ADVERTISEMENT

ಬೆಳಗಾವಿ ಉಪ ಚುನಾವಣೆ: ಏನೇ ಆದರೂ ನಾನೇ ಹೊಣೆ ಹೊರುವೆ ಎಂದ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 15:01 IST
Last Updated 31 ಮಾರ್ಚ್ 2021, 15:01 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ವಯಂಪ್ರೇರಿತವಾಗಿ ಸ್ಪರ್ಧೆ ಮಾಡಿದ್ದೇನೆ. ಇಲ್ಲಿ ಏನೇ ಆದರೂ ನಾನೇ ಹೊಣೆ ಹೊರುತ್ತೇನೆ. ಅಂತೆಯೇ ರಾಜ್ಯ ಹಾಗೂ ದೇಶದಲ್ಲಿ ಆರ್ಥಿಕ ಏರಿಳಿತವಾದರೆ ಸರ್ಕಾರವೇ ಹೊಣೆ ಆಗುತ್ತದೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜನರೇ ಸರ್ಕಾರದ ವೈಫಲ್ಯಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಈ ಬಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಜನರು ತಕ್ಕ ಉತ್ತರ ಕೊಡುತ್ತಾರೆ. ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ವಿವಿಧ ಪಕ್ಷ, ಇತರ ನಾಯಕರು, ಸಮಾಜದ ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರೆಲ್ಲ ಸಹಕಾರ ನೀಡಲಿದ್ದಾರೆ ಎಂಬ ಭರವಸೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿ ಸರ್ಕಾರದ ಸುಳ್ಳು ಹೇಳಿಕೆಗಳಿಂದ ಜನರು ಬೇಸತ್ತಿದ್ದಾರೆ’ ಎಂದರು.

‘ಜಿಲ್ಲೆಯ ಹಲವು ನಾಯಕರು ಪಕ್ಷ ಸೇರಲು ಅರ್ಜಿ ಕೊಟ್ಟಿದ್ದಾರೆ. ದಿನಾಂಕ ನಿಗದಿಪಡಿಸಿ ಅವರನ್ನು ಸೇರಿಸಿಕೊಳ್ಳಲಾಗುವುದು’ ಎಂದು ಕೆ‍ಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಅವರು ಪ್ರತಿಕ್ರಿಯಿಸಿದರು.

‘ಎರಡು ಲಕ್ಷದಿಂದ ಗೆದ್ದರೂ ಗೆಲವೆ. ಒಂದು ಮತದಿಂದ ಗೆದ್ದರೂ ಗೆಲುವೆ’ ಎಂದು ಮುಖ್ಯಮಂತ್ರಿ ಹೇಳಿಕೆಗೆ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.