ADVERTISEMENT

ಬೈಲಹೊಂಗಲ: ಅನಾಥ ಶವಗಳ ‘ಬಂಧು’ ಮಲ್ಲಿಕಾರ್ಜುನ

ಪುಟ್ಟ ಗೂಡಿನಲ್ಲಿ ವಾಸವಾದ ಈ ಬಡವ, ಸಮಾಜ ಸೇವೆಯಲ್ಲಿ ಸಿರಿವಂತ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 4:32 IST
Last Updated 26 ನವೆಂಬರ್ 2022, 4:32 IST
ಉರಗ ತಜ್ಞ ಮಲ್ಲಿಕಾರ್ಜನ ಗಾಣಗಿ ಹಾವು ಹಿಡಿಯುವ ಕಾಯಕದಲ್ಲಿರುವುದು
ಉರಗ ತಜ್ಞ ಮಲ್ಲಿಕಾರ್ಜನ ಗಾಣಗಿ ಹಾವು ಹಿಡಿಯುವ ಕಾಯಕದಲ್ಲಿರುವುದು   

ಬೈಲಹೊಂಗಲ:ತಾಲ್ಲೂಕಿನ ಅರವಳ್ಳಿ ಗ್ರಾಮದವರಾಗಿರುವ ಮಲ್ಲಿಕಾರ್ಜುನ ಗಾಣಗಿ ಎಂದರೆ ಪೊಲೀಸ್ ಮತ್ತು ಅಗ್ನಿಶಾಮಕದಳ ಅಧಿಕಾರಿಗಳು, ಸಿಬ್ಬಂದಿ, ಸಂಘ ಸಂಸ್ಥೆ, ಸಾರ್ವಜನಿಕರಿಗೆ ಎಲ್ಲಿಲ್ಲದ ಪ್ರೀತಿ. ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡುವ ಮೂಲಕ ಅವರು ಜನರಿಗೆ ಆಪ್ತವಾಗಿದ್ದಾರೆ.

ಅಪರೂಪದ ಕಾಯಕದ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರೊಬ್ಬರು ಜೊತೆಗಿದ್ದರೆ ಸಾಕು ಎಲ್ಲ ಕಾರ್ಯಕ್ಕೂ ಧೈರ್ಯ, ಸ್ಫೂರ್ತಿ ಬರುತ್ತದೆ ಎನ್ನುವುದು ಎಲ್ಲ ಅಭಿಮತ. ಒಂದೇ ಒಂದು ಕರೆಗೆ ಸ್ಥಳಕ್ಕೆ ಧಾವಿಸುವ ಅವರು ಹಾವು ಹಿಡಿಯುವಲ್ಲಿ, ಅನಾಥ ಶವಗಳ ಸಂಸ್ಕಾರ ಮಾಡು ವಲ್ಲಿ ಎತ್ತಿದ ಕೈ.

ಸಾಮಾಜಿಕ ಸೇವೆ: ಮಲ್ಲಿಕಾರ್ಜುನ ಬಾಲ್ಯದಲ್ಲಿಯೇ ತಂದೆ ಜೊತೆಗೂಡಿ ಹಾವು ಹಿಡಿಯುವದನ್ನು ಕಲಿತು ಸುರಕ್ಷಿತ ಸ್ಥಳಕ್ಕೆ ಬಿಡುವ ಕಾರ್ಯ ಕರಗತಗವಾಗಿಸಿಕೊಂಡಿದ್ದಾರೆ. ಕಳೆದ 35 ವರ್ಷಗಳಲ್ಲಿ ವಿವಿಧ ಜಾತಿಯ ಅಪಾರ ಸಂಖ್ಯೆಯ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾನೆ. ಹಾವು ರೈತನ ಸ್ನೇಹ ಜೀವಿ. ಅದನ್ನು ಹೊಡೆದು ಕೊಲ್ಲಬಾರದು. ಹಾವಿನ ಸಂತತಿ ಉಳಿಸಿ, ಬೆಳೆಸಬೇಕು ಎನ್ನುತ್ತಾರೆ ಮಲ್ಲಿಕಾರ್ಜುನ.

ADVERTISEMENT

ಕಳೆದ ಹತ್ತು ವರ್ಷಗಳಿಂದ ವಾರಸುದಾರರು ಸಿಗದ ಶವಗಳಿಗೆ ವಿಧಿ, ವಿಧಾನಗಳ ಮೂಲಕ ಶವ ಸಂಸ್ಕಾರ ನಡೆಸಿ
ಕೊಂಡು ಬರುತ್ತಿದ್ದಾರೆ. ಅದೆಷ್ಟೋ ದೇಹಗಳಿಗೆ ಮುಕ್ತಿದೊರಕಿಸಿದ ಪುಣ್ಯವಂತ ಎನಿಸಿಕೊಂಡಿದ್ದಾರೆ. ಯಾರಿಂದಲೂ ಏನನ್ನು ಅಪೇಕ್ಷೆ ಮಾಡದ ವ್ಯಕ್ತಿ. ಎಲ್ಲಕಾರ್ಯವನ್ನು ಉಚಿತವಾಗಿ ಮಾಡಿಕೊಡುತ್ತಾರೆ.

ಮನೆಯೇ ಆಸರೆ: ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಅವರು ಒಂದು ಅವಧಿಗೆ ಆಯ್ಕೆಯಾಗಿದ್ದರು. ತಮ್ಮ ಅಧಿಕಾರ ಅವಧಿಯಲ್ಲಿಯೂ ಅವರು ಸ್ವಾರ್ಥ ಬಿಟ್ಟು ಊರ ಜನರಿಗಾಗಿ ಕೆಲಸ ಮಾಡಿದರು. ಅಜ್ಜಿ, ತಾಯಿ ಅವರೊಂದಿಗೆ ಚಿಕ್ಕ ಗೂಡಿನಲ್ಲೇ ವಾಸವಾಗಿದ್ದಾರೆ.

ಅನಾಥ ಶವಗಳನ್ನು ಮುಂದೆ ನಿಂತು ಮಣ್ಣು ಮಾಡುವ ಮಲ್ಲಿಕಾರ್ಜುನ ಪೊಲೀಸ್ ಇಲಾಖೆಗೆ ಬಹಳ ಸಹಕಾರ ನೀಡಿರುವ ವ್ಯಕ್ತಿ.

‘ಒಂದು ಸಲ ಅವರಿಗೆ ಹಾವು ಹಿಡಿಯುವ ವೇಳೆ ಹಾವು ಕಚ್ಚಿತ್ತು. ಮೈ ಎಲ್ಲ ಹಸಿರಾಗಿತ್ತು. ಆಗ ಪೊಲೀಸ್ ಠಾಣೆ ಅಧಿಕಾರಿಗಳು, ಎಲ್ಲ ಸಿಬ್ಬಂದಿ ಆಸ್ಪತ್ರೆಗೆ ಧಾವಿಸಿ ಆರೋಗ್ಯ ವಿಚಾರಿಸಿದೆವು. ಭಗವಂತನ ಆಶೀರ್ವಾದಿಂದ ಪ್ರಾಣಕ್ಕೆ ಹಾನಿ ಆಗಲಿಲ್ಲ. ನಾವು ಮಾಡುವ ಒಳ್ಳೆಯ ಕೆಲಸಗಳೇ ನಮಗೆ ಆಶೀರ್ವಾದ ಎನ್ನುವುದಕ್ಕೆ ಇದೇ ವ್ಯಕ್ತಿ ಉದಾಹರಣೆ’ ಎಂದು ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಮಲ್ಲಿಕಾರ್ಜುನ ಅವರಿಂದ ಸಹಾಯ ಬೇಕಾದಲ್ಲಿ 99008306332 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.