ಚಿಕ್ಕೋಡಿ: ಪಟ್ಟಣದಿಂದ 4 ಕಿ.ಮೀ ದೂರದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ (ಜಿಟಿಟಿಸಿ) ಆವರಣದಲ್ಲಿ ವಿದ್ಯಾರ್ಥಿನಿಯರಿಗಾಗಿ ವಸತಿನಿಲಯ ವ್ಯವಸ್ಥೆ ಇಲ್ಲ. ಇದೇ ಕಾರಣಕ್ಕೆ ಪ್ರತಿ ವರ್ಷ ನೂರಾರು ವಿದ್ಯಾರ್ಥಿನಿಯರು ಉಚಿತ ಕೌಶಲ ತರಬೇತಿಯಿಂದ ವಂಚಿತರಾಗುತ್ತಿದ್ದಾರೆ.
ಕೇಂದ್ರ ಬಸ್ ನಿಲ್ದಾಣದಿಂದ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ ತರಗತಿಗೆ ಹಾಜರಾಗಲು ವಿದ್ಯಾರ್ಥಿನಿಯರು ಪರದಾಡುವಂತಾಗಿದೆ.
2018ರಲ್ಲಿ ಪ್ರಾರಂಭವಾಗಿರುವ ಜಿಟಿಟಿಸಿ ಕೇಂದ್ರದಲ್ಲಿ ತರಬೇತಿ ಪಡೆಯಲು ಅತ್ಯಾಧುನಿಕ ಯಂತ್ರೋಪಕರಣ, ತರಗತಿ ಕೋಣೆ, ಸಭಾಂಗಣ, ಬಾಲಕರ ವಸತಿ ನಿಲಯವಿದ್ದು, ಬಾಲಕಿಯರಿಗೆ ವಸತಿ ನಿಲಯ ಸೌಲಭ್ಯವಿಲ್ಲ.
ಕೇಂದ್ರದಲ್ಲಿ ಪ್ರತಿ ವರ್ಷ ಪೂರ್ಣಾವಧಿ ಕೋರ್ಸ್ ತರಬೇತಿ ಪಡೆಯಲು 60 ವಿದ್ಯಾರ್ಥಿನಿಯರು (ಶೇ 33 ಮಹಿಳಾ ಮೀಸಲಾತಿ) ಸೇರಿದಂತೆ 180 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದೆ. ಅಲ್ಪಾವಧಿಯ ಹಲವು ಕೋರ್ಸ್‌ಗಳು ಇಲ್ಲಿ ಲಭ್ಯವಿವೆ.
ಕೇಂದ್ರದಲ್ಲಿ 3 ವರ್ಷ ತರಬೇತಿ ಹಾಗೂ 1 ವರ್ಷ ಕಡ್ಡಾಯ ಕೈಗಾರಿಕಾ ತರಬೇತಿ ಒಳಗೊಂಡ ಪೂರ್ಣಾವಧಿಯ ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್, ಡಿಪ್ಲೊಮಾ ಇನ್ ಫ್ರೀಸಿಜನ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್ ಕೋರ್ಸ್‌ಗಳಿವೆ.
ಕಳೆದ ಮೂರು ವರ್ಷಗಳಲ್ಲಿ ಪೂರ್ಣಾವಧಿ ಕೋರ್ಸ್ ಪೂರೈಸಿದ 520 ವಿದ್ಯಾರ್ಥಿಗಳು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ.
ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರ ಪ್ರಯತ್ನದಿಂದ ಪ್ರಾರಂಭವಾಗಿರುವ ಜಿಟಿಟಿಸಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸೌಲಭ್ಯವಿದೆ.
ಒಂದೆಡೆ ವಸತಿ ನಿಲಯ ಸೌಲಭ್ಯವೂ ಇಲ್ಲ, ಇನ್ನೊಂದೆಡೆ ಬಸ್ ಸೌಕರ್ಯವೂ ಇಲ್ಲ. ಇದರಿಂದ ಗ್ರಾಮೀಣ ವಿದ್ಯಾರ್ಥಿನಿಯರು ಅವಕಾಶ ವಂಚಿತರಾಗುತ್ತಿದ್ದಾರೆ.
ವಿದ್ಯಾರ್ಥಿನಿಯರಿಗೆ ವಸತಿ ನಿಲಯ ಹಾಗೂ ಬಸ್ ಸೌಕರ್ಯವಿಲ್ಲದೇ ಉಚಿತ ತರಬೇತಿ ಪಡೆದುಕೊಳ್ಳಲು ಪರದಾಡುತ್ತಿದ್ದೇವೆ. ಹಾಸ್ಟೆಲ್ ಮಂಜೂರು ಮಾಡಿ.-ರುಕ್ಸಾರಬಾನು ಕಾಲೆಖಾಜಿ, ಮೆಕಾಟ್ರಾನಿಕ್ಸ್ ಕೋರ್ಸ್ ವಿದ್ಯಾರ್ಥಿನಿ
ಬಾಲಕಿಯರ ಹಾಸ್ಟೆಲ್ ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಶೀಘ್ರದಲ್ಲಿ ವಸತಿ ನಿಲಯ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ-ಶೀತಲಕುಮಾರ ದೇವಲಾಪೂರ, ಪ್ರಾಚಾರ್ಯ ಜಿಟಿಟಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.