ಬೆಳಗಾವಿ: ಬದಲಾದ ಜೀವನಶೈಲಿ ಹಾಗೂ ಅನಿಯಮಿತ ಆಹಾರ ಸೇವನೆಯಿಂದ ಕಾಮಾಲೆ (ಹೆಪಟೈಟಸ್ ಬಿ ಹಾಗೂ ಹೆಪಟೈಟಸ್ ಸಿ) ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಕಳೆದೊಂದು ವರ್ಷದಲ್ಲಿ ವಿಭಾಗದ ನಾಲ್ಕು ಜಿಲ್ಲೆಗಳ ಸುಮಾರು 50 ಸಾವಿರ ಜನರನ್ನು ತಪಾಸಣೆಗೆ ಒಳಪಡಿಸಿದಾಗ ಶೇ 7ರಷ್ಟು ಹೆಪಟೈಟಿಸ್ ಬಿ ಹಾಗೂ ಶೇ 2ರಷ್ಟು ಹೆಪಾಟೈಟಿಸ್ ಸಿ ಸೋಂಕಿನಿಂದ ಬಳಲುತ್ತಿರುವುದು ಕಂಡುಬಂದಿದೆ.
ಇಲ್ಲಿನ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ತಪಾಸಣೆಗೊಳ್ಪಟ್ಟ ಮಧುಮೇಹಿಗಳಲ್ಲಿ ಶೇ 40ರಷ್ಟು ರೋಗಿಗಳಲ್ಲಿ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ಲಕ್ಷಣಗಳು ಕಂಡುಬಂದಿವೆ. ಶೇ 20ರಷ್ಟು ಜನರಲ್ಲಿ ಗಂಭೀರವಾದ ಸ್ಥಿತಿಯನ್ನು ತಂದೊಡ್ಡಿದೆ. ಶೇ 20ರಷ್ಟು ಯುವಕರು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿರುವುದು ಆತಂಕಕಾರಿ.
ನಾವು ಸೇವಿಸುವ ಆಹಾರ ಜೀರ್ಣಿಸಲು ಅನುವಾಗುವ ಪಿತ್ತರಸವನ್ನು, ದೇಹದ ಶಕ್ತಿಗೆ ಸಕ್ಕರೆ ಅಂಶ ಹಾಗೂ ಪೋಷಕಾಂಶಗಳನ್ನು ಉತ್ಪಾದಿಸಿ, ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕುವು ಕಾರ್ಯ ಮಾಡುವುದು ಯಕೃತ್ತು (ಲೀವರ್). ರೋಗನಿರೋಧಕ ನಿಯಂತ್ರಣ ಸೇರಿದಂತೆ 500ಕ್ಕೂ ಹೆಚ್ಚು ಅಗತ್ಯ ಕಾರ್ಯಗಳನ್ನು ಇದು ನಿರ್ವಹಿಸುತ್ತದೆ. ಆಹಾರ ಪದ್ದತಿ, ದೈಹಿಕ ಚಟುವಟಿಕೆ ಇಲ್ಲದಿರುವುದರಿಂದ ಬೊಜ್ಜು, ಮಧುಮೇಹ ಮತ್ತು ಮದ್ಯಪಾನದಿಂದ ಯಕೃತ್ತಿನ ಮೇಲೆ ಪೆಟ್ಟು ಬೀಳುತ್ತಿದೆ ಎಂದು ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹಿರಿಯ ಗ್ಯಾಸ್ಟ್ರೋ ಎಂಟ್ರಾಲಾಜಿಸ್ಟ್ ಡಾ.ಸಂತೋಷ ಹಜಾರೆ ಹೇಳುತ್ತಾರೆ.
ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದಂತೆ ವಿಶ್ವದಲ್ಲಿ ಸುಮಾರು 254 ಮಿಲಿಯನ್ ಜನ ಹೆಪಟೈಟಿಸ್ ಬಿ ಸೋಂಕಿನಿಂದ ಬಳಲುತ್ತಿದ್ದು, ಪ್ರತಿವರ್ಷ ಸುಮಾರು 1.5 ಮಿಲಿಯನ್ ರೋಗಿಗಳು ಕಂಡುಬರುತ್ತಿದ್ದಾರೆ. 2022ರಲ್ಲಿ ಸುಮಾರು 101 ಮಿಲಿಯನಗಿಂತ ಹೆಚ್ಚು ಜನರು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅದರಲ್ಲಿ ಮುಖ್ಯವಾಗಿ ಲೀವರ್ ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಹೆಪಟೈಟಿಸ್ ಬಿ ಸೋಂಕು ಹರಡುವಿಕೆ ಅಧಿಕವಾಗಿದ್ದು, ಸುಮಾರು 40 ಮಿಲಿಯನ್‌ಗೂ ಅಧಿಕ ಜನ ಇದರಿಂದ ಬಳಲುತ್ತಿದ್ದಾರೆ. ಒಮ್ಮೆ ಸೋಂಕಿಗೊಳಗಾದ ವ್ಯಕ್ತಿಯು ನಿರಂತರವಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಆದರೆ ಗುಣಮುಖ ಅಸಾಧ್ಯ. ಹೆಪಟೈಟಿಸ್ ಬಿ ಯನ್ನು ಲಸಿಕೆಯಿಂದ ಸಂಪೂರ್ಣವಾಗಿ ತಡೆಗಟ್ಟಬಹುದು. ಪ್ರಾರಂಭಿಕ ಹಂತದಲ್ಲಿ ಹೆಪಟೈಟಿಸ್ ಸಿ ವೈರಸ್ ಸೋಂಕುಗಳನ್ನು ಕಂಡುಹಿಡಿದರೆ ಲಭ್ಯವಿರುವ ಅತ್ಯಾಧುನಿಕ ಚಿಕಿತ್ಸೆಯಿಂದ ಗುಣಪಡಿಸಬಹುದು ಎನ್ನುತ್ತಾರೆ ಅವರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ದೂರದೃಷ್ಟಿಯಿಂದಾಗಿ, ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗವು ಯಕೃತ್ತಿನ ಆರೈಕೆಯಲ್ಲಿ ಗುಣಮಟ್ಟ ಸಾಧಿಸಿದೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು 18 ರೋಗಿಗಳಿಗೆ ಲೀವರ್ ಕಸಿ ಮಾಡಿ ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದೆ.
–ಬಸವರಾಜ ಸೊಂಟನವರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.