ಉಗರಗೋಳ ಗ್ರಾಮಕ್ಕೆ ಹಳ್ಳದ ನೀರು ನುಗ್ಗಿದ್ದು, ನಾಲ್ಕೈದು ದ್ವಿಚಕ್ರ ವಾಹನ ತೇಲಿಕೊಂಡು ಹೋಗಿವೆ
ಉಗರಗೋಳ (ಬೆಳಗಾವಿ ಜಿಲ್ಲೆ): ಗ್ರಾಮದಲ್ಲಿ ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದಾಗಿ ಉಗರಗೋಳ–ಯಲ್ಲಮ್ಮನಗುಡ್ಡ ಮಾರ್ಗದಲ್ಲಿನ ಹಳ್ಳ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಸಂಚಾರ ಸ್ಥಗಿತಗೊಂಡಿದ್ದು, ಸಾವಿರಾರು ಭಕ್ತರು ಪರದಾಡಿದರು.
ಆಗಸ್ಟ್ 9ರಂದು ಯಲ್ಲಮ್ಮನಗುಡ್ಡದಲ್ಲಿ ನೂಲು ಹುಣ್ಣಿಮೆ ಅಂಗವಾಗಿ ಜಾತ್ರೆ ನೆರವೇರಲಿದೆ. ಇದಕ್ಕಾಗಿ ಶುಕ್ರವಾರ ಸಂಜೆಯಿಂದಲೇ ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಂದ ಉಗರಗೋಳ ಮಾರ್ಗವಾಗಿ ಗುಡ್ಡಕ್ಕೆ ಭಕ್ತರ ದಂಡು ಹರಿದುಬರುತ್ತಿದೆ.
ಆದರೆ, ಮಧ್ಯಾಹ್ನ 3ರಿಂದ ಎರಡು ತಾಸಿಗೂ ಅಧಿಕ ಹೊತ್ತು ಧಾರಾಕಾರ ಮಳೆಯಾಗಿ ಸಂಪರ್ಕ ಕಡಿತಗೊಂಡಿದ್ದು, ಹಳ್ಳದ ಎರಡೂ ಬದಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಕೆಲವು ಭಕ್ತರು ಸುತ್ತು ಬಳಸಿ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುತ್ತಿದ್ದಾರೆ.
ಇನ್ನೂ ಕೆಲವರು ಅಪಾಯವನ್ನೂ ಲೆಕ್ಕಿಸದೆ, ಹಳ್ಳದ ನೀರಿನಲ್ಲೇ ದಾಟುತ್ತಿರುವುದು ಕಂಡುಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.