ADVERTISEMENT

ಅಂತಃಕರಣ ಸ್ಪಂದನೆಯೂ ದಾನ: ಸುಧಾ ಮೂರ್ತಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 13:08 IST
Last Updated 6 ಜುಲೈ 2021, 13:08 IST
ಭಾರತೀಯ ಎಂಜಿನಿಯರ್‌ಗಳ ಸಂಸ್ಥೆ ಬೆಳಗಾವಿ ಸ್ಥಳೀಯ ಕೇಂದ್ರವು ಸೋಮವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಇನ್ಫೊಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಮಾತನಾಡಿದರು
ಭಾರತೀಯ ಎಂಜಿನಿಯರ್‌ಗಳ ಸಂಸ್ಥೆ ಬೆಳಗಾವಿ ಸ್ಥಳೀಯ ಕೇಂದ್ರವು ಸೋಮವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಇನ್ಫೊಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಮಾತನಾಡಿದರು   

ಬೆಳಗಾವಿ: ‘ದಾನಕ್ಕೂ ಹಣಕ್ಕೂ ಸಂಬಂಧವೇ ಇಲ್ಲ. ದುಡ್ಡು ಕೊಡುವುದೊಂದೇ ದಾನವಲ್ಲ. ಇನ್ನೊಬ್ಬರ ಸಮಸ್ಯೆಗೆ ಪ್ರೀತಿ, ಅಂತಃಕರಣದಿಂದ ಸ್ಪಂದಿಸುವುದೂ ದಾನವೇ’ ಎಂದು ಇನ್ಫೊಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಹೇಳಿದರು.

ಭಾರತೀಯ ಎಂಜಿನಿಯರ್‌ಗಳ ಸಂಸ್ಥೆ ಬೆಳಗಾವಿ ಸ್ಥಳೀಯ ಕೇಂದ್ರದಿಂದ ‘ಅವಶ್ಯವಿರುವವರಿಗೆ ಸಹಾಯ ಮಾಡುವುದೆ ಪರೋಪಕಾರ’ ಎಂಬ ವಿಷಯದ ಕುರಿತುಸೋಮವಾರ ಹಮ್ಮಿಕೊಂಡಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ಇಂದಿನ ಸ್ಥಿತಿಯಲ್ಲಿ ಮಧ್ಯಮ ವರ್ಗದ ಕುಟುಂಬಗಳ ಮೌಲ್ಯಗಳು ಅಗತ್ಯ ಎನಿಸುತ್ತವೆ. ಮನೆಯಲ್ಲಿ ಹೆಚ್ಚು ಜನರಿದ್ದು, ಸೌಲಭ್ಯಗಳು ಕಡಿಮೆ ಇದ್ದಾಗ ಹಂಚಿಕೊಳ್ಳುವ ಮತ್ತು ಪರಸ್ಪರ ಕಾಳಜಿ ವಹಿಸುವ ಗುಣ ಬೆಳೆಯುತ್ತದೆ’ ಎಂದರು.

ADVERTISEMENT

‘ಪರರಿಗೆ ಒಳ್ಳೆಯದನ್ನೇ ಬಯಸಬೇಕು. ಸ್ವಾರ್ಥಪರತೆ ಬಿಟ್ಟು ದಾನಿಗಳಾಗಬೇಕು. ಜೀವನದಲ್ಲಿ ಹಣ ಗಳಿಸುವುದು ಮುಖ್ಯವಲ್ಲ. ಜೀವನವನ್ನು ಅನುಭವಿಸುವುದು ಮಹತ್ವದ್ದು’ ಎಂದು ಹೇಳಿದರು.

‘ಕಷ್ಟದಲ್ಲಿರುವರಿಗೆ ನೆರವು ನೀಡಬೇಕು. ಅವರ ಸುಖ, ದುಃಖದಲ್ಲಿಯೂ ನಾವೂ ಪಾಲ್ಗೊಳ್ಳಬೇಕು. ದಾನ ನೀಡುವುದರಿಂದ ಮನಸ್ಸಿಗೆ ಸುಖ, ಸಂತೃಪ್ತಿ ಸಿಗುತ್ತದೆ. ದಾನ ನೀಡುವುದರ ಹಿಂದೆ ಯಾವುದೇ ನಿರೀಕ್ಷೆಗಳು ಇರಬಾರದು. ದಾನವು ನಮ್ಮನ್ನು ವಿನಮ್ರ ಮನುಷ್ಯರನ್ನಾಗಿ ಮಾಡುತ್ತದೆ. ನಿಜವಾಗಿಯೂ ಅರ್ಹತೆ ಮತ್ತು ಅಗತ್ಯ ಇರುವವರಿಗೆ ಸಲ್ಲಬೇಕು’ ಎಂದು ತಿಳಿಸಿದರು.

ಭಾರತೀಯ ಎಂಜಿನಿಯರ್‌ಗಳ ಸಂಸ್ಥೆ ಬೆಳಗಾವಿ ಸ್ಥಳೀಯ ಕೇಂದ್ರದ ಅಧ್ಯಕ್ಷ ರಮೇಶ ಜಂಗಲ ಅಧ್ಯಕ್ಷತೆ ವಹಿಸಿದ್ದರು. ಎಂಜಿನಿಯರ್‌ ವಿ.ಬಿ. ಜಾವೂರ, ವಿಟಿಯು ಕುಲಸಚಿವ ಪ್ರೊ.ಎ.ಎಸ್. ದೇಶಪಾಂಡೆ, ಪ್ರೊ.ಪ್ರಕಾಶ ಪಟ್ಟಣಶೆಟ್ಟಿ, ಡಾ.ಎಚ್.ಬಿ. ರಾಜಶೇಖರ, ಯುಎಸ್‌ಎ, ಯುಎಇ, ಆಸ್ಟ್ರೇಲಿಯಾ, ಸೌದಿ ಅರೇಬಿಯಾ ಮೊದಲಾದ ಕಡೆಗಳ ಗಣ್ಯರು ವೆಬ್‌ನಾರ್‌ನಲ್ಲಿ ಪಾಲ್ಗೊಂಡಿದ್ದರು.

ಬಿ.ಜಿ. ಧರೆನ್ನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.