್ಯಂಜಿಯೊಪ್ಲಾಸ್ಟಿಗೆ ಕನಿಷ್ಠ ₹1.50 ಲಕ್ಷ ವೆಚ್ಚವಾಗುತ್ತದೆ. ಮುಂಚೆ ಸ್ಟೆಂಟ್‌ಗಳಿಗೆ ₹70 ಸಾವಿರದಿಂದ ₹1.40 ಲಕ್ಷ ದರವಿತ್ತು. ಕೇಂದ್ರ ಸರ್ಕಾರ ಸ್ಟೆಂಟ್‌ಗಳ ದರವನ್ನು ₹30 ಸಾವಿರಕ್ಕೆ ಇಳಿಸಿತು. ಆಗ ಖಾಸಗಿ ಆಸ್ಪತ್ರೆಗಳು ₹30 ಸಾವಿರ ಇದ್ದ ಚಿಕಿತ್ಸಾ ವೆಚ್ಚವನ್ನು ₹80 ಸಾವಿರಕ್ಕೆ ಹೆಚ್ಚಿಸಿದವು. ಮೊದಲಿದ್ದಷ್ಟೇ ಚಿಕಿತ್ಸಾ ವೆಚ್ಚ ಮತ್ತೂ ಮುಂದುವರಿಯಿತು. ಹೀಗಾಗಿ ಯಾರ ಬಳಿ ಹಳದಿ ಪಡಿತರ ಚೀಟಿ ಇಲ್ಲವೋ ಅವರು ಲಕ್ಷ ಲಕ್ಷ ಸುರಿದೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿದೆ. ಈ ಅವಸ್ಥೆಯಿಂದ ಬಡವರನ್ನು ದೂರ ಮಾಡಲು ಜಿಲ್ಲಾಸ್ಪತ್ರೆಯಲ್ಲೇ ಹೃದಯ ಶಸ್ತ್ರಚಿಕಿತ್ಸೆ ವಿಭಾಗ ತೆರೆಯಬೇಕು ಎಂಬ ಬೇಡಿಕೆ ಮಾತ್ರ ಇನ್ನೂ ಈಡೇರಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.