ಬೆಳಗಾವಿ: ಇಲ್ಲಿನ ಪೊಲೀಸ್ ಕೇಂದ್ರಸ್ಥಾನದಲ್ಲಿರುವ ಹಜರತ್ ಸೈಯದ್ ಕೈಸರಶಾಹ್‌ವಲಿ ದರ್ಗಾದಲ್ಲಿ ಮೂರು ದಿನಗಳವರೆಗೆ ನಡೆಯಲಿರುವ ಉರುಸ್‌ಗೆ ಚಾಲನೆ ದೊರೆತಿದೆ.
ಈ ಪರಿಸರದಲ್ಲಿ ದರ್ಗಾ ಭಾವೈಕ್ಯತೆ ಕೇಂದ್ರವಾಗಿ ಗುರುತಿಸಿಕೊಂಡಿದೆ. ಕೋವಿಡ್–19 ಹಿನ್ನೆಲೆಯಲ್ಲಿ ಕಳೆದೆರಡು ವರ್ಷ ಸಾಂಕೇತಿಕವಾಗಿ ಉರುಸ್ ಆಚರಿಸಲಾಗಿತ್ತು. ಕೊರೊನಾ ಪರಿಣಾಮ ತಗ್ಗಿದ್ದರಿಂದ ಈ ಬಾರಿ ಹಿಂದೂ–ಮುಸ್ಲಿಮರು ಒಟ್ಟಾಗಿ ಸೇರಿ ಸಡಗರದಿಂದ ಉರುಸ್ ಆಚರಿಸಿದರು. ಭಾವೈಕ್ಯದ ಸಂದೇಶ ರವಾನಿಸಿದರು.
ಶುಕ್ರವಾರ ರಾತ್ರಿಯಿಂದಲೇ ವಿದ್ಯುತ್ ದೀಪಗಳ ಅಲಂಕಾರದಿಂದ ದರ್ಗಾ ಝಗಮಗಿಸುತ್ತಿದ್ದು, ಹಿಂದೂ–ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿ ಬಂದು ಧಾರ್ಮಿಕ ಕಾರ್ಯ ನೆರವೇರಿಸಿ ಭಾವೈಕ್ಯ ಮೆರೆದರು. ತಮ್ಮ ಇಷ್ಟಾರ್ಥ ಈಡೇರಿಸಿದ ದೇವರ ಹರಕೆ ತೀರಿಸಿ ಭಕ್ತಿ ಸಮರ್ಪಿಸಿದರು. ಬೆಳಗಾವಿ ಜೊತೆಗೆ ನೆರೆಯ ಮಹಾರಾಷ್ಟ್ರ ಮತ್ತು ಗೋವಾದಿಂದಲೂ ಭಕ್ತಸಮೂಹ ಬಂದಿದ್ದು ವಿಶೇಷ.
ಸಮಾಜದಲ್ಲಿ ಸಾಮರಸ್ಯದಿಂದ ಬದುಕಿ:‘ಎಲ್ಲ ಧರ್ಮಗಳೂ ಸಾಮರಸ್ಯ, ಶಾಂತಿ ಹಾಗೂ ಸಮಾನತೆ ಸಾರಿವೆ. ಹಾಗಾಗಿ ಸಮಾಜದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಫುರ್ಖಾನ್ ನಬ್ಬುವಾಲೆ ಹೇಳಿದರು.
ದರ್ಗಾದಲ್ಲಿ ನಡೆದ ಗಂಧ ಏರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾನಗರಪಾಲಿಕೆ ಸದಸ್ಯ ಬಾಬಾಜಾನ ಮತವಾಲೆ, ‘ಹಲವು ವರ್ಷಗಳಿಂದ ಇಲ್ಲಿ ಸರ್ವಧರ್ಮೀಯರೂ ಒಂದಾಗಿ ಉರುಸ್ ಆಚರಿಸುತ್ತಿರುವುದು ಶ್ಲಾಘನೀಯ. ಈ ಪರಂಪರೆಯನ್ನು ಮುಂದುವರಿದುಕೊಂಡು ಹೋಗಬೇಕು’ ಎಂದು ಆಶಿಸಿದರು.
ಮುಖಂಡರಾದ ಜಾವೇದ್ ದೇಸಾಯಿ, ವಾಸೀಮ್ ಪಟೇಲ್, ರಿಜ್ವಾನ್ ದಳವಾಯಿ, ಇರ್ಫಾನ್ ಮಕಾನದಾರ, ಮಹಮ್ಮದ್‌ರಫಿಕ್ ಕುನ್ನಿಭಾವಿ, ಎ.ಎ. ಕಿಲ್ಲೇದಾರ್, ಮಹಮ್ಮದ್‌ಸಲೀಮ್ ಕಲಾರಕೊಪ್ಪ, ಇಮ್ರಾನ್ ಹಬೀಬ್, ಮಹಮ್ಮದ್ ಲಡಾಭಾಯಿ, ಮೈನುದ್ದೀನ್ ಪಟೇಲ್, ಸಾದಿಕ್ ದೇಸಾಯಿ, ಆವೇಜ್ ದೇಸಾಯಿ, ಲತೀಫ್ ಮುಲ್ಲಾ, ಎ.ಎ.ಬುಖಾರಿ, ಮೈನುದ್ದೀನ್ ಮೊಗಲ್ ಇದ್ದರು.
ದರ್ಗಾ ಸುತ್ತಲಿನ ಪ್ರದೇಶದಲ್ಲಿ ಹಲವಾರು ಆಟಿಕೆಗಳು ಬಂದಿದ್ದು, ಮಕ್ಕಳು, ಯುವಕ–ಯುವತಿಯರು ಆಟವಾಡಿ ಸಂಭ್ರಮಪಟ್ಟರು. ಇಲ್ಲಿ ತಲೆ ಎತ್ತಿರುವ ಗೂಡಂಗಡಿಗಳಲ್ಲಿ ವ್ಯಾಪಾರ–ವಹಿವಾಟು ಜೋರಾಗಿತ್ತು.
ಮಹಾಪ್ರಸಾದ ವಿತರಣೆ ಮೇ 29ರಂದು:‘ಪ್ರತಿ ವರ್ಷ ಉರುಸ್ ಹಿನ್ನೆಲೆಯಲ್ಲಿ ಪೊಲೀಸರಿಂದ ನಾಟಕ ಪ್ರದರ್ಶನ ಹಾಗೂ ವಿವಿಧ ಕಲಾತಂಡಗಳಿಂದ ಕವ್ವಾಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ರಾತ್ರಿ ಧ್ವನಿವರ್ಧಕ ಬಳಸದಂತೆ ನ್ಯಾಯಾಲಯ ಆದೇಶಿಸಿರುವುದರಿಂದ ಅವುಗಳನ್ನು ರದ್ದುಪಡಿಸಲಾಗಿದೆ. ಮೇ 29ರಂದು ಮಧ್ಯಾಹ್ನ ಭಕ್ತರಿಗೆ ಮಹಾಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ’ ಎಂದು ದರ್ಗಾ ಸಮಿತಿಯವರು ತಿಳಿಸಿದದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.