ADVERTISEMENT

ಕಾರ್ಯಕರ್ತರ ಥಳಿತ ಪ್ರಕರಣ ಖಂಡಿಸಿ ಪ್ರತಿಭಟನೆ: ಶ್ರೀರಾಮ ಸೇನೆ ಕಾರ್ಯಕರ್ತರು ವಶ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 11:05 IST
Last Updated 3 ಜುಲೈ 2025, 11:05 IST
<div class="paragraphs"><p>ಪ್ರಮೋದ ಮತಾಲಿಕ್ ಸೇರಿ ಹಲವರು ವಶಕ್ಕೆ</p></div>

ಪ್ರಮೋದ ಮತಾಲಿಕ್ ಸೇರಿ ಹಲವರು ವಶಕ್ಕೆ

   

– ಪ್ರಜಾವಾಣಿ ಚಿತ್ರ

ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಇಂಗಳಿಯಲ್ಲಿ ತಮ್ಮ ಸಂಘಟನೆಯ ಐವರು ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಥಳಿಸಿರುವುದನ್ನು ಖಂಡಿಸಿ, ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಶ್ರೀರಾಮ ಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ADVERTISEMENT

ಮರಕ್ಕೆ ಕಟ್ಟಿ ಥಳಿಸಿದ ಎಲ್ಲ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಇಲ್ಲದಿದ್ದರೆ ‘ಇಂಗಳಿ ಚಲೋ’ ಹೋರಾಟ ಕೈಗೊಳ್ಳುವುದಾಗಿ ಶ್ರೀರಾಮ ಸೇನೆ ಮುಖಂಡರು ತಿಳಿಸಿದ್ದರು.

ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಮಳೆಯಲ್ಲೇ ಮಾನವ ಸರಪಳಿ ನಿರ್ಮಿಸಿ, ರಾಜ್ಯ ಸರ್ಕಾರ ಮತ್ತು ಪೊಲೀಸ್‌ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು.

‘ಕಾರ್ಯಕರ್ತರನ್ನು ಥಳಿಸಿದ ವಿಡಿಯೊದಲ್ಲಿರುವ ಎಲ್ಲ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಪ್ರಮುಖ ಆರೋಪಿಗಳನ್ನು ಗಡೀಪಾರು ಮಾಡಬೇಕು’ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರಿಗೆ ಮನವಿ ಸಲ್ಲಿಸಿದರು.

‘ಹಲ್ಲೆಗೆ ಒಳಗಾದ ಗೋರಕ್ಷಕರ ಚಿಕಿತ್ಸೆ ವೆಚ್ಚ ಭರಿಸುವ ಜತೆಗೆ, ಅವರಿಗೆ ರಕ್ಷಣೆ ಮತ್ತು ಪರಿಹಾರ ಕೊಡಬೇಕು. ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗೋಹತ್ಯೆ, ಗೋ ಸಾಕಾಣಿಕೆ ತಡೆಯುವ ಜತೆಗೆ, ಅಕ್ರಮ ಕಸಾಯಿಖಾನೆಗಳನ್ನು ಬಂದ್‌ ಮಾಡಬೇಕು. ಅಕ್ರಮವಾಗಿ ಗೋಸಾಗಣೆ ತಡೆಯಲು ತಾಲ್ಲೂಕಿಗೊಂದು ಗೋಪಡೆ ಮತ್ತು ಚೆಕ್‌ಪೋಸ್ಟ್‌ ಆರಂಭಿಸಬೇಕು. ಗೋವುಗಳನ್ನು ರಕ್ಷಿಸುವವರಿಗೆ ರಕ್ಷಣೆ ನಿಡಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ, ‘ಸಮಾಜಕ್ಕೆ ಅನೇಕ ಕೊಡುಗೆ ನೀಡುವ ಗೋವುಗಳ ಹತ್ಯೆ ಮಾಡುವುದು ಸರಿಯಲ್ಲ. ಗೋರಕ್ಷಕರ ಮೇಲೆ ಹಲ್ಲೆ ಮಾಡಿದ ಎಲ್ಲ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ ನಾಯಕರನ್ನು ಅದೇ ಮರಕ್ಕೆ ಕಟ್ಟಿ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.

ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ, ‘ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ಆದರೂ, ಗೋವುಗಳ ಹತ್ಯೆ ನಿರಂತರವಾಗಿ ನಡೆದಿದೆ. ಇದನ್ನು ತಡೆಯಲು ಹೋದವರನ್ನೇ ಪೊಲೀಸರು ಹೆದರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಇಲ್ಲಿಂದ ಇಂಗಳಿಗೆ ಹೊರಟಿದ್ದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ‍ಪಡೆದರು. ಆಗ ಪರಸ್ಪರರ ಮಧ್ಯೆ ತಳ್ಳಾಟ, ನೂಕಾಟ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.